ಪ್ರವಾಸಿಗರಿಗೆ ಕಣ್ಣೋಟ ಸೆಳೆಯುವ ಮಲೆನಾಡು ಚಿಕ್ಕಮಗಳೂರಿಗೆ ದೇಶ, ವಿದೇಶದಿಂದ ಪ್ರವಾಸಿಗರ ದಂಡು ಬರುತ್ತದೆ. ಹಾಗೆಯೇ, ಬದುಕು ಕಟ್ಟಿಕೊಳ್ಳಲು ನಮ್ಮ ಭಾರತ ದೇಶದ ಬೇರೆ ಬೇರೆ ರಾಜ್ಯಗಳಿಗೆ ವಿದ್ಯಾಭ್ಯಾಸ, ಉದ್ಯೋಗ ಸೇರಿದಂತೆ ದುಡಿಯುವ ವರ್ಗದ ಜನರು ವಲಸೆ ಹೋಗುವುದು ಹೊಸ ವಿಚಾರವೇನಲ್ಲ. ಆದರೆ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಪ್ರತಿ ವಾರದಂತೆ ಸಂತೆ ನಡೆಯುವ ಸಂತೆ ಮೈದಾನದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ಘಟನೆ ಅಮಾನವೀಯ.
ಏನಿದು ಘಟನೆ!
ಎಲ್ಲರಂತೆ ಜೀವನ ಸಾಗಿಸಲು ಕುಟುಂಬವದವರ ಬದುಕು ನಿರ್ವಹಣೆಗಾಗಿ ನಮ್ಮ ದೇಶದ ಅಸ್ಸಾಂ ರಾಜ್ಯದಿಂದ ಚಿಕ್ಕಮಗಳೂರು ಭಾಗದ ಕಾಫಿ ಎಸ್ಟೇಟ್, ಹಾಗೂ ಇತರೆ ಕೂಲಿ ಕೆಲಸಕ್ಕಾಗಿ ಬಂದಿರುವ ಕಾರ್ಮಿಕರಿಗೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಜನವರಿ 2ರಂದು ಮಧ್ಯಾಹ್ನ 2ರ ಸುಮಾರಿಗೆ ಸಾರ್ವಜನಿಕರು ಸಂತೆ ಮಾಡುತ್ತಿದ್ದ, ಸ್ಥಳದಲ್ಲಿ ಏಕಾಏಕಿಯಾಗಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಅಸ್ಸಾಂ ಭಾಗದ ಕಾರ್ಮಿಕರನ್ನು ಅಡ್ಡಗಟ್ಟಿ ಎಲ್ಲಿಂದ ಬಂದಿದ್ದೀರಾ? ನೀವು ಬಾಂಗ್ಲಾದೇಶದವರಾ ಹೇಳಿ, ದನದ ಮಾಂಸ ಮಾರುತ್ತಿದ್ದೀರಾ ಎಂದೇಳಿ ಕಾರ್ಮಿಕರ ಕುತ್ತಿಗೆ ಹಿಡಿದು ಶೋಷಣೆ ಹಾಗೂ ದೌರ್ಜನ್ಯ ಮಾಡುವ ಮೂಲಕ ಹಿಂಸಿಸಿದ್ದಾರೆ.

ಸಂತೆ ನಡೆಯುವ ಸ್ಥಳದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದರು. ಸಂತೆಯ ಮಧ್ಯ ಭಾಗದಲ್ಲಿ ಜೋರಾಗಿ ಕೂಗಾಡುತ್ತಿದ್ದ ಶಬ್ದ ಕೇಳಿ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಸಂತೆ ಮೈದಾನದಿಂದ ಡಿಎಸ್‌ಬಿಜಿ ಕಾಲೇಜಿಗೆ ಹೋಗುವ ರಸ್ತೆ ಮಧ್ಯದಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರ ಗುಂಪೂಂದು ಸಂತೆಯಲ್ಲಿ ಜೋರಾಗಿ ಅಲ್ಲಿದ್ದ ಇಬ್ಬರನ್ನು ಉದ್ದೇಶಿಸಿ ನೀವು ಬಾಂಗ್ಲಾದೇಶದಿಂದ ಬಂದು ಆಕ್ರಮವಾಗಿ ನೆಲೆಸಿದ್ದೀರಿ ನಿಮ್ಮ ಗುರುತಿನ ಪುರಾವೆ ಹಾಗೂ ಇತರೆ ದಾಖಲೆಗಳನ್ನು ನಮಗೆ ತೋರಿಸಿ ಎಂದು ಸುಮಾರು 8-10 ಜನರು ಕಿರುಚಾಡುತ್ತ ಅಲ್ಲಿದ್ದವರಲ್ಲಿ ಕೆಲವರು ಭಿನ್ನಾಬಿಪ್ರಾಯದಿಂದ ಸುತ್ತಲೂ ನೋಡುತ್ತಿದ್ದರು.

