ಮಲೆನಾಡು ರೈತರು ಶ್ರಮಜೀವಿಗಳು. ಅಡಕೆ ಅವರ ಜೀವನಾಧಾರ. ರೋಗ ನಿಯಂತ್ರಣಕ್ಕೆ ವೈಜ್ಞಾನಿಕ ಪರಿಹಾರ, ಸಬ್ಸಿಡಿ, ವಿಮೆ, ಮಾರುಕಟ್ಟೆ ಸ್ಥಿರತೆಯೂ ಮುಖ್ಯವಾಗಬಹುದು. ಅಡಕೆ ಇಳುವರಿ ಕುಸಿತ ರಾಜ್ಯದ ಗ್ರಾಮೀಣ ಆರ್ಥಿಕತೆಯನ್ನು ಕುಗ್ಗಿಸುತ್ತದೆ. ಇದು ಕೇವಲ ರೈತರ ಸಮಸ್ಯೆಯಲ್ಲ, ರಾಜ್ಯದ ಸಮಗ್ರ ಅಭಿವೃದ್ಧಿಯ ಸವಾಲು.
ಕರ್ನಾಟಕವು ಭಾರತದ ಅಡಕೆ ಬೆಳೆಯಲ್ಲಿ ಅಗ್ರಸ್ಥಾನದಲ್ಲಿದೆ. ರಾಜ್ಯದ ಮಲೆನಾಡು, ಕರಾವಳಿ ಮತ್ತು ಕೆಲವು ಒಳನಾಡು ಜಿಲ್ಲೆಗಳಲ್ಲಿ ಲಕ್ಷಾಂತರ ಕುಟುಂಬಗಳು ಅಡಕೆಯನ್ನು ನಂಬಿ ಜೀವನ ಸಾಗಿಸುತ್ತಿವೆ. ಆದರೆ ಪ್ರಸ್ತುತ ದಿನಗಳಲ್ಲಿ ಅಡಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗ, ಫ್ರೂಟ್ ರಾಟ್(ಕೊಳೆ ರೋಗ) ಮತ್ತು ಹವಾಮಾನ ಬದಲಾವಣೆಯಂತಹ ಸಮಸ್ಯೆಗಳು ರೈತರನ್ನು ಕಂಗಾಲಾಗಿಸಿವೆ.
ಮಲೆನಾಡು ಅಡಕೆಯ ಹುಟ್ಟೂರು. ಇಲ್ಲಿ ಸುಮಾರು 2.64 ಲಕ್ಷ ಹೆಕ್ಟೇರ್‌ನಲ್ಲಿ ಅಡಕೆ ಬೆಳೆಯಲಾಗುತ್ತದೆ. ದೇಶದ ಒಟ್ಟು ಅಡಕೆ ಉತ್ಪಾದನೆಯಲ್ಲಿ ಶೇ.70ಕ್ಕಿಂತಲೂ ಅಧಿಕ ಪಾಲು ರಾಜ್ಯದ ಬೆಳೆಯಾಗಿದೆ. ಆದರೆ 2025-26ರಲ್ಲಿ ಶೇ.40 ರಿಂದ 50ರಷ್ಟು ಇಳುವರಿ ಕುಸಿದಿದೆ. ಇದು ಕೇವಲ ಬೆಳೆಯ ಸಮಸ್ಯೆಯಲ್ಲ, ಲಕ್ಷಾಂತರ ರೈತರ ಜೀವನೋಪಾಯಕ್ಕೆ ತೀವ್ರ ಪೆಟ್ಟು ನೀಡಿದೆ.
