ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಪರ್ಯಾಯ ವಕೀಲರ ವೇದಿಕೆ, ಸಂವಿಧಾನ ಸಂರಕ್ಷಣಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಚಿಕ್ಕಮಗಳೂರು ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಪ್ರಯುಕ್ತ ಕಾನೂನು ಅರಿವು ಕಾರ್ಯಕ್ರಮವನ್ನು ಶುಕ್ರವಾರ ನಡೆಸಲಾಯಿತು.

ಕಳೆದ ತಿಂಗಳಿನಲ್ಲಿ ಚಿಕ್ಕಮಗಳೂರು ತಾಲೂಕಿನ ಹೊಸಕೋಟೆ ಗ್ರಾಮದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಜನರಿಗೆ ಆ ಊರಿನಲ್ಲಿ ಆಂಜನೇಯಸ್ವಾಮಿ ದೇವಾಲಯಕ್ಕೆ ಪ್ರವೇಶಿಸದಂತೆ ಅಡ್ಡಿಪಡಿಸಿದ್ದರು. ಈ ಕುರಿತು ಜಿಲ್ಲಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಮತ್ತು ಕಾನೂನು ಸೇವಾ ಪ್ರಾಧಿಕಾರ ಮಧ್ಯ ಪ್ರವೇಶಿಸಿ ದಲಿತ ಸಮುದಾಯದ ಜನರಿಗೆ ದೇವಸ್ಥಾನ ಪ್ರವೇಶಸುವಂತೆ ಜನರಲ್ಲಿ ಜಾಗೃತಿ ಮೂಡಿಸಿ ಅವಕಾಶ ಕಲ್ಪಿಸಿಕೊಡಲಾಯಿತು.

ಜಿಲ್ಲಾಧಿಕಾರಿ ಎನ್. ಎಂ ನಾಗರಾಜ್ ಕಾರ್ಯಕ್ರಮ ಉದ್ಘಾಟನೆ ನಡೆಸಿ “ಸಂವಿಧಾನ ಎಲ್ಲರಿಗೂ ಸಮಾನತೆ ನೀಡಿದೆ ಯಾವುದೇ ವ್ಯಕಿಯನ್ನು ಜಾತಿ, ಧರ್ಮ, ಲಿಂಗ, ಭಾಷೆ, ಕೆಲಸದ ಆಧಾರದ ಮೇಲೆ ತಾರತಮ್ಯ ಮಾಡಬಾರದು, ಹಾಗೆಯೇ, ಶಿಕ್ಷಣದಿಂದ ಎಂತಹವರು ಸಹ ಉನ್ನತ ಪದವಿ ಪಡೆಯಲು ಸಾಧ್ಯ ಆದುದರಿಂದ ಮಕ್ಕಳ ಕೀಳಿರಿಮೆ ತೊರೆದು ಕನಿಷ್ಠ ಒಂದು ಪದವಿವರೆಗಾದರೂ ವಿದ್ಯಾಭ್ಯಾಸ ಮಾಡಬೇಕು. ಜೊತೆಗೆ ಪದವಿ ಪಡೆದರೆ ಸಾಲದು ಮನುಷ್ಯರಿಗೆ ಮನುಷ್ಯರೇ ಸಹಕರಿಸಬೇಕು. ಪ್ರಕೃತಿಯ ವಿಕೋಪ ನಡೆದಾಗ ಯಾರನ್ನು, ಯಾವ ಜಾತಿಯವರು ಎಂದು ನೋಡುವುದಿಲ್ಲ ಆಗಾಗಿ ಒಳ್ಳೆತನದಿಂದ ಮುಂದೆ ಸಾಗಬೇಕು” ಎಂದು ತಿಳಿಸಿದರು.

ಕಾನೂನು ಸೇವಾ ಪ್ರಾಧಿಕಾರದ ಸದಸ್ಯ, ಕಾರ್ಯದರ್ಶಿಯಾದ ವಿ. ಹನುಮಂತಪ್ಪ ಮಾತನಾಡಿ “ಈ ದಿನ ವಿಶ್ವ ಸಾಮಾಜಿಕ ನ್ಯಾಯ ದಿನ 2009ರಿಂದ ವಿಶ್ವದಾದ್ಯಂತ ಆಚರಿಸುತ್ತಿದ್ದು, ಈ ವರ್ಷದ ಧ್ಯೇಯ ವಾಕ್ಯ ಸಾಮಾಜಿಕ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನವೀಕೃತ ಬದ್ಧತೆ ಎನ್ನುವುದಾಗಿದ್ದು, ಕಾನೂನು ಸೇವಾ ಪ್ರಾಧಿಕಾರವು ಸಾಮಾಜಿಕ ನ್ಯಾಯ ಆಧರಿಸಿ ಉಚಿತ ಅರಿವು ಮತ್ತು ನೆರವು ನೀಡಲಾಗುತ್ತಿದೆ.

ಸಿವಿಲ್ ಕೇಸ್ ನಡೆಸಲು ಪ್ಯಾನಲ್ ವಕೀಲರು ಮತ್ತು ಕ್ರಿಮಿನಲ್ ಕೇಸ್ ನಡೆಸಲು ಕಾನೂನು ಅಭಿರಕ್ಷಕ ವಕೀಲರ ಮೂಲಕ ಉಚಿತವಾಗಿ ನಡೆಸಲಾಗುವುದು. ಹಾಗೆಯೇ, ಜೈಲಿನಲ್ಲಿರುವ ಬಂಧಿಗಳಿಗೆ ಆದಾಯ ಮಿತಿ ಇಲ್ಲದೆ ನೆರವು ನೀಡಲಾಗುತ್ತದೆ. ಲೋಕ್ ಅದಾಲತ್ ಮತ್ತು ಮದ್ಯಸ್ತಿಕೆ ಮೂಲಕ ರಾಜಿ ಸಂಧಾನ ಮಾಡಿಕೊಂಡು ಶೀಘ್ರ ನ್ಯಾಯ ಪಡೆಯಬಹುದು ಎಂದು ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಮಲೆನಾಡಿನಲ್ಲಿ ಕೋಮುದ್ವೇಷ ಹೆಚ್ಚುತ್ತಿದೆಯೇ; ಗೊಂದಲ ಸೃಷ್ಟಿಸಿದ ಪ್ರಕರಣ
ಈ ವೇಳೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಪರ್ಯಾಯ ವಕೀಲರ ವೇದಿಕೆ, ಸಂವಿಧಾನ ಸಂರಕ್ಷಣಾ ಸಮಿತಿ ಹಾಗೂ ಗ್ರಾಮದ ಗ್ರಾಮಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