ಸಾರ್ವಜನಿಕವಾಗಿ ಗಲಾಟೆ ಮಾಡಿ ಜೋರಾಗಿ ಕೂಗಾಡುತ್ತ ಸಾರ್ವಜನಿಕರ ಶಾಂತಿಗೆ ಭಂಗವನ್ನುಂಟು ಮಾಡುತ್ತಿದ್ದರು. ಗಲಾಟೆ ಮಾಡುತ್ತಿದ್ದವರನ್ನು ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ತಡೆದು ಚದುರಿಸಿ ಕಳುಹಿಸಲಾಯಿತು. ಹಾಗೆಯೇ, ಕಾರ್ಮಿಕರ ಮೇಲೆ ಬಾಂಗ್ಲಾ ದೇಶದವರೆಂದು ಆರೋಪಿಸಿದರಿಂದ ಠಾಣೆಯಲ್ಲಿಯೇ, ಅವರ ದಾಖಲೆ ಪರಿಶೀಲಿಸಿದಾಗ ಭಾರತ ದೇಶದ ಅಸ್ಸಾಂ ರಾಜ್ಯದವರೆಂದು ತಿಳಿದು ಕಾರ್ಮಿಕರನ್ನು ಠಾಣೆಯಿಂದ ತಮ್ಮ ಮನೆಗಳಿಗೆ ಕಳಿಸಲಾಯಿತೆಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾರ್ಮಿಕರ ನೋವಿನ ಮಾತು: “ನಾವುಗಳು ಸಂತೆಯಲ್ಲಿ ಹಳೆಯ ಬಟ್ಟೆಗಳನ್ನು ಮಾರಿ ದಿನಕ್ಕೆ ₹500 ರಿಂದ ₹600 ರೂಪಾಯಿಗಳನ್ನು ನಮ್ಮ ಹೊಟ್ಟೆಪಾಡಿಗೆ ವ್ಯಾಪಾರ ಮಾಡುತ್ತೇವೆ. ಅದನ್ನೂ ಕೂಡ ಪ್ರಶ್ನಿಸುತ್ತಾರೆ. ಹಾಗೆಯೇ, ನಾವು ಬಳಸುತ್ತಿದ್ದ ಬಟ್ಟೆಯ ಯಂತ್ರದ ರಾಟೆಯನ್ನು ಕತ್ತರಿಸಿದ್ದಾರೆ. ನಮ್ಮ ಜೀವನ ಹೇಗೆ ನಡೆಸುವುದು? ನಾವು ಭಾರತದ ಅಸ್ಸಾಂ ರಾಜ್ಯದ ಮೂಲದವರು. ನಾವು ಕರ್ನಾಟಕ ರಾಜ್ಯಕ್ಕೆ ಬಂದು 9 ವರ್ಷ ಕಳೆದಿದೆ. ಅದರಲ್ಲೂ ಮೂಡಿಗೆರೆ ತಾಲೂಕಿಗೆ ಕೂಲಿ ಕೆಲಸಕ್ಕೆಂದು 2 ವರ್ಷ ಹೆಚ್ಚಾಗಿದೆ. ನಾವು ಬಾಂಗ್ಲಾ ದೇಶದವರೆಂದು ಇವರು ಹೇಗೆ ಹೇಳುತ್ತಾರೆ? ಆದರೆ, ರಾಜಸ್ಥಾನದಿಂದ ಬಂದ ಮಾರವಾಡಿ ನಿವಾಸಿಗಳು ಕೋಟಿಗಟ್ಟಲೆ ವ್ಯಾಪಾರ ಮಾಡುತ್ತಾರೆ. ಅದಲ್ಲದೆ ಬಡ್ಡಿಗಳಿಗೆ ಹಣ ಕೊಡುತ್ತಾರೆ. ಇದನ್ನು ಪ್ರಶ್ನಿಸಲು ಈ ಬಜರಂಗ ದಳದವರಿಗೆ ಧೈರ್ಯ ಇಲ್ಲವೇ, ಬಡವರ ಹೊಟ್ಟೆಗೆ ಯಾಕೆ ಕನ್ನ ಹಾಕುತ್ತಾರೆ” ಎಂದು ಅಸ್ಸಾಂ ಮೂಲದ ಮೂಡಿಗೆರೆ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕ ಮೊಹಮ್ಮದ್ ಅಲಿ ಈ ದಿನ.ಕಾಮ್ ಜತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.

