ಚಿಕ್ಕಮಗಳೂರು ಜಿಲ್ಲೆ ಕಡೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ ಎಸ್ ಆನಂದ್ ವಿರುದ್ಧ ವಾಟ್ಸಪ್ ಸ್ಟೇಟಸ್ ಹಾಕಿ ಆಕ್ರೋಶ ಹೊರಹಾಕಿದ ಮಹಿಳಾ ಪೇದೆ(ಕಾನ್ಸ್ಟೆಬಲ್)ಯೊಬ್ಬರನ್ನು ಅಮಾನತು ಮಾಡಲಾಡಿದೆ.
“ಕಡೂರು ಶಾಸಕರಿಗೆ ನನ್ನ ಧಿಕ್ಕಾರವಿರಲಿ. ನನಗೆ ಏನಾದರು ತೊಂದರೆ ಆದರೆ ಅದಕ್ಕೆ ಶಾಸಕರೇ ಕಾರಣ” ಎಂದು ಮಹಿಳಾ ಪೇದೆ ಲತಾ ಎಂಬುವರು ವಾಟ್ಸಪ್ ಸ್ಟೇಟಸ್ ಹಾಕಿದ್ದರು. ಇದಕ್ಕೆ ಸಂಬಂಧಿಸಿದ ಸ್ಕ್ರೀನ್ಶಾಟ್ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಅವರನ್ನು ಅಮಾನತು ಮಾಡಲಾಗಿದೆ.
ಲತಾ ಅವರು ಕಡೂರು ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರನ್ನು ಕಡೂರಿನಿಂದ ತರೀಕೆರೆಗೆ ವರ್ಗಾವಣೆ ಮಾಡಲಾಗಿದೆ. ಇದರಿಂದ ಅಸಮಾಧಾನಗೊಂಡಿರುವ ಲತಾ, ಇದು ದ್ವೇಷದ ವರ್ಗಾವಣೆ ಎಂದು ಶಾಸಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ, ವರ್ಗಾವಣೆ ವಿರೋಧಿಸಿ ಸಬ್ ಇನ್ಸ್ಪೆಕ್ಟರ್ ಜತೆಯೂ ಲತಾ ಮಾತಿನ ಚಕಮಕಿ ನಡೆಸಿದ್ದಾರೆಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಬಿಜೆಪಿ ಒಳಜಗಳ | ಪ್ರಭು ಚೌಹಾಣ್ ವಿರುದ್ಧ 100 ಕೋಟಿ ಮಾನಹಾನಿ ಕೇಸ್ : ಸಚಿವ ಭಗವಂತ ಖೂಬಾ
ಲತಾ ಅವರ ಈ ವರ್ತನೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರ ಗಮನಕ್ಕೆ ಬಂದಿದ್ದು, ಮಹಿಳಾ ಪೊಲೀಸ್ ಪೇದೆ ಲತಾ ಅವರನ್ನು ಅಮಾನತು ಮಾಡಿ ಎಸ್‌ಪಿ ಆದೇಶ ಹೊರಡಿಸಿದ್ದಾರೆ.
“ಚುನಾವಣೆ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಿದೇ ಓಡಾದಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಗೆ ಲತಾ ಅವರು ದಂಡ ವಿಧಿಸಿದ್ದರು. ಇದೇ ವಿಚಾರವಾಗಿ ಆನಂದ್ ಅವರು ಪೇದೆ ಜತೆ ಮಾತಿನ ಚಕಮಕಿ ನಡೆಸಿದ್ದ ವಿಡಿಯೋ ಈ ಹಿಂದೆ ವೈರಲ್ ಆಗಿತ್ತು. ಇದೇ ದ್ವೇಷಕ್ಕೆ ವರ್ಗಾವಣೆ ಮಾಡಿಸಿದ್ದಾರೆ” ಎಂದು ಹೇಳಲಾಗುತ್ತಿದೆ.