2025ರಲ್ಲಿ ಜುಲೈ-ಆಗಸ್ಟ್‌ನಲ್ಲಿ ಸುರಿದ ಅತಿಯಾದ ಮಳೆಯಿಂದ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಫ್ರೂಟ್ ರಾಟ್ ರೋಗ ತೀವ್ರವಾಗಿ ಹರಡಿತು. ಫೈಟೋಫ್ತೋರಾ ಎರಿಕೇ ಫಂಗಸ್‌ನಿಂದ ಉಂಟಾಗುವ ಈ ರೋಗವು ಮುಗ್ಗುಲು ಕಾಯಿಗಳನ್ನು ಮುಂಚಿತವಾಗಿ ಕೊಳೆಯುವಂತೆ ಮಾಡುತ್ತದೆ. ಶಿವಮೊಗ್ಗ ಜಿಲ್ಲೆಯೊಂದರಲ್ಲಿಯೇ 49,332 ಹೆಕ್ಟೇರ್ ಪ್ರದೇಶದಲ್ಲಿ ರೋಗ ಹರಡಿ ಸುಮಾರು ₹2,537 ಕೋಟಿ ನಷ್ಟ ಉಂಟಾಗಿರುವುದಾಗಿ ಅಧಿಕಾರಿಗಳು ಅಂದಾಜಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ 21,304 ಹೆಕ್ಟೇರ್ ಅಡಕೆ ಬೆಳೆ ಪ್ರದೇಶವಾಗಿದ್ದು, ಸುಮಾರು 90,000 ಹೆಕ್ಟೇರ್ ಪ್ರದೇಶವನ್ನು ಹಳದಿ ಎಲೆ ರೋಗ ಮತ್ತು ಎಲೆ ಚುಕ್ಕಿ ರೋಗಗಳು ಕಬಳಿಸಿವೆ. ಇದರಿಂದ ರೈತರು ನಿರೀಕ್ಷಿಸಿದ ಇಳುವರಿಗಿಂತ ಕಡಿಮೆ, ಅಂದರೆ ಅರ್ಧಕ್ಕೂ ಕಡಿಮೆ ಅಡಕೆ ಸಿಕ್ಕಿದೆ.
ಹವಾಮಾನ ಬದಲಾವಣೆಯು ಅಡಕೆ ಬೆಳೆಗೆ ಹೆಚ್ಚುವರಿ ಸವಾಲುಗಳನ್ನು ಸೃಷ್ಟಿಸಿದೆ. ಅತಿಯಾದ ಮಳೆ, ಉಷ್ಣತೆಯ ಏರಿಕೆ(ಕೆಲವೆಡೆ 42° ಸೆಲ್ಸಿಯಸ್‌ವರೆಗೆ), ಅನಿಯತ ಮಳೆ ಮತ್ತು ನೀರಿನ ಕೊರತೆ ಬೆಳೆಯನ್ನು ದುರ್ಬಲಗೊಳಿಸಿವೆ. ಅಡಕೆಯು ನೀರು ಹೀರಿಕೊಳ್ಳುವ ಬೆಳೆಯಾಗಿರುವುದರಿಂದ ಕರ್ನಾಟಕದ ನೀರಿನ ಸಂಕಷ್ಟದಲ್ಲಿ ಇದು ಇನ್ನಷ್ಟು ತೊಂದರೆ ನೀಡುತ್ತಿದೆ. ದಕ್ಷಿಣ ಕನ್ನಡದಲ್ಲಿ 40-50% ಇಳುವರಿ ಕುಸಿತವಾಗಿದ್ದು, ಕೆಲವು ರೈತರು ಬೆಳೆಯನ್ನೇ ಕೈಬಿಟ್ಟಿದ್ದಾರೆ. ಉಳಿದ ಕಾಯಿಗಳ ಗುಣಮಟ್ಟವೂ ಕುಸಿದು ‘ಕೋಕಾ’, ‘ಪಟೋರಾ’ ಎಂಬ ಕಡಿಮೆ ಗ್ರೇಡ್‌ಗಳಿಗೆ ಸೀಮಿತವಾಗಿದೆ.
