ಸಾರ್ವಜನಿಕರ ದೂರಿನ ಮೇರೆಗೆ ಬಾಲಕಾರ್ಮಿಕರ ರಕ್ಷಣೆ ಕಾರ್ಯಾಚರಣೆ ನಡೆಸಿ ಮಂಗಳೂರು ನಗರದ 3 ಸಂಸ್ಥೆಗಳಲ್ಲಿ ಮೂವರು ಕಿಶೋರ ಕಾರ್ಮಿಕರನ್ನು ಕೆಲಸದಿಂದ ಬಿಡುಗಡೆಗೊಳಿಸಿ ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ.
ಮಂಗಳೂರು ನಗರದ ಸ್ಟೇಟ್‍ಬ್ಯಾಂಕ್, ಹಂಪನಕಟ್ಟೆ, ಬಂದರ್, ಸೆಂಟ್ರಲ್ ಮಾರ್ಕೆಟ್ ಮುಂತಾದ ಕಡೆ ಸೋಮವಾರ ಜಿಲ್ಲಾ ಮತ್ತು ತಾಲೂಕು ಮಟ್ಟದ ಟಾಸ್ಕ್ ಸಮಿತಿ ಸದಸ್ಯರು, ತಹಶೀಲ್ದಾರರ ನೇತೃತ್ವದಲ್ಲಿ ಕಾರ್ಮಿಕ ಅಧಿಕಾರಿಗಳು, ಹಿರಿಯ ಕಾರ್ಮಿಕ ನಿರೀಕ್ಷಕರು, ಯೋಜನಾ ನಿರ್ದೇಶಕರು, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಪೊಲೀಸ್ ಇಲಾಖೆ, ರೇಷ್ಮೆ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಚೈಲ್ಡ್ ಹೆಲ್ಪ್‍ಲೈನ್ ಸಿಬ್ಬಂದಿಗಳು ಬಾಲಕಾರ್ಮಿಕ ರಕ್ಷಣೆ ಕಾರ್ಯಾಚರಣೆ ನಡೆಸಿದ್ದರು.
ಈ ಬಗ್ಗೆ ಸಹಾಯಕ ಕಾರ್ಮಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದು, “ಬಾಲಕಾರ್ಮಿಕ ಪದ್ಧತಿ ಒಂದು ಸಾಮಾಜಿಕ ಅನಿಷ್ಟ ಪಿಡುಗಾಗಿದ್ದು, ಬಾಲ್ಯಾವಸ್ಥೆ, ಕಿಶೋರಾವಸ್ಥೆ ಕಾರ್ಮಿಕ ಕಾಯ್ದೆಯನ್ವಯ 14 ವರ್ಷದೊಳಗಿನ ಬಾಲ್ಯಾವಸ್ಥೆ ಕಾರ್ಮಿಕರನ್ನು ಯಾವುದೇ ಸಂಸ್ಥೆಯಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿರುತ್ತದೆ. 15 ವರ್ಷದಿಂದ 18 ವರ್ಷದೊಳಗಿನ ಕಿಶೋರಾವಸ್ಥೆಯ ಕಾರ್ಮಿಕರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಅಲ್ಲದೇ 15 ವರ್ಷದಿಂದ 18 ವರ್ಷದೊಳಗಿನ ಮಕ್ಕಳು ಅಪಾಯಕಾರಿ ಸಂಸ್ಥೆಯಲ್ಲಿ ದುಡಿಯುತ್ತಿರುವುದನ್ನು ನಿಯಂತ್ರಿಸಲಾಗಿರುತ್ತದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾವೇರಿ | 62 ನೂತನ ಹಾಸ್ಟೆಲ್ ಮಂಜೂರು: ಎಸ್ಎಫ್ಐ ಸಂಘಟನೆಯ ಹೋರಾಟಕ್ಕೆ ಸಂದ ಜಯ
“ಕಾಯ್ದೆಯನ್ನು ಉಲ್ಲಂಘಿಸಿದ ಮಾಲೀಕರಿಗೆ ರೂ.50,000ದವರೆಗೆ ದಂಡ ಹಾಗೂ 2 ವರ್ಷದವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ತಪ್ಪಿತಸ್ಥ ಮಾಲೀಕರ ಮೇಲೆ ಪೊಲೀಸ್ ಇಲಾಖೆಯಿಂದ ಎಫ್‌ಐಆರ್ ದಾಖಲಿಸಲಾಗುತ್ತದೆ.
ಸಾರ್ವಜನಿಕರು ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕರಿಂದ ದುಡಿಸಿಕೊಳ್ಳುತ್ತಿರುವುದು ಕಂಡುಬಂದಲ್ಲಿ ಚೈಲ್ಡ್‍ಲೈನ್:1098, ಕಾರ್ಮಿಕ ಇಲಾಖೆಯ ದೂರವಾಣಿ ಸಂಖ್ಯೆ:- 0824-2435343, 2433132, 2437479 ಮತ್ತು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ದೂರವಾಣಿ ಸಂಖ್ಯೆ 2433131ಕ್ಕೆ ಕರೆ ಮಾಡಿ ತಿಳಿಸಬಹುದು” ಎಂದು ಹೇಳಿದ್ದಾರೆ.





