ಚಿಂತಾಮಣಿ ತಾಲೂಕು ಮುರಗಮಲ್ಲದಲ್ಲಿನ ಅಮ್ಮಾಜಾನ್ ಬಾಬಾಜಾನ್ ದರ್ಗಾಗೆ ಮಂಗಳಮುಖಿ ಸಲ್ಮಾ ನಾಯ್ಕ್ ರವರ ನೇತೃತ್ವದಲ್ಲಿ ಮಂಗಳಮುಖಿಯರು ಆರ್ಧ ಕೆಜಿ ತೂಕದ ಬೆಳ್ಳಿ ದೀಪದೊಂದಿಗಿನ ಹಸ್ತವನ್ನು ಕಾಣಿಕೆಯಾಗಿ ನೀಡಿದರು.
ಮುರಗಮಲ್ಲ ದರ್ಗಾಗೆ ಭೇಟಿ ನೀಡಿ ಅಮ್ಮಾಜಾನ್ ಬಾಬಾಜಾನ್ಗೆ ವಿಶೇಷ ಪೂಜೆ ಸಲ್ಲಿಸಿದ ಮಂಗಳಮುಖಿಯರು, ಚಿಕ್ಕಬಳ್ಳಾಪುರ ಜಿಲ್ಲಾ ವಕ್ಪ್ ಆಧಿಕಾರಿ ನವೀದ್ ಪಾಷಾ ಹಾಗೂ ಮುರುಗಮಲ್ಲ ದರ್ಗಾ ಸೂಪರ್ವೈಸರ್ ತಯೂಬ್ ನವಾಜ್ ರವರ ಮುಖಾಂತರ ಬೆಳ್ಳಿದೀಪ ಹಸ್ತಾಂತರ ಮಾಡಿದರು.
ಈ ವೇಳೆ ಮಂಗಳಮುಖಿಯರ ನಾಯಕಿ ಸಲ್ಮಾನಾಯ್ಕ್ ಮಾಧ್ಯಮದವರೊಂದಿಗೆ ಮಾತನಾಡಿ, “ನಾವು ಮಂಗಳಮುಖಿಯರಾಗಿ ಎಲ್ಲಾ ಜನರು ಸುಖಶಾಂತಿ ನೆಮ್ಮಂದಿಯಿಂದ ಬಾಳಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇವೆ. ನಮಗೂ ಕೂಡ ವಸತಿ ಸೇರಿದಂತೆ ಹಲವು ಸಮಸ್ಯೆಗಳಿವೆ. ಸಚಿವರು ನಮಗೆ ಸೈಟ್ ನೀಡಿ ವಸತಿ ಸೌಲಭ್ಯ ಕಲ್ಪಿಸಬೇಕು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ನಮಗೆ ತಲುಪಿಸಬೇಕು. ಲೋಕಕಲ್ಯಾಣಾರ್ಥವಾಗಿ ಎಂದು ಎರಡು ತಿಂಗಳ ಹಿಂದೆ ಚಿಂತಾಮಣಿ ನಗರದಲ್ಲಿನ ಗ್ರಾಮದೇವತೆ ಗಂಗಮ್ಮದೇವಿಗೆ ಅರ್ಧ ಕೆಜಿ ಬೆಳ್ಳಿಯನ್ನು ನೀಡಿದ್ದು, ಇಂದು ಮುರುಗಮಲ್ಲ ಅಮ್ಮಾಜಾನ್ ಬಾಬಾಜಾನ್ ದರ್ಗಾಗೆ ಅರ್ಧ ಕೆಜಿ ತೂಕದ ಬೆಳ್ಳಿ ದೀಪವನ್ನು ಕಾಣಿಕೆಯಾಗಿ ನೀಡುತ್ತಿದ್ದೇವೆ. ನಮ್ಮಲ್ಲಿಯೂ ಕೂಡ ವಿದ್ಯಾವಂತರಿದ್ದು ಸರಕಾರ ನಮ್ಮಲ್ಲಿನ ವಿದ್ಯಾವಂತರನ್ನು ಗುರುತಿಸಿ ಸರಕಾರಿ ಉದ್ಯೋಗವನ್ನು ನೀಡಬೇಕೆಂದು” ಮನವಿ ಮಾಡಿದರು.
ಇದನ್ನೂ ಓದಿ: ಚಿಂತಾಮಣಿ | ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಮಾಜಿ ಸೈನಿಕನ ಪತ್ನಿ ಅಸ್ವಸ್ಥ; ಆಸ್ಪತ್ರೆಗೆ ದಾಖಲು
ಈ ಸಂದರ್ಭದಲ್ಲಿ ಮಂಗಳಮುಖಿಯರಾದ ಪ್ರಿಯಾ, ಸಂಗೀತ, ಬಿಂದು, ಪೂನಮ್, ಅಶ್ವಿನಿ, ಪುಷ್ಪ, ಗಂಗಾ, ಮುಸ್ಕಾನ್ ಸೇರಿದಂತೆ ಮತಿತ್ತರರು ಇದ್ದರು.





