ಐದು ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ ಚಿಕ್ಕಮಗಳೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ 22.11.2020 ರಂದು ಸಖರಾಯಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ದೊಡ್ಡಿಹಟ್ಟಿ ಗ್ರಾಮದಲ್ಲಿ ಪ್ರದೀಪ ಎಂಬುವವನನ್ನು ಆತನ ಹೆಂಡತಿ ರಾಗಿಣಿ (33) ಮತ್ತು ಪ್ರದೀಪನೊಂದಿಗೆ ಗಾರೆ ಕೆಲಸ ಮಾಡಿಕೊಂಡಿದ್ದ ಶ್ರೀನಿವಾಸ (33) ಸೇರಿಕೊಂಡು ವೇಲ್ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದ ಹಿನ್ನಲೆಯಲ್ಲಿ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
“ಈ ಪ್ರಕರಣದ ಆರೋಪಿಗಳನ್ನು ಬಂಧಿಸಿ ತನಿಖೆಯನ್ನು ಪೂರ್ಣಗೊಳಿಸಿದ ಕಡೂರು ವೃತ್ತದ ಅಂದಿನ ಸಿ.ಪಿ.ಐ.ಬಿ. ಎಸ್. ಮಂಜುನಾಥ್ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಆರೋಪ ಸಾಬೀತಾದ ಹಿನ್ನಲೆಯಲ್ಲಿ ಘನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಚಿಕ್ಕಮಗಳೂರು ನಿನ್ನೆ ಇಬ್ಬರೂ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ರೂ. 60,000 ದಂಡವನ್ನು ವಿಧಿಸಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಶುದ್ಧ ರಕ್ತದವರು ನಮ್ಮ ಜೊತೆ ಇದ್ದಾರೆ, ಬೆರಕೆಯವರು ಈ ರೀತಿ ಮಾತನಾಡುತ್ತಾರೆ: ಸಿ. ಟಿ. ರವಿ ತಿರುಗೇಟು
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಹೆಚ್ ಎಸ್ ಲೋಹಿತಾಶ್ವಚಾರ್ ರವರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಎ.ಎಸ್.ಐ. ದೇವೇಂದ್ರ ಕುಮಾರ್ ಎಸ್ ಓ ರವರು ನ್ಯಾಯಾಲಯದ ಕರ್ತವ್ಯ, ಪೊಲೀಸ್ ಸಿಬ್ಬಂದಿಗಳಾದ ವಸಂತ್ ಕುಮಾರ್ ಮತ್ತು ನಜೀರ್ ಬಿ ಎ ರವರು ತನಿಖಾ ಸಹಾಯಕರಾಗಿ ಹಾಗೂ ರೇಣುಕರಾಜ್ ರವರು ಪ್ರೋಸೆಸ್ ಕರ್ತವ್ಯ ನಿರ್ವಹಿಸಿದ್ದಾರೆ.





