ಚಿತ್ರದುರ್ಗದ ಸಮೀಪದಲ್ಲಿ ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಸ್ಲೀಪರ್ ಬಸ್ ಹಾಗೂ ಕಂಟೇನರ್ ಲಾರಿಯ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ 9 ಮಂದಿ ಸಜೀವ ದಹನವಾಗಿರುವ ಹೃದಯ ವಿದ್ರಾವಕ ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ
ಚಿತ್ರದುರ್ಗ ಬಳಿ ಇಂದು ನಸುಕಿನ ಜಾವ ನಡೆದ ಭೀಕರ ಅಪಘಾತದಲ್ಲಿ 9 ಜನ ಸಜೀವ ದಹನವಾಗಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ಮತ್ತು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಡುವೆ ಬರುವ ಗೋರ್ಲತ್ತು ಗ್ರಾಮದ ಬಳಿ ಬೆಳಗಿನ ಜಾವ 3 ಗಂಟೆಗೆ ಈ ಘಟನೆ ನಡೆದಿದೆ. ಮೃತಪಟ್ಟವರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಮೃತಪಟ್ಟವರ ನಿಖರವಾದ ಮಾಹಿತಿಯನ್ನು ಪೊಲೀಸ್ ಇಲಾಖೆ ಇನ್ನಷ್ಟೇ ನೀಡಬೇಕಿದೆ.

ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಸೀಬರ್ಡ್ ಬಸ್ಗೆ ಹಿರಿಯೂರಿನಿಂದ ಬೆಂಗಳೂರು ಕಡೆ ಬರುತ್ತಿದ್ದ ಕಂಟೇನರ್ ಲಾರಿ ಮುಖಾಮುಖಿ ಡಿಕ್ಕಿಯಾದ ಕಾರಣ ಈ ದುರಂತ ಸಂಭವಿಸಿದೆ.
ಲಾರಿ ಚಾಲಕನ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎನ್ನಲಾಗಿದ್ದು ಡಿವೈಡರ್ ದಾಟಿ ಬಂದು ಡಿಕ್ಕಿ ಹೊಡೆದಿದೆ.

ಸದ್ಯದ ಮಾಹಿತಿ ಪ್ರಕಾರ 9 ಮಂದಿ ಸಾವನ್ನಪ್ಪಿರುವುದು ಖಚಿತವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಮೃತರೆಲ್ಲರೂ ಬಸ್ನಲ್ಲಿ ಪ್ರಯಾಣಿಸುತ್ತಿದ್ದವರೇ ಆಗಿದ್ದು, ಗುರುತು ಹಿಡಿಯಲಾರದಷ್ಟು ಸುಟ್ಟು ಕರಕಲಾಗಿರುವುದಾಗಿ ವರದಿಯಾಗಿದೆ. ಮೃತಪಟ್ಟವರ ವಿವರಗಳು ಇನ್ನಷ್ಟೇ ಸಿಗಬೇಕಿದೆ.
ಬಸ್ ಅಪಘಾತದಲ್ಲಿ ಬದುಕಿರುವ ಚಾಲಕ ಮೊಹಮ್ಮದ್ ರಫೀಕ್ ಹೇಳಿಕೆ ನೀಡಿದ್ದು, ನಾನು ಚಾಲನೆ ಮಾಡುವಾಗ ವೇಗವಾಗಿ ಲಾರಿ ಬಂತು. ಅದನ್ನ ತಪ್ಪಿಸಲು ನಾನು ಹೋದಾಗ ಪಕ್ಕದಲ್ಲಿ ಇನ್ನೊಂದು ಬಸ್ ಬಂತು.ಲಾರಿಯವನು ನೇರವಾಗಿ ಡಿಸೇಲ್ ಟ್ಯಾಂಕಿಗೆ ಬಂದು ಗುದ್ದಿದ್ದಾನೆ. ಇದರಿಂದಾಗಿ ಬೆಂಕಿ ಉಂಟಾಗಿದೆ. ನನಗೆ ಆ ಕ್ಷಣದಲ್ಲಿ ಏನು ಆಯ್ತು ಅಂತ ಗೊತ್ತಾಗಲಿಲ್ಲ” ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇಳೆ ಹೇಳಿಕೆ ನೀಡಿದ್ದಾರೆ.






