ಬೇಸಿಗೆಯಂತೆ 2 ತಿಂಗಳ ಕಾಲ ಕಂಡುಬಂದ ಬಿರುಬಿಸಿಲು ಅಡಕೆ ಎಲೆಚುಕ್ಕಿ ರೋಗ ಬಾಧೆಯನ್ನು ಹತೋಟಿಗೆ ತಂದಿತ್ತು. ಆದರೆ, ಈ ಸದ್ಯ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ರೋಗ ಮತ್ತೆ ಉಲ್ಬಣಗೊಂಡಿದೆ ಎಂದು ಚಿಕ್ಕಮಗಳೂರು ಜಿಲ್ಲೆಯ ಸಂಸೆ, ಮರಸಣಿಗೆ ಪ್ರದೇಶದ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
“ಸಾಮಾನ್ಯವಾಗಿ ಅಕ್ಟೋಬರ್ ಮೊದಲ ವಾರದ ಬಳಿಕ ಮಳೆ ನಿಂತು ಚಳಿಗಾಲದ ಲಕ್ಷಣಗಳು ಕಂಡುಬರುತ್ತಿದ್ದವು. ಆದರೆ ಕಳೆದ 3 ವರ್ಷಗಳಿಂದ ಚಳಿಗಾಲವೇ ಇಲ್ಲದಂತೆ ವರ್ಷಪೂರ್ತಿ ಆಗಾಗ್ಗೆ ಮಳೆ ಸುರಿಯುತ್ತಿದೆ. ಈ ವರ್ಷವೂ ಅಕ್ಟೋಬರ್ ತಿಂಗಳಲ್ಲಿ 200 ಮಿ ಮೀ ಮಳೆ ಹಾಗೂ ನವೆಂಬರ್‌ನಲ್ಲಿ 100 ಮಿ ಮೀ ಮಳೆ ದಾಖಲಾಗಿದೆ. ವಾತಾವರಣದಲ್ಲಿನ ತೇವಾಂಶ ಮತ್ತು ತಾಪಮಾನದ ಹೆಚ್ಚಳದಿಂದ ಅಡಿಕೆ ತೋಟದಲ್ಲಿ ಶಿಲೀಂಧ್ರಗಳು ಚುರುಕಾಗಿವೆ. ಪರಿಣಾಮವಾಗಿ ಕಳೆದ 15 ದಿನದಲ್ಲಿ ಮತ್ತೆ ಎಲೆ ಚುಕ್ಕಿ ರೋಗದ ಬಾಧೆ ಮರುಕಳಿಸಿದೆ” ಎಂದು ತಿಳಿಸಿದ್ದಾರೆ.
“ಈಗಾಗಲೇ ಅಡಿಕೆ ಕೊಯ್ಲು ಆರಂಭವಾಗಿದ್ದು, ಕಳೆದ ವರ್ಷದ ಎಲೆಚುಕ್ಕಿ ರೋಗದಿಂದ ಆಗಿರುವ ಹಾನಿಯ ಪ್ರಮಾಣ ಈಗ ಅರಿವಾಗುತ್ತಿದೆ. ಫಸಲಿನಲ್ಲಿ ಶೇ. 30ರಿಂದ 50ರಷ್ಟು ಅಡಿಕೆ ಕುಸಿತವಾಗಿದೆ. ಮಳೆಗಾಲದಲ್ಲಿ ಮಳೆ ಕಡಿಮೆ ಆದಾಗ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಬಂತೆಂದು ಖುಷಿ ಪಟ್ಟಿದ್ದೆವು. ಆದರೆ ಈಗ ಮಳೆ ಆರಂಭವಾಗಿ ಬಾಧೆ ಹೆಚ್ಚಾಗುತ್ತಿದೆ. ಅಡಿಕೆ ತೋಟ ಮಾರಾಟ ಮಾಡುವಂತಾಗಿದೆ” ಎಂದು ಸಂಸೆಯ ರೈತರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಬರ ತಾಲೂಕು ಪಟ್ಟಿ ಘೋಷಿಸಿದರೂ ಹೊಲದತ್ತ ಬಾರದ ಅಧಿಕಾರಿಗಳು; ರೈತರ ಆರೋಪ
“ತೋಟಗಾರಿಕಾ ಇಲಾಖೆಯು ಕಳೆದ ವರ್ಷದಂತೆ ಈಗಲೂ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಔಷಧಿ ಸಿಂಪಡಿಸಿ ಎಂಬ ಸಲಹೆ ನೀಡಿದೆ. ಕೆಲ ಬೆಳೆಗಾರರು ಡ್ರೋನ್ ಬಳಸಿ ಔಷಧಿ ಸಿಂಪಡಿಸುವ ಕೆಲಸಕ್ಕೂ ಕೈ ಹಾಕಿದ್ದಾರೆ. ಆದರೆ ಡ್ರೋನ್ ಬಳಸಿ ಔಷಧಿ ಸಿಂಪಡಣೆ ಮಾಡುವುದನ್ನು ಇಲಾಖೆಯು ಶಿಫಾರಸು ಮಾಡಿಲ್ಲ” ಎಂದರು.