“ನಾವು ಬಾಂಗ್ಲಾದೇಶದವರೆಂದು ವಿಶ್ವ ಹಿಂದೂ ಪರಿಷತ್‌ನವರು ಮಹಿಳೆ ಎನ್ನದೆ ಏಕಾಏಕಿಯಾಗಿ ನನ್ನ ಸುತ್ತಲೂ ಆವರಿಸಿ ಬೇಡದ ಪ್ರಶ್ನೆಗಳನ್ನು ಕೇಳುತ್ತ ಸುಳ್ಳು ಆಪಾದನೆಗಳನ್ನು ನಮ್ಮ ಮೇಲೆ ಹಾಕುತ್ತ, ಸಾರ್ವಜನಿಕರ ಎದುರು ಕಿರುಚಾಡುತ್ತ ಬಾಯಿಗೆ ಬಂದಂತೆ ʼನೀವು ದನದ ಮಾಂಸ ಮಾರುತ್ತಿದ್ದೀರಾ ಹೇಳಿ, ನೀವು ಬಾಂಗ್ಲಾ ದೇಶದಿಂದ ಬಂದವರೆಂದು ಹೇಳಿʼ ಎಂದು ಒತ್ತಾಯ ಪೂರಕವಾಗಿ ಚಿತ್ರಹಿಂಸೆ ಕೊಟ್ಟಿದ್ದಾರೆ. ನಮ್ಮ ಮೇಲೆ ಆಪಾದನೆ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಇದರಿಂದ ಪ್ರತಿಯೊಬ್ಬರೂ ಕೂಡ ನಮ್ಮನ್ನು ಅನುಮಾನದಿಂದ ನೋಡುತ್ತಾರೆ. ಸಣ್ಣ ಮಕ್ಕಳೂ ಕೂಡ ಉಡಾಫೆಯಿಂದ ಅಣಕಿಸುತ್ತಾರೆ. ನಾವು ಅಂತಹ ಕೃತ್ಯ ಮಾಡುತ್ತಿದ್ದರೆ ನಮಗೆ ಕಾನೂನಿನಿಂದ ಶಿಕ್ಷೆ ಕೊಡಲಿ, ನಾವು ಭಾರತೀಯರು ನಮಗೂ ಬದುಕುವ ಹಕ್ಕು ಇದೆ. ನಾವೂ ಕೂಡ ಈ ನಾಡಿನ ನಾಗರಿಕರು. ನನ್ನ ಮಗ ಕರ್ನಾಟಕದಲ್ಲಿಯೇ ಹುಟ್ಟಿರುವುದು. ಅವನ ಹೆಸರಲ್ಲೇ ಈ ಊರಿನಲ್ಲಿ ವಾಸ ಮಾಡುತ್ತಿರುವ ದಾಖಲೆ ಕೊಟ್ಟು ಶಾಲೆಗೆ ಸೇರಿಸಿದ್ದೇನೆ. ನಮಗೆ ನ್ಯಾಯ ಬೇಕು. ದಯವಿಟ್ಟು ನ್ಯಾಯ ದೊರಕಿಸಿಕೊಡಿ” ಎಂದು ಮಜಿಮಾನ್ ಬೇಗಂ ಈ ದಿನ.ಕಾಮ್ ಜತೆಗೆ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

