ಸೈಟ್ ಒಂದಕ್ಕೆ ಎನ್‌ಒಸಿ ನೀಡಲು ಹಣಕ್ಕೆ ಬೇಡಿಕೆ ಇಟ್ಟಿದ್ದ ಪಿಡಿಒ ಒಬ್ಬರು ಲಂಚ ಪಡೆಯುವಾಗ ಲೋಕಾಯುಕ್ತರಿಗೆ ‘ರೆಡ್‌ಹ್ಯಾಂಡ್’ಆಗಿ ಸಿಕ್ಕಿಬಿದ್ದಿದ್ದಾರೆ. ಚಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ತಂಗಲಿ ಗ್ರಾಮ ಪಂಚಾಯತಿ ಪಿಡಿಒ ನಂಜುಂಡಮ್ಮ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.
ತಂಗಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರಸ್ವತಿಪುರ ಗ್ರಾಮದ ನಿವಾಸಿ ತಿಮ್ಮಶೆಟ್ಟಿ ಎಂಬವರು ತಮ್ಮ ನಿವೇಶನಕ್ಕೆ ಎನ್‌ಒಸಿ ಪಡೆಯಲು ಅರ್ಜಿ ಸಲ್ಲಿಸಿದ್ದರು. ಆದರೆ, ಎನ್‌ಒಸಿ ಕೊಡಬೇಕೆಂದರೆ 10,000 ರೂ. ಲಂಚ ಕೊಡಬೇಕೆಂದು ಪಿಡಿಒ ನಂಜುಂಡಮ್ಮ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗಿದೆ.
ಪಿಡಿಒ ಲಂಚ ಬೇಡಿಕೆಯಿಂದ ಅಸಮಾಧಾನಗೊಂಡ ತಿಮ್ಮಶೆಟ್ಟಿ ಅವರು ಲೋಕಾಯುಕ್ತರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ತಿಮ್ಮಶೆಟ್ಟಿ ಅವರಿಗೆ ಹಣ ಕೊಟ್ಟು, ಅದನ್ನು ಲಂಚವಾಗಿ ನಂಜುಂಡಮ್ಮ ಅವರಿಗೆ ಕೊಡುವಂತೆ ಸೂಚಿಸಿದ್ದರು.
ಲೋಕಾಯುಕ್ತ ಪೊಲೀಸರ ಸೂಚನೆಯಂತೆ ತಿಮ್ಮಶೆಟ್ಟಿ ಅವರು ಗ್ರಾಮ ಪಂಚಾಯತಿಯಲ್ಲಿ ನಂಜುಂಡಮ್ಮ ಅವರಿಗೆ ಹಣ ನೀಡುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪಿಡಿಒ ನಂಜುಂಡಮ್ಮ ಅವರನ್ನು ರೆಡ್‌ಹ್ಯಾಂಡ್‌ಆಗಿ ಹಿಡಿದಿದ್ದಾರೆ.




