ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಬಾಳೂರು ಗ್ರಾಮದಲ್ಲಿ ವಾಹನ ಚಲಾಯಿಸಲು ಮಗನಿಗೆ ಅವಕಾಶ ಮಾಡಿಕೊಟ್ಟ ತಂದೆ ಶಂಕರ್ ಅವರ ವಿರುದ್ಧ ಮೂಡಿಗೆರೆ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯವು 25,000 ರೂಪಾಯಿಗಳ ಭಾರಿ ದಂಡ ವಿಧಿಸಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಡಿ. 31ರಿಂದ ಜ.1ರವರೆಗೆ ಪ್ರವಾಸ ತಾಣಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸುವುದು ಕಾನೂನುಬಾಹಿರವಾಗಿದ್ದು, ಇದಕ್ಕೆ ಪೋಷಕರೇ ನೇರ ಹೊಣೆಗಾರರಾಗುತ್ತಾರೆ ಎಂಬ ಅಂಶವನ್ನು ಆಧರಿಸಿ ನ್ಯಾಯಾಲಯವು ಈ ಶಿಕ್ಷೆ ಪ್ರಕಟಿಸಿದೆ. ವಿಧಿಸಲಾದ ದಂಡದ ಮೊತ್ತವನ್ನು ಡಿಸೆಂಬರ್ 29ರಂದು ಸರ್ಕಾರದ ಖಾತೆಗೆ ಜಮಾ ಮಾಡಲಾಗಿದ್ದು ರಸ್ತೆ ಸಂಚಾರ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಮತ್ತು ಅಪ್ರಾಪ್ತ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಈ ತೀರ್ಪು ಪ್ರಕಟಿಸಲಾಗಿದೆ. ಈ ಕುರಿತು ಬಾಳೂರು ಪೊಲೀಸ್ ಠಾಣೆಯ ಪಿಎಸ್‌ಐ ದಿಲೀಪ್ ಕುಮಾರ್ ಅವರು ಈ ಹಿಂದೆ ಪ್ರಕರಣ ದಾಖಲಿಸಿದ್ದರು ಎನ್ನಲಾಗಿದೆ.