“ಸಂತೆ ನಡೆಯುವ ಸಾರ್ವಜನಿಕರಿದ್ದ ಸ್ಥಳದಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ದಿಢೀರನೆ ನನ್ನ ಕುತ್ತಿಗೆ ಕೈ ಹಿಡಿದು ʼಎಲ್ಲಿಯವನು ನೀನು, ಎಲ್ಲಿಂದ ಬಂದೆ, ನಿನ್ನ ಆಧಾರ್ ಕಾರ್ಡ್ ತೋರಿಸು, ನಕಲಿ ತೋರಿಸಿದ್ದೀಯ ಹೇಳು? ಎಷ್ಟು ಕೆಜಿ ದನದ ಮಾಂಸ ಮಾರುತ್ತಿದ್ದೀಯಾ? ಹೇಳಿಲ್ಲಾ ಅಂದರೆ ಇಲ್ಲೇ ಸಾಯಿಸುತ್ತೇನೆʼ ಎಂದು ‘ಎಲ್ಲರ ಮುಂದೆ ನನ್ನ ಶರ್ಟ್ ಹರಿದು ಬೆದರಿಕೆ ಹಾಕಿದ್ದಾರೆ. ನಮ್ಮ ಸಹಾಯಕ್ಕೆ ಯಾರೂ ಕೂಡ ಬರಲಿಲ್ಲ” ಎಂದು ದೌರ್ಜನ್ಯಕ್ಕೆ ಒಳಗಾದ ನೂರ್ ಮೊಹಮ್ಮದ್ ಮತ್ತು ಮಹಮ್ಮದ್ ಅಸ್ಲಾಮಿಕ್ ಇಸ್ರಮೆ ಕಾರ್ಮಿಕರು ತಮ್ಮ ನೋವಿನ ಮಾತುಗಳನ್ನು ಈ ದಿನ.ಕಾಮ್ ಮೂಲಕ ಹಂಚಿಕೊಂಡಿದ್ದಾರೆ.

“ಬಾಂಗ್ಲಾ ದೇಶದವರಾಗಿದ್ದರೆ ಈ ದೇಶಕ್ಕೆ ಬರಲು ಕೇಂದ್ರದಲ್ಲಿ ಹೇಗೆ ನಮಗೆ ಅವಕಾಶ ಮಾಡಿಕೊಡುತ್ತಾರೆ. ಕಾಫಿ ತೋಟದ ಕೆಲಸಕ್ಕೆ ಕಡಿಮೆ ಭತ್ಯದಲ್ಲಿ ಅಸ್ಸಾಂ ಮೂಲದವರು ಕೆಲಸ ಮಾಡುತ್ತಿದ್ದಾರೆ. ಇಲ್ಲಿಯವರಿಗೆ ₹800 ಅಥವಾ ₹900 ದಿನಕ್ಕೆ ಸಂಬಳ ಕೊಡುತ್ತೇವೆಂದರೂ ಕೆಲಸ ಮಾಡುವವರು ಬರುತ್ತಿಲ್ಲ. ಅಸ್ಸಾಂ ಭಾಗದ ಜನರು ಸರಿಯಾದ ಸಮಯಕ್ಕೆ ಕೆಲಸ ಮಾಡಿ ಮುಗಿಸಿ ಹೋಗುತ್ತಾರೆ. ಅವರಿಗೂ ಕೂಡ ಬದುಕು ಕಟ್ಟಿಕೊಳ್ಳುವುದಕ್ಕೆ ಅನುಕೂಲವಾಗುತ್ತದೆ. ಇಂತಹ ಸಹಾಯ ಮಾಡುವುದು ಬಿಟ್ಟು ಅವರ ಮೇಲೆ ದೌರ್ಜನ್ಯ ಮಾಡಿರುವುದು ಘೋರ ಅನ್ಯಾಯ” ಎಂದು ಕಾಫಿ ತೋಟದ ಎಸ್ಟೇಟ್ ನೋಡಿಕೊಳ್ಳುವ ಮೇಸ್ತ್ರಿ ಮೊಹಮ್ಮದ್ ಮತಿನ್ ಬಾಳೆಹೊನ್ನೂರು ಈ ದಿನ.ಕಾಮ್ ಜತೆಗೆ ಮಾತನಾಡಿದ್ದಾರೆ.