ಮಾರುಕಟ್ಟೆಯಲ್ಲಿ ಬೆಲೆಯ ಅಸ್ಥಿರತೆಯು ರೈತರನ್ನು ಕೊಂಚ ಕಷ್ಟಕ್ಕೀಡುಮಾಡಿದೆ. 2025ರ ಅಕ್ಟೋಬರ್‌ನಲ್ಲಿ ರೋಗಗಳಿಂದ ಇಳುವರಿ ಕಡಿಮೆಯಾದುದರಿಂದ ಬೆಲೆ ಏರಿಕೆಯಾಗಿ ಕ್ವಿಂಟಲ್‌ಗೆ ₹65,000ರಿಂದ ₹80,000ವರೆಗೆ ತಲುಪಿತು. ವ್ಯಾಪಾರಿಗಳು ಸಂತೋಷವಾಗಿದ್ದಾರೆ. ಆದರೆ ಈಗ ಇಳುವರಿ ಕಡಿಮೆಯಾಗಿದೆ, ರೈತರ ಬಳಿ ಬೆಳೆಯಿಲ್ಲ. ಮುಂಚಿತವಾಗಿ ಮಾರಾಟ ಮಾಡಿದ ಫಸಲಿಗೆ ಈ ಲಾಭ ಪಡೆಯಲು ಸಾಧ್ಯವಾಗಲಿಲ್ಲ. ಜತೆಗೆ 2025-26ರಲ್ಲಿ ₹1,064 ಕೋಟಿ ಮೊತ್ತದ ಅಡಕೆ(ಇಂಡೋನೇಷ್ಯಾ, ಮಲೇಷ್ಯಾ ಸೇರಿದಂತೆ) ಆಮದು ಆಗಿರುವುದು ಸ್ಥಳೀಯ ಬೆಲೆಗಳ ಮೇಲೆ ಒತ್ತಡ ಹೇರಿದೆ. ಸಸ್ತಾ ಆಮದು ಅಡಕೆಯು ಸ್ಥಳೀಯ ‘ಡಬಲ್ ಚಾಲಿ’ಯಂತಹ ಉತ್ತಮ ಗುಣಮಟ್ಟದ ಅಡಕೆಗೆ ಪೈಪೋಟಿ ನೀಡುತ್ತಿದೆ.
ಶಿವಮೊಗ್ಗದಲ್ಲಿ 32,124 ಎಕರೆ, ಚಿಕ್ಕಮಗಳೂರಿನಲ್ಲಿ 25,210 ಎಕರೆ, ದಕ್ಷಿಣ ಕನ್ನಡದಲ್ಲಿ 20,830 ಎಕರೆ ಪ್ರದೇಶದಲ್ಲಿ ಅಡಕೆ ಬೆಳೆಯನ್ನು ವಿಸ್ತರಿಸಲಾಗಿದೆ. ಆದರೆ ಹಳದಿ ಎಲೆ ರೋಗ(YLD) ಮತ್ತು ಕೊಳೆ ರೋಗ(Fruit Rot/Koleroga)ಗಳ ಜತೆಗೆ ಹಿಡಿಮಂಡಿಗೆ ರೋಗವೂ ಬೆಳೆಯನ್ನು ನಾಶಮಾಡುತ್ತಿದೆ.
ಮಲೆನಾಡು ಭಾಗದಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ರೋಗ ಹರಡುತ್ತಿದ್ದು, ಇಳುವರಿ ಕುಂಠಿತವಾಗುತ್ತಿದೆ. ಮಳೆಗಾಲದಲ್ಲಿ ಔಷಧಿಗಳನ್ನು ಸಿಂಪಡಣೆ ಮಾಡಲು ಸಾಧ್ಯವಾಗದ ಕಾರಣ ರೋಗ ತೀವ್ರವಾಗಿದ್ದು, ಸಾಮಾನ್ಯವಾಗಿ ಶೇ.40-50 ಇಳುವರಿ ಕುಂಠಿತವಾದರೆ, ಕೆಲವೆಡೆ ಶೇ.95ರಷ್ಟು ಉದಾ: ಶೃಂಗೇರಿ-ಕೊಪ್ಪ ಭಾಗದಲ್ಲಿ ಅಧಿಕವಾಗಿ ಬೆಳೆ ಕುಂಠಿತಗೊಂಡಿದೆ.
