ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಭದ್ರಾ ಮೇಲ್ದಂಡೆ ಯೋಜನೆಯನ್ನು ನಿರ್ವಹಿಸಲು ಮತ್ತು ಅನುಷ್ಠಾನಕ್ಕೆ ತರಲು ಚಿತ್ರದುರ್ಗದ ಪ್ರಧಾನ ಕಛೇರಿಗೆ ಮುಖ್ಯ ಇಂಜಿನಿಯರ್ ಮತ್ತು ಹಿರಿಯ ಅಧಿಕಾರಿಗಳನ್ನು ನೇಮಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನಲ್ಲಿ ಪ್ರತಿಭಟನೆ ನಡೆಸಿ ಕಾರ್ಯಕರ್ತರು, ಮೊಳಕಾಲ್ಮೂರು ತಹಶೀಲ್ದಾರ್‌ಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ಭದ್ರಾ ಮೇಲ್ದಂಡ ಪ್ರಧಾನ ಕಛೇರಿಯಲ್ಲಿ ಮುಖ್ಯ ಇಂಜಿನಿಯರ್ ಹುದ್ದೆ ಖಾಲಿಯಿದೆ. ತಕ್ಷಣ ಖಾಲಿ ಹುದ್ದೆ ಭರ್ತಿ ಮಾಡಬೇಕು. ಕಾಮಗಾರಿಗಳು ನಡೆಯುವುದು ವಿಳಂಬವಾಗಿದ್ದು, ಕಾಮಗಾರಿ ತ್ವರಿತವಾಗಿ ನಡೆಯಬೇಕಾದರೆ ಖಾಲಿ ಇರುವ ಹುದ್ದೆಗಳನ್ನು ತುಂಬ ಬೇಕು. ಕಾಮಗಾರಿಗಳಿಗೆ ಹೆಚ್ಚು ಹಣ ಬಿಡುಗಡೆ ಮಾಡಿ ತ್ವರಿತವಾಗಿ ಜಿಲ್ಲೆಯ ಜನರಿಗೆ ನಿರ್ಧಿಷ್ಟ ಅವಧಿಯೊಳಗೆ ನೀರು ಕೊಡಬೇಕು” ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೇಡರಹಳ್ಳಿ ಬಸವರೆಡ್ಡಿ, “ವಿವಿಧ ಬೇಡಿಕೆಗಳೊಂದಿಗೆ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸುತ್ತಿದ್ದೇವೆ. ಸರ್ಕಾರ ರೈತ ಸಂಘದ ಬೇಡಿಕೆಗಳನ್ನು ಪರಿಗಣಿಸಿ ಶೀಘ್ರವೇ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಸಿದ್ದಾರೆ.
ಪ್ರತಿಭಟನಾಕಾರರ ಹಕ್ಕೊತ್ತಾಯಗಳು
- ಮುಖ್ಯ ಇಂಜಿನಿಯರ್ ಅವರನ್ನು ತಕ್ಷಣ ನೇಮಿಸಬೇಕು.
- ರೈತರ ಜಮೀನಿನ ಪರಿಹಾರ ಕೋಟಾದಲ್ಲಿ ಭ್ರಷ್ಟಾಚಾರವಾಗುತ್ತಿದ್ದು, ಇದನ್ನು ತಡೆಯಬೇಕು.
- ಭದ್ರಾ ಮೇಲ್ದಂಡೆ ಯೋಜನೆಗೆ ಜಮೀನು ನೀಡಿರುವ ರೈತರಿಗೆ ತಕ್ಷಣವೇ ಪರಿಹಾರ ಬಿಡುಗಡೆ ಮಾಡಬೇಕು.
- ಪರಿಹಾರದ ಮೊತ್ತವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿಸಬೇಕು.
- ಈ ಹಿಂದೆ ಜಮೀನು ನೀಡಿದ್ದ ರೈತರಿಗೆ ಇನ್ನೂ ಪರಿಹಾರ ದೊರೆತಿಲ್ಲ. ಅವರಿಗೂ ಕೂಡಲೇ ಪರಿಹಾರ ಪಾವತಿಸಬೇಕು.
- ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕುಗಳ ರೈತರು ಬರದಿಂದ ತತ್ತರಿಸಿದ್ದಾರೆ. ಅವರಿಗೆ ನೆರವಾಗಲು ಈ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು.
ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಮಹಾಂತೇಶ್, ಕಾರ್ಯದರ್ಶಿ ಎಸ್ ಮಂಜುನಾಥ್, ಕಾರ್ಯಧ್ಯಕ್ಷ ಎಸ್ ಟಿ ಚಂದ್ರಣ್ ಪಾಪಣ್ಣ,ಈರೇಶಿ, ಮಂಜಣ್ಣ, ಬೋರಯ್ಯ ಇತರ ಸದಸ್ಯರು ಮತ್ತು ರೈತರು ಇದ್ದರು.




