ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ಮಂಗಳವಾರ ಸಂಜೆ ನೈತಿಕ ಪೊಲೀಸ್‌ಗಿರಿ ಪ್ರಕರಣ ನಡೆದಿರುವುದು ವರದಿಯಾಗಿದೆ. ಯುವತಿಗೆ ಚಾಕ್ಲೆಟ್ ಕೊಟ್ಟದ್ದಕ್ಕೆ ಮುಸ್ಲಿಂ ಯುವಕನೋರ್ವನ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ.
ಮಂಗಳವಾರ ಸಂಜೆ ವೇಳೆ ಹಿಂದೂ ಯುವತಿಯೋರ್ವಳಿಗೆ ಡೈರಿ ಮಿಲ್ಕ್ ಚಾಕ್ಲೆಟ್ ಕೊಡುತ್ತಿದ್ದ ಎಂಬ ಕಾರಣವೊಡ್ಡಿ ಬಣಕಲ್ ಮೂಲದ ಮುಸ್ಲಿಂ ಯುವಕನಿಗೆ ಮತ್ತೊಂದು ಯುವಕರ ಗುಂಪು ಹಲ್ಲೆ ನಡೆಸಿದ್ದಾರೆ.
ಕಾರಿನಲ್ಲಿ ಬಂದ ನಾಲ್ವರು ಯುವಕರು, ಹಲ್ಲೆ ನಡೆಸಿದ್ದಾರೆ. ಘಟನೆಯ ಬಗ್ಗೆ ಕೂಡಲೇ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಅಧಿಕಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಆಗಮಿಸಿದ ಪಿಎಸೈ ಮತ್ತು ಸಿಬ್ಬಂದಿ ಮುಂದಾಗುವ ಅನಾಹುತ ತಪ್ಪಿಸಿ ಗಾಯಗೊಂಡ ಯುವಕರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಈ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ನಾಲ್ವರ ವಿರುದ್ಧ ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬಸ್ ನಿಲ್ದಾಣದಲ್ಲಿ ಪುಂಡ ಯುವಕರ ಹಾವಳಿ ಹೆಚ್ಚಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಎರಡು ಎಫ್‌ಐಆರ್ ದಾಖಲು
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಂಗಳವಾರ ಸಂಜೆ ಯುವಕನೋರ್ವನ ಮೇಲೆ ನಡೆದ ಅನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿ ಮೂಡಿಗೆರೆ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿವೆ.
ಈ ಸಂಬಂಧ ಚಿಕ್ಕಮಗಳೂರು ಜಿಲ್ಲಾ ಪೋಲಿಸ್ ಇಲಾಖೆ ಮಾಹಿತಿ ನೀಡಿದ್ದು, ಐಪಿಸಿ ಸೆಕ್ಷನ್ 143, 144, 148, 323, 324, 504, 506, 1490 ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದೆ. ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.