ಫೆಬ್ರವರಿ 2026ರಲ್ಲಿ ಮಾರುಕಟ್ಟೆಯಲ್ಲಿ ಸುಳ್ಯ, ಪುತ್ತೂರು, ಶಿವಮೊಗ್ಗ ಮಾರುಕಟ್ಟೆಯ ಕೆಲವು ವ್ಯತ್ಯಾಸಗಳಲ್ಲಿ ಉತ್ತಮ ಗುಣಮಟ್ಟದ ಕ್ವಿಂಟಲ್ ಅಡಕೆಗೆ ₹40,000-₹48,500ಕ್ಕೆ ತಲುಪಿದೆ. ಆದರೆ ಇಳುವರಿ ಕಡಿಮೆಯಿಂದ ಒಟ್ಟು ಆದಾಯ ತುಂಬಾ ಕಡಿಮೆಯಾಗಿದೆ. ಕೂಲಿ ಕಾರ್ಮಿಕರ ಕೊರತೆಗಳಿಂದ ಫಸಲನ್ನು ಸರಿಯಾದ ಸಮಯಕ್ಕೆ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲದೆ WHOನ carcinogenic ಟ್ಯಾಗ್‌ನಿಂದ ಮಾರುಕಟ್ಟೆ ಮೇಲೆ ದುಷ್ಪರಿಣಾಮ ಬೀರಿದೆ. ಅಲ್ಲದೆ ಇನ್ಷುರೆನ್ಸ್ ಪ್ರೀಮಿಯಂ ಹೆಚ್ಚಾಗಿದ್ದರೂ ಪರಿಹಾರ ಕಡಿಮೆ ಇದೆ. ಇಂತಹ ಹಲವು ಕಾರಣಗಳು ಅಡಕೆ ಬೆಳೆಗಾರರನ್ನು ಕಾಡುತ್ತಿವೆ ಎಂಬುದು ರೈತರ ಅಳಲಾಗಿದೆ.
ಅಡಕೆ ಬೆಳೆಗಾರ ಹಿಟ್ಟೂರು ರಾಜು ಅವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಈ ಹಿಂದೆ ಅಡಕೆಯನ್ನು ಕೇಲವ ಮಲೆನಾಡು ಭಾಗದಲ್ಲಿ ಬೆಳೆಯಲಾಗುತ್ತಿತ್ತು. ಆದರೆ ಈಗ ಎಲ್ಲ ಕಡೆ ಅಡಕೆ ಬೆಳೆಯಲಾಗುತ್ತಿದೆ. ಆದರೂ ಉತ್ತಮ ಬೆಲೆ ಇದೆ. ಆದರೆ ರೈತರ ಬಳಿ ಬೆಳೆಯೇ ಇಲ್ಲ. ಅಡಕೆ ರೋಗಕ್ಕೆ ತುತ್ತಾಗಿದ್ದು, ಶೇ.50ರಷ್ಟು ಬೆಳೆ ನಾಶವಾಗಿ, ಇಳುವರಿ ಕುಂಠಿತವಾಗಿದೆ” ಎಂದು ತಿಳಿಸಿದರು.
“ಅಡಕೆ ನಡುವೆ ಬೆಳೆಯುವ ಇತರೆ ಬೆಳೆಗಳ ಕಳೆ ನಿಯಂತ್ರಣಕ್ಕೆ ಸಿಂಪಡಿಸುವ ಔಷಧಿಯಿಂದ ಅಡಕೆಗೆ ಎಲೆಚುಕ್ಕಿ ರೋಗ, ಸೇರಿದಂತೆ ಇತರೆ ರೋಗಗಳು ಬರಲಾರಂಭಿಸಿವೆ. ಭೂಮಿಯನ್ನು ಫಲವತ್ತತೆಯಿಂದ ಇಟ್ಟುಕೊಂಡಿದ್ದೇ ಆದಲ್ಲಿ ಅಡಕೆ ರೋಗವನ್ನು ನಿಯಂತ್ರಿಸಬಹುದು” ಎಂದರು.
