ಚಿತ್ರದುರ್ಗದ ಸರ್ಕಾರಿ ಕಚೇರಿಯೊಂದರಲ್ಲಿ ಕಚೇರಿ ಅಧಿಕಾರಿಗಳೇ, ಔತಣಕೂಟಕ್ಕಾಗಿ ಮದ್ಯದ ವ್ಯವಸ್ಥೆ (ಎಣ್ಣೆ ಪಾರ್ಟಿ) ಏರ್ಪಡಿಸಿ ಸೇವನೆ ಮಾಡಿದ ಘಟನೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಘಟನೆ ಹಿನ್ನೆಲೆಯಲ್ಲಿ ಐವರು ನೌಕರರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
ಮಕ್ಕಳಿಗೆ ಪಾಠ ಹೇಳಿಕೊಡುವ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಈ ಘಟನೆ ನಡೆದಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ಶಿಕ್ಷಣ ಇಲಾಖೆ ನೌಕರರಿಂದ ಚಿತ್ರದುರ್ಗ ಡಿಡಿಪಿಐ ಕಚೇರಿಯಲ್ಲೇ ‘ಎಣ್ಣೆ ಪಾರ್ಟಿ’ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿರುವ ಹಿರಿಯ ಅಧಿಕಾರಿಗಳು, ಕಚೇರಿಯ ವಾಹನ ಶೆಡ್ ನಲ್ಲಿ ತಯಾರಿ ನಡೆದಿತ್ತು, ಅಲ್ಲೇ ವಿಡಿಯೋ ಮಾಡಲಾಗಿದೆ. ಆನಂತರ ಪಾರ್ಟಿಯನ್ನು ಹೊರಕ್ಕೆ ವರ್ಗಾಯಿಸಲಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ. ಆದರೂ ಅದು ಕಚೇರಿ ಒಳಾಂಗಣದಂತೆ ದೃಶ್ಯದಲ್ಲಿ ಕಂಡುಬರುತ್ತದೆ.
ಕಚೇರಿಯ ಸಿಬ್ಬಂದಿಯೊಬ್ಬರು ಹೊಸ ಕಾರು ಖರೀದಿಸಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗ ಡಿಡಿಪಿಐ ಕಚೇರಿಯಲ್ಲೇ 20 ಲೀಟರ್‌ನ ವಾಟರ್ ಕ್ಯಾನ್‌ಗೆ ನೌಕರರೊಬ್ಬರು ಮದ್ಯವನ್ನು ಬೆರೆಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಅಲ್ಲದೇ ಒಬ್ಬರು ಅಲ್ಲಿಯೇ ಅದರ ರುಚಿ ಪರೀಕ್ಷಿಸಿರುವ ದೃಶ್ಯ, ಕಂಡು ಬಂದಿದೆ. ಇದನ್ನು ಅಲ್ಲಿಯೇ ಇದ್ದ ನೌಕರರೊಬ್ಬರು ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು.
ಇದನ್ನೂ ಓದಿ: ಚಿತ್ರದುರ್ಗ | ಸ್ವಚ್ಛತೆ ಕೊರತೆ ಅನೈರ್ಮಲ್ಯ; ಕ್ರಮ ಕೈಗೊಳ್ಳದ ಗ್ರಾ. ಪಂ. ಅಧಿಕಾರಿಗಳ ವರ್ಗಾವಣೆಗೆ ಆಗ್ರಹ
ಭವಿಷ್ಯದ ಮಕ್ಕಳನ್ನು ರೂಪಿಸುವ ಹೊಣೆಗಾರಿಕೆ ಇರುವ ಶಿಕ್ಷಣ ಇಲಾಖೆ ಸಿಬ್ಬಂದಿ ಸಮಾಜಕ್ಕೆ ಮಾದರಿಯಾಗಬೇಕು. ಆದರೆ ನೌಕರರು ಸರ್ಕಾರಿ ಕಚೇರಿಯಲ್ಲಿ ಮದ್ಯ ಉಪಯೋಗಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಮತ್ತು ಚರ್ಚೆಗೆ ಗ್ರಾಸವಾಗಿದೆ. ಈ ದೃಶ್ಯ ವೈರಲ್ ಆಗುತ್ತಿದ್ದಂತೆ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳ ಗಮನಕ್ಕೆ ಬಂದಿತ್ತು. ತಕ್ಷಣ ಕ್ರಮ ಕೈಗೊಂಡಿರುವ ಇಲಾಖೆ, ಐವರು ನೌಕರರನ್ನು ಅಮಾನತುಗೊಳಿಸಿದೆ.
ಇಲಾಖೆ ಉಪನಿರ್ದೇಶಕ ಮಂಜುನಾಥ್ ಅವರು ಶಿಸ್ತುಕ್ರಮದಡಿಯಲ್ಲಿ ರವಿಕುಮಾರ್, ಸುನಿಲ್, ಗಣೇಶ್, ಸ್ವಾಮಿ ಹಾಗೂ ತಿಪ್ಪೇಸ್ವಾಮಿ ಎಂಬವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.





