ಮಲೆನಾಡಿನಲ್ಲಿ ವರುಣನ ಆರ್ಭಟ ಹೆಚ್ಚಾಗಿದ್ದು, ಈರುಳ್ಳಿ ಫಸಲು ನೀರು ಪಾಲಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ವ್ಯಾಪ್ತಿಯಲ್ಲಿ ನಡೆದಿದೆ.

ಭಾರಿ ಮಳೆಗೆ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಹೊಲಗದ್ದೆಗಳಲ್ಲಿ ನೀರು ತುಂಬಿಕೊಂಡಿದ್ದರೆ, ಸತತವಾಗಿ ಸುರಿದ ಮಳೆಗೆ ಈರುಳ್ಳಿ ಫಸಲು ನೀರು ಪಾಲಾಗಿದೆ. ಚಿಕ್ಕಮಗಳೂರು ತಾಲೂಕಿನ ಬೆಳವಾಡಿ, ಕುರುಬರಹಳ್ಳಿ, ನರಸೀಪುರ, ಮಾಚೇನಹಳ್ಳಿ ಸುತ್ತಮುತ್ತ ಧಾರಾಕಾರವಾಗಿ ಸುರಿದ ಮಳೆಗೆ ನೀರು ಹೊಲಗದ್ದೆಗಳಲ್ಲಿ ಪ್ರವಾಹದಂತೆ ತುಂಬಿಕೊಂಡಿದ್ದು, ಅಡಿಕೆ ಮತ್ತು ತೆಂಗಿನ ತೋಟಗಳು ಜಲಾವೃತಗೊಂಡಿವೆ. ರಾಗಿ ಮತ್ತು ಜೋಳದ ಬೆಳೆ ಕೂಡ ಹಾನಿಯಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಪೌಷ್ಟಿಕ ಆಹಾರ ಸೇವನೆಯೊಂದಿಗೆ ಉತ್ತಮ ಜೀವನ ಪದ್ಧತಿ ಅಳವಡಿಸಿಕೊಳ್ಳಬೇಕು; ಶಾಸಕಿ ನಯನ ಮೋಟಮ್ಮ
ಬೆಳವಾಡಿ ಕೆರೆ ಜುಲೈನಲ್ಲೇ ತುಂಬಿ ಕೋಡಿ ಬಿದ್ದಿತು. ಗುರುವಾರ ಸುರಿದ ಮಳೆಗೆ ಮತ್ತಷ್ಟು ನೀರು ಬಂದಿತ್ತು. ಶುಕ್ರವಾರ ಬೆಳಿಗ್ಗೆ ಭಾರಿ ಮಳೆ ಸುರಿದಿದ್ದರಿಂದ ನೀರು ಹೊಲಗದ್ದೆಗಳಿಗೆ ತುಂಬಿಕೊಂಡಿದೆ. ಅಡಿಕೆ ಮತ್ತು ತೆಂಗಿನ ತೋಟಗಳು ಜಲಾವೃತಗೊಂಡಿವೆ. ರಾಗಿ ಮತ್ತು ಜೋಳದ ಬೆಳೆ ಕೂಡ ಹಾನಿಯಾಗಿದೆ. ಭೂಮಿಯಿಂದ ಈರುಳ್ಳಿ ಗಡ್ಡೆ ಹೊರ ತೆಗೆದು ರೈತರು, ದರ ಕಡಿಮೆ ಇರುವುದರಿಂದ ಹೊಲದಲ್ಲೇ ರಾಶಿ ಹಾಕಿದ್ದರು. ಬೆಳಗಾಗುವಷ್ಟರಲ್ಲಿ ಈರುಳ್ಳಿ ನೀರಿನಲ್ಲಿ ಕೊಚ್ಚಿ ಹೋಗಿದ್ದು, ರೈತರಲ್ಲಿ ಕಣ್ಣೀರು ತರಿಸಿದೆ. ಈರುಳ್ಳಿ ಬೆಳೆಯಲು ಹಾಕಿದ್ದ ಶ್ರಮ, ಖರ್ಚು ಮಾಡಿದ್ದ ಹಣವೆಲ್ಲಾ ನೀರು ಪಾಲಾಗಿದೆ ಎಂದು ರೈತರು ಕಣ್ಣೀರಿಡುವ ಪರಿಸ್ಥಿತಿ ಎದುರಾಗಿದೆ.