ಕೃಷಿ ತಜ್ಞರು, ವಿಜ್ಞಾನಿಗಳು ಯಾವುದೇ ರೀತಿಯ ಹೊಸ ಪರಿಹಾರಗಳನ್ನು ಕಂಡುಹಿಡಿಯುವ ಕೆಲಸ ಮಾಡುತ್ತಿಲ್ಲ. ಇಂದು ಕೃಷಿ ತಜ್ಞರು ಜಮೀನುಗಳ ಬಳಿ ಬಂದು ಬೆಳೆ ಪರಿಶೀಲಿಸಿ ಗೊಬ್ಬರ, ಔಷಧಿಗಳನ್ನು ತಯಾರು ಮಾಡುತ್ತಿಲ್ಲ. ಬದಲಿಗೆ ಬ್ರಿಟಿಷರು ಬಿಟ್ಟುಹೋಗಿರುವ ಔಷಧಗಳನ್ನೇ ಇನ್ನೂ ಹೇಳಿಕೊಂಡು ಕುಳಿತಿರುವಾಗ, ರೈತರು ತಮ್ಮ ಬೆಳೆ ಉಳಿಸಿಕೊಳ್ಳಲು ಹಣ ಖರ್ಚು ಮಾಡುತ್ತಿದ್ದಾರೆ. ಪರಹಾರ ಸಿಗುತ್ತಿಲ್ಲ. ಇತ್ತ ಸರ್ಕಾರಗಳು ಹುಸಿ ಭರವಸೆ ನೀಡುತ್ತವೆಯೋ ಹೊರತು ಯಾವುದೇ ರೀತಿಯ ಪರಿಹಾರಗಳನ್ನು ನೀಡುತ್ತಿಲ್ಲ” ಎಂದು ದೂರಿದರು.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕುದುರೆಮುಖ ಭಾಗದ ಭಲೇಕಡಿ ಗ್ರಾಮದಲ್ಲಿ 45 ಕುಟುಂಬಗಳ ರೈತರು ತಲೆಮಾರುಗಳಿಂದ ಅಡಕೆ ಬೆಳೆಸುತ್ತಿದ್ದಾರೆ. ಆದರೆ ಈಗ ಎಲ್ಲರೂ ನಷ್ಟದಲ್ಲಿದ್ದಾರೆ. ಅಂಥೋನಿ ಅವರು 1991ರಲ್ಲಿ 20 ಎಕರೆ ಖರೀದಿಸಿದ್ದರು. ಈ ಜಮೀನಿನಿಂದ ಹಿಂದೆ 100 ಕ್ವಿಂಟಲ್ ಅಡಕೆ ಫಸಲು ಬರುತ್ತಿತ್ತು. ಈಗ ಕೇವಲ 4 ಕ್ವಿಂಟಲ್‌ಗೆ ಬಂದು ತಲುಪಿದೆ ಎಂಬ ಸಂಕಟ ವ್ಯಕ್ತಪಡಿಸಿದ್ದಾರೆ.
ಅಡಕೆ ಬೆಳೆಗಾರರಾದ ವೆಂಕಟೇಶ್ ಅವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಅಡಕೆಗೆ ಈ ಹಿಂದೆ ತೊಂಡೆರೋಗ ಬರುತ್ತಿತ್ತು. ಇದು ವಯಸ್ಸಾದ ಮರಗಳಿಗೆ ಬರುತ್ತಿತ್ತು, ಕ್ರಮೇಣವಾಗಿ ಫಸಲು ಕಡಿಮೆ ಆಗುತ್ತಿತ್ತು. ಆದರೆ ಈಗ ಜಾಗತಿಕ ತಾಪಮಾನ ಬದಲಾವಣೆಯಿಂದಾಗಿ ಹಳದಿ ಎಲೆ ಮತ್ತು ಎಲೆ ಚುಕ್ಕೆ ರೋಗಗಳು ಆವರಿಸಿಕೊಳ್ಳುತ್ತಿವೆ. ಇದರಿಂದ ಸಂಪೂರ್ಣ ಅಡಕೆ ತೋಟವೇ ಹಾನಿಯಾಗಿದೆ. ಶೇ.40ರಷ್ಟು ಫಸಲು ಕಡಿಮೆಯಾಗುತ್ತಿದೆ” ಎಂದು ಹೇಳಿದರು.
