ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಚುನಾವಣೆ ಹಾಗೂ ಮತದಾನ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಮತದಾನದ ಮೂಲಕ ಉತ್ತಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿ. ಆದರೆ ಬಹುತೇಕರು ಮತದಾನದಿಂದ ದೂರ ಉಳಿಯಲು ಕಾರಣ ಹುಡುಕುವ ಸ್ಥಿತಿಗೆ ಬಂದಿದ್ದಾರೆ. ಚುನಾವಣೆಗೆ ಸಿಗುವ ರಜೆ ಮೋಜು, ಮಸ್ತಿಗೆ, ಪ್ರವಾಸಕ್ಕೆ ಬಳಕೆ ಆಗುತ್ತಿದೆ.
ಇದಕ್ಕೆ ಅಪವಾದ ಎನ್ನುವಂತೆ ಇಲ್ಲೊಂದು ಘಟನೆ ನಡೆದಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ಮೊದಲನೇ ಹಂತದ ಚುನಾವಣೆ ಏಪ್ರಿಲ್ 26ರಂದೇ ಮದುವೆ ಇದ್ದರೂ, ಮಾಂಗಲ್ಯ ಧಾರಣೆ ಬಳಿಕ ಮದುವೆ ಮಂಟಪದಿಂದ ಸೀದಾ ಮತಗಟ್ಟೆಗೆ ಬಂದು ಮತದಾನ ಮಾಡುವ ಮೂಲಕ ಎರಡು ಜೋಡಿಗಳು ತಮ್ಮ ಪ್ರಜಾಸತ್ತಾತ್ಮಕ ಜವಾಬ್ದಾರಿ ಮೆರೆದಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನ ಭೀಮಸಮುದ್ರ ಗ್ರಾಮದಲ್ಲಿ ಇಂದು ದಾಂಪತ್ಯಕ್ಕೆ ಪಾದಾರ್ಪಣೆ ಮಾಡಿದ ರಂಗಸ್ವಾಮಿ ಹಾಗೂ ಅಂಬಿಕಾ ಭೀಮಸಮುದ್ರದ ಮತಗಟ್ಟೆ ಸಂಖ್ಯೆ 268ಕ್ಕೆ ಆಗಮಿಸಿ ಮತದಾನ ಮಾಡಿದ್ದಾರೆ. ಇವರಿಬ್ಬರು ಮತದಾನಕ್ಕೆ ಆಗಮಿಸಿದ್ದನ್ನು ಕಂಡು ಮತದಾನ ಕೇಂದ್ರದ ಸಿಬ್ಬಂದಿ ಮತ್ತು ಮತದಾರರು ಖುಷಿಯಾಗಿದ್ದು, ಮತದಾನದ ನಂತರ ಇಬ್ಬರಿಗೂ ಶುಭಾಶಯ ಕೋರಿದರು.
ಇಬ್ಬರೂ ಒಂದೇ ಗ್ರಾಮದವರಾಗಿದ್ದು, ಒಂದೇ ಮತಗಟ್ಟೆಯಲ್ಲಿ ಮತದಾನ ಮಾಡಿರುವುದು ವಿಶೇಷವಾಗಿದೆ. ಇನ್ನೂ ಚಿತ್ರದುರ್ಗ ತಾಲೂಕಿನ ಸಿರಿಗೆರೆ ಸಮೀಪದ ವಿಜಾಪುರದಲ್ಲಿ ಇಂದು ಮದುವೆಯಾದ ಅರುಣ್ ಮತ್ತು ಕಾವ್ಯಾ ಕೂಡಾ ವಿಜಾಪುರದ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಂಸದ, ಮಾಜಿ ಕೇಂದ್ರ ಸಚಿವ ಶ್ರೀನಿವಾಸ ಪ್ರಸಾದ್ ಆರೋಗ್ಯ ಸ್ಥಿತಿ ಗಂಭೀರ
ಮಾಂಗಲ್ಯಸೂತ್ರ ಧಾರಣೆಯ ಬಳಿಕ ವಿಜಾಪುರದ ಮತಗಟ್ಟೆ ಸಂಖ್ಯೆ 13ಕ್ಕೆ ತೆರಳಿ ಸರತಿ ಸಾಲಿನಲ್ಲಿ ನಿಂತು ಇಬ್ಬರೂ ತಮ್ಮ ಮತ ಚಲಾಯಿಸಿದ್ದಾರೆ.
ಇಲ್ಲಿಯೂ ಅರುಣ್ ಮತ್ತು ಕಾವ್ಯಾ ಇಬ್ಬರೂ ವಿಜಾಪುರ ಗ್ರಾಮದವರಾಗಿದ್ದು, ಒಂದೇ ಮತಗಟ್ಟೆಯಲ್ಲಿ ಮತ ಚಲಾಯಿಸಿರುವುದು ವಿಶೇಷವಾಗಿದೆ.





