ತಾಳಿಕಟ್ಟುತ್ತಿದ್ದ ವೇಳೆ ಮಧುಮಗಳು ಮಂಗಳ ಸೂತ್ರಕ್ಕೆ ಕೈ ಅಡ್ಡ ಹಿಡಿದು, ನನಗೆ ಈ ಮಧುಮಗ ಇಷ್ಟ ಇಲ್ಲ ಎಂದು ಮದುವೆ ನಿಲ್ಲಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಚಿಕ್ಕಬ್ಯಾಲದಕೆರೆ ಗ್ರಾಮದಲ್ಲಿ ನಡೆದಿದೆ.
ಹೊಸದುರ್ಗ ತಾಲೂಕಿನ ಚಿಕ್ಕಬ್ಯಾಲದಕೆರೆ ಗ್ರಾಮದ ಮಂಜುನಾಥ್, ಚಳ್ಳಕೆರೆ ತಾಲ್ಲೂಕಿನ ತಿಪ್ಪರೆಡ್ಡಿಹಳ್ಳಿ ಐಶ್ವರ್ಯ ಮದುವೆ ಡಿ.07ರಂದು ನಡೆಯಬೇಕಿತ್ತು. ಬುಧವಾರ ಸಂಜೆ ತಿಪ್ಪರೆಡ್ಡಿಹಳ್ಳಿ ಗ್ರಾಮದಿಂದ ಮಧುಮಗಳು ಐಶ್ವರ್ಯ ಹಾಗೂ ಸಂಬಂಧಿಕರು ಚಿಕ್ಕಬ್ಯಾಲದ ಕೆರೆ ಮಧುಮಗನ ಗ್ರಾಮಕ್ಕೆ ಬಂದಿದ್ದಾರೆ. ಗ್ರಾಮದ ಭೈರವೇಶ್ವರ ಕಲ್ಯಾಣ ಮಂಟಪದಲ್ಲಿ ಸಂಜೆ ಆರತಕ್ಷತೆ ನಡೆದಿತ್ತು.
ಗುರುವಾರ ಬೆಳಗ್ಗೆ ನಿಗದಿಯಾಗಿದ್ದ ಮೂಹೂರ್ತದಲ್ಲಿ ತಾಳಿ ಕಟ್ಟಲು ಮುಂದಾಗಿದ್ದ ವರನಿಗೆ ಕೈ ಅಡ್ಡ ಹಿಡಿದ ಮಧುಮಗಳು ಐಶ್ವರ್ಯ ನನಗೆ ಈ ಹುಡುಗ ಇಷ್ಟ ಇಲ್ಲ, ಹಾಗಾಗಿ ನಾನು ತಾಳಿ ಕಟ್ಟಿಸಿಕೊಳ್ಳುವುದಿಲ್ಲ ಎಂದು ಹಠ ಹಿಡಿದ್ದಾಳೆ. ಈ ವೇಳೆ ಪೋಷಕರು ಹಾಗೂ ಸಂಬಂಧಿಕರು ಯುವತಿ ಐಶ್ವರ್ಯಳನ್ನು ಎಷ್ಟೇ ಮನ ಒಲಿಸಲು ಮುಂದಾದರೂ ಕೂಡ ಒಪ್ಪದ ಐಶ್ವರ್ಯ, ಮದುವೆಯನ್ನು ನಿಲ್ಲಿಸಿದ್ದಾಳೆ.
ಯುವತಿ ನಡೆಗೆ ಯುವಕನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಯುವತಿ ಮನೆಯವರು ಹಾಗೂ ಯುವಕನ ಕುಟುಂಬಸ್ಥರ ನಡುವೆ ವಾಗ್ವಾದ ನಡೆದಿದೆ. ಶ್ರೀರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.