“ಎಲೆ ಚುಕ್ಕೆ ರೋಗ ಬಂದು ಒಂದು ವರ್ಷದೊಳಗೆ ಸಂಪೂರ್ಣ ಮರಗಳೇ ನಾಶವಾಗುತ್ತಿವೆ. ಈ ನಷ್ಟದ ಹೊರೆಯನ್ನು ತಡೆಯಲಾರದೆ ಬಹುತೇಕರು ಮೆಣಸು ಬೆಳೆಗೆ ಬದಲಾಗಿದ್ದಾರೆ. ಮಲೆನಾಡು ಭಾಗದ ರೈತರಿಗೆ ಅಡಕೆ, ಮೆಣಸು, ಕಾಫಿ ಬೆಳೆಗಳೇ ವಾಣಿಜ್ಯ ಬೆಳೆಗಳು. ಆದರೆ ಈಗ ಅಡಕೆ ಬೆಳೆಗಾರರು ಬದುಕುಳಿಯುವುದೇ ಕಷ್ಟ ಎನ್ನುವಂತಾಗಿದೆ. ಬೇರೆ ಇನ್ಯಾವುದೇ ಆದಾಯವಿಲ್ಲ. ಸರಿಯಾದ ಮೂಲ ಸೌಕರ್ಯಗಳೂ ಇರುವುದಿಲ್ಲ. ಉದಾಹರಣೆಗೆ ನ್ಯಾಯಬೆಲೆ ಅಂಗಡಿಗೆ ಹೋಗಿ ಅನ್ನಭಾಗ್ಯ ಅಕ್ಕಿ ತರಬೇಕೆಂದರೆ ₹600 ಖರ್ಚಾಗುತ್ತದೆ, ಬಹುತೇಕರು ನಗರ ಪ್ರದೇಶಗಳತ್ತ ಮುಖಮಾಡುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
“ಮಲೆನಾಡು ಪ್ರದೇಶದ ಬೆಳೆಯನ್ನು ಈಗ ಬಯಲು ಸೀಮೆಗಳಲ್ಲಿಯೂ ಬೆಳೆಯಲು ಪ್ರಾರಂಭಿಸಿದ್ದಾರೆ. ಚನ್ನಗಿರಿ, ಚಿತ್ರದುರ್ಗ ಈ ಭಾಗಗಳಲ್ಲಿ ಅಡಕೆ ಬೆಳೆಯಲು ನಾಲೆ ನೀರು ಬಳಕೆಯಾಗುತ್ತಿದೆ. ಆಹಾರ ಪದಾರ್ಥಗಳನ್ನು ಬೆಳೆಯಬೇಕಾದ ಪ್ರದೇಶಗಳಲ್ಲಿ ಬಹುವಾರ್ಷಿಕ ಬೆಳೆಗಳನ್ನು ಬೆಳೆದರೆ, ಆಹಾರ ಪದಾರ್ಥಗಳ ಕೊರತೆ ಉಂಟಾಗುವ ಸಾಧ್ಯತೆ ಎದುರಾಗಬಹುದು” ಎಂದು ಅಭಿಪ್ರಾಯಪಟ್ಟರು.
“ಸರ್ಕಾರ, ಕೃಷಿ ವಿಜ್ಞಾನಿಗಳು ಮತ್ತು ರೈತರನ್ನೊಳಗೊಂಡು ಅಡಕೆ ಬೆಳೆಯ ಸುತ್ತ ಸೂಕ್ತ ಸಂಶೋಧನೆ ನಡೆಸಿದಾಗ ಮಾತ್ರ ಏನಾದರೂ ಪರಿಹಾರ ಸಿಗಬಹುದು. ಇಲ್ಲದಿದ್ದರೆ ಅಡಕೆ ಬೆಳೆ ಸಂಪೂರ್ಣ ಹಾನಿಯಾಗುತ್ತದೆ. ಬೆಳೆಗಾರರೂ ಸಂಪೂರ್ಣವಾಗಿ ನಷ್ಟಕ್ಕೊಳಗಾಗುತ್ತಾರೆ” ಎಂದರು.
ಕ್ಯಾಂಪ್ಕೊ(CAMPCO- Central Arecanut & Cocoa Marketing and Processing Co-operative Ltd.) ಸಂಸ್ಥೆ 2026ರ ಜನವರಿ 24ರಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು WHO ಟ್ಯಾಗ್ ತೆಗೆಯಲು ಮನವಿ ಮಾಡಿದೆ. ಏಕೆಂದರೆ ನೈಸರ್ಗಿಕ ಅಡಕೆಯಿಂದ ಕ್ಯಾನ್ಸರ್ ಬರುವುದಿಲ್ಲ. ಅಡಕೆಯನ್ನು ಪಾನ್-ಗುಟ್ಕಾದೊಂದಿಗೆ ತಿನ್ನುವಾಗ ಕ್ಯಾನ್ಸರ್ ಬರುತ್ತದೆ. ಆದರೆ ರೈತರಿಂದ ನೇರವಾಗಿ ಉತ್ಪನ್ನ ಖರೀದಿ ಹಿಂದೇಟು ಹಾಕಬಾರದು. ಕೊಳೆ ರೋಗದಿಂದ ಅಡಕೆ ಕಾಯಿಗಳು ಉದುರುತ್ತಿವೆ. ಈ ಬಾರಿ ಮಳೆ ಅಧಿಕವಿದ್ದ ಕಾರಣ ಔಷಧಿ ಸಿಂಪಡಿಸಲೂ ಸಾಧ್ಯವಾಗಲಿಲ್ಲ. ತೀರ್ಥಹಳ್ಳಿಯಿಂದ ಶಿವಮೊಗ್ಗದವರೆಗೆ ಈ ರೋಗ ಹರಡಿದೆ. ಕೆಲವರು ಮನೆ-ಜಮೀನು ಮಾರುತ್ತಿದ್ದಾರೆ. ಅಡಕೆ ಬೆಳೆಗಾರರಿಗೆ ಭವಿಷ್ಯವೇ ಇಲ್ಲ ಎನ್ನಿಸುತ್ತಿದೆ ಎಂಬುದು ಅಡಕೆ ಬೆಳೆಗಾರರ ಆತಂಕವಾಗಿದೆ.