ಪೊಲೀಸ್ ಪ್ರಕರಣ ದಾಖಲು: “ಗಲಾಟೆ ಮಾಡುತ್ತಿದ್ದ ಸುದೇವ್ ಗುತ್ತಿಗ್ರಾಮ, ಸಂತೋಷ್ ಗೋಣಿಬೀಡು, ಪ್ರಶಾಂತ್ ಹಂಡುಗುಳಿ, ನಿತಿನ್ ಕಡೇಮಡ್ಕಲ್ ಗ್ರಾಮ, ಅನಿಲ್ ಪೂಜಾರಿ(ಹನೀಫ್) ಮೂಡಿಗೆರೆ, ಶಶಿ ಹಳೇಕೋಟೆ ಗ್ರಾಮ, ಪುನೀತ್ ಮೂಡಿಗೆರೆ, ಚೇತನ್ ಹಳೇಮೂಡಿಗೆರೆ, ಅಭಿಷೇಕ್ ಉಗ್ರೇಹಳ್ಳಿ ಸೇರಿದಂತೆ ಇನ್ನಿತರರು ಇದ್ದರು. ಈ ಕುರಿತು ಠಾಣಾ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮೇಲಧಿಕಾರಿಗಳೊಂದಿಗೆ ಚರ್ಚಿಸಿ, ಆರೋಪಿಗಳ ವಿರುದ್ಧ ಸರ್ಕಾರದ ಪರವಾಗಿ ಸ್ವ-ಪಿರ್ಯಾದು ತಯಾರಿಸಿ ಠಾಣಾ ಮೊ.ನಂ, 01/2026 ಕಲಂ, 194(2) ಬಿ.ಎನ್.ಎಸ್-2023 ರೀತ್ಯಾ ಪ್ರಕರಣ ದಾಖಲಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿದ್ದೀರಾ?ಬಾಂಗ್ಲಾದೇಶದವರೆಂದು ಶಂಕಿಸಿ ಅಸ್ಸಾಂ ಕಾರ್ಮಿಕರ ಮೇಲೆ ದೌರ್ಜನ್ಯ; ಹಿಂದೂ ಕಾರ್ಯಕರ್ತರ ವಿರುದ್ಧ FIR
ಏನೇ ಆಗಲಿ ನಮ್ಮ ಭಾರತ ಸೌಹಾರ್ದ ಮತ್ತು ಶಾಂತಿಯುತವಾಗಿರುವ ದೇಶ. ಇಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಬದುಕುವ ಹಕ್ಕಿದೆ. ದೇಶದ ಹಾಗೂ ಜನರ ಬಗ್ಗೆ ಕಾಳಜಿ ಇದ್ದರೆ ಯಾರೂ ಕೂಡ ಇಂತಹ ಅಹಿತಕರ ಘಟನೆಗಳನ್ನು ಮಾಡಲು ಮುಂದಾಗುವುದಿಲ್ಲ. ತಪ್ಪಿದ್ದರೆ ಕಾನೂನು ಪ್ರಕಾರವಾಗಿ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬಹುದಾಗಿತ್ತು. ಮುಂದಾದರೂ ನಾವೆಲ್ಲರೂ ಒಂದು ಎಂಬ ಮನೋಭಾವದೊಂದಿಗೆ ಬದುಕುವರೇ ಎಂಬುದನ್ನು ಕಾದುನೋಡಬೇಕಿದೆ. ಹಾಗೆಯೇ ಯಾರೇ ತಪ್ಪು ಮಾಡಲಿ ಸರಿಯಾದಂತಹ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲೆಂದು ಆಶಿಸೋಣ.