ಅಡಕೆಯನ್ನು WHOಯ IARC ‘ಕಾರ್ಸಿನೋಜೆನಿಕ್ ಟು ಹ್ಯೂಮನ್ಸ್'(ಗ್ರೂಪ್ 1) ಎಂದು ವರ್ಗೀಕರಿಸಿರುವುದು ಬೇಡಿಕೆ ಕುಸಿಯುವಂತೆ ಮಾಡಿದೆ. ಪಾನ್, ಗುಟ್ಕಾ, ಪಾನ್ ಮಸಾಲಾದಲ್ಲಿ ಬಳಕೆಯಾಗುವುದರಿಂದ ಈ ಲೇಬಲ್ ಬಂದಿದೆಯಾದರೂ ರೈತರು ಅರೆಕೋಲೈನ್(ಗ್ರೂಪ್ 2B) ಜತೆಗೆ ಸಮಾನವಾಗಿ ಮರುವರ್ಗೀಕರಣಕ್ಕೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಇದು ಮಾರುಕಟ್ಟೆಯನ್ನು ಮತ್ತಷ್ಟು ಸಂಕುಚಿತಗೊಳಿಸಿದೆ. ಸಣ್ಣ ಮತ್ತು ಅಲ್ಪಸ್ಥಳೀಯ ರೈತರು(85% ಬೆಳೆಗಾರರು) ಈ ಎಲ್ಲ ಸಮಸ್ಯೆಗಳಿಂದ ತತ್ತರಿಸಿದ್ದಾರೆ.
ಬೆಳೆ ವಿಮೆಯ ಸಮಸ್ಯೆಯೂ ಗಂಭೀರವಾಗಿದೆ. ಹವಾಮಾನ ಆಧರಿತ ಬೆಳೆವಿಮೆ(WBCIS) ಅಡಿಯಲ್ಲಿ ಅನೇಕ ರೈತರು ಹೆಚ್ಚು ಬೆಳೆ ವಿಮೆ ಕಟ್ಟಿದರೂ ಪರಿಹಾರ ಸಿಗದೆ ಹಪಹಪಿಸುತ್ತಿದ್ದಾರೆ. 2024-25ರಲ್ಲಿ ₹472 ಕೋಟಿ ಇನ್ಷುರೆನ್ಸ್ ಪರಿಹಾರ ನೀಡಲಾಗಿತ್ತು. PMFBY ಇನ್ಷುರೆನ್ಸ್‌ನಲ್ಲಿ ₹47,000-48,000 ಪ್ರೀಮಿಯಂ ಕಟ್ಟಿದ್ದಾರೆ, ಆದರೆ ಕೇವಲ ₹2,800 ಪರಿಹಾರ ನೀಡಲಾಗಿದೆ. ರೋಗ ನಿಯಂತ್ರಣ, ಪೋಷಕಾಂಶ ನಿರ್ವಹಣೆ, ಇನ್ಷುರೆನ್ಸ್‌ಗಾಗಿ ₹577 ಕೋಟಿ ಅನುದಾನ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿರುವುದಾಗಿ ತಿಳಿದುಬಂದಿದೆ. ಸರ್ಕಾರವು ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಎಕರೆಗೆ ₹1,500 ಸಹಾಯಧನ ನೀಡುತ್ತಿದೆಯಾದರೂ ಇದು ಸಾಕಾಗುತ್ತಿಲ್ಲ. ರೋಗ ಸಮಸ್ಯೆ ಪರಿಹಾರಕ್ಕೆ ತುರ್ತು ಕ್ರಮಗಳು ಅಗತ್ಯವಾಗಿವೆ ಎಂಬುದು ಬೆಳೆಗಾರರ ಆಗ್ರಹವಾಗಿದೆ.
ಇದನ್ನೂ ಓದಿದ್ದೀರಾ? ʼರೆಸಾರ್ಟ್ ಲಾಬಿʼಗೆ ಮಣಿದ ಸರ್ಕಾರದಿಂದ ಬಂಡೀಪುರ-ನಾಗರಹೊಳೆ ಸಫಾರಿ ಪುನರಾರಂಭ: ರೈತರ ಆರೋಪ
ರೋಗ ನಿರೋಧಕ ತಳಿಗಳ ಅಭಿವೃದ್ಧಿ, ಏಕೀಕೃತ ಸಸ್ಯ ಸಂರಕ್ಷಣೆ, ಸಂಸ್ಕರಣಾ ಘಟಕಗಳು ಮತ್ತು ಮೌಲ್ಯವರ್ಧನೆ(ಅಡಕೆ ಎಲೆಯಿಂದ ಪ್ಲೇಟ್‌ಗಳು, ಇತರ ಉತ್ಪನ್ನಗಳು) ಅಗತ್ಯ. ನೀರಿನ ಸುಸ್ಥಿರ ಬಳಕೆ, ಇಂಟರ್‌ಕ್ರಾಪಿಂಗ್(ಮೆಣಸು, ಲೆಮನ್ ಗ್ರಾಸ್‌ನಂತಹ ಬೆಳೆಗಳು) ಮತ್ತು ರಫ್ತು ಉತ್ತೇಜನದ ಮೂಲಕ ಬೇಡಿಕೆ ಹೆಚ್ಚಿಸಬಹುದು. ಇದಕ್ಕೆ ರೈತ ಸಂಘಟನೆಗಳು, ಸರ್ಕಾರ ಮತ್ತು ವಿಜ್ಞಾನಿಗಳ ನಡುವಿನ ಸಮನ್ವಯವು ಮುಖ್ಯವಾಗುತ್ತದೆ.
ಮಲೆನಾಡು ರೈತರು ಶ್ರಮಜೀವಿಗಳು. ಅಡಕೆ ಅವರ ಜೀವನಾಧಾರ. ರೋಗ ನಿಯಂತ್ರಣಕ್ಕೆ ವೈಜ್ಞಾನಿಕ ಪರಿಹಾರ, ಸಬ್ಸಿಡಿ, ಉತ್ತಮ ವಿಮಾ ಸ್ಥಿರತೆ, ಮಾರುಕಟ್ಟೆ ಬೇಕಾಗಬಹುದು. ಅಡಕೆ ಬೆಳೆಯ ಸಂಕಷ್ಟವು ರಾಜ್ಯದ ಗ್ರಾಮೀಣ ಆರ್ಥಿಕತೆಯನ್ನೇ ಕುಗ್ಗಿಸುತ್ತಿದೆ. ಇದು ಕೇವಲ ರೈತರ ಸಮಸ್ಯೆಯಲ್ಲ, ರಾಜ್ಯದ ಸಮಗ್ರ ಅಭಿವೃದ್ಧಿಯ ಸವಾಲು. ತುರ್ತು ಗಮನ, ದೀರ್ಘಕಾಲೀನ ಯೋಜನೆಗಳು ಮತ್ತು ರೈತ ಸ್ನೇಹಿ ನೀತಿಗಳ ಜತೆಗೆ ಕೃಷಿ ವಿಶ್ವವಿದ್ಯಾಲಯ, ತೋಟಗಾರಿಕೆ ಇಲಾಖೆಗಳು ರೈತರಿಗೆ ಸಲಹೆಗಳನ್ನು ನೀಡುವುದರಿಂದ ಮಾತ್ರ ಇಂತಹ ಬೆಳೆಯನ್ನು ಉಳಿಸಿ ಬೆಳೆಸಬಹುದು. ಇಲ್ಲವಾದರೆ ಮಲೆನಾಡು ಮತ್ತು ಕರಾವಳಿಯ ಹಸಿರು ತೋಟಗಳು ಖಾಲಿಯಾಗುವ ಅಪಾಯ ಎದುರಾಗಬಹುದು.





