ಆಗಸ್ಟ್ 2022ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದಾಗಿ ಚಿತ್ರದುರ್ಗದಲ್ಲಿ ಗಣಿಗಾರಿಕೆ ಹೆಚ್ಚಾಗಿದೆ. ಇದು ವಾರ್ಷಿಕ ಕಬ್ಬಿಣದ ಅದಿರು ಉತ್ಪಾದನಾ ಮಿತಿಯನ್ನು 7ರಿಂದ 15 ಮಿಲಿಯನ್ ಮೆಟ್ರಿಕ್ ಟನ್‌ಗಳಿಗೆ ಹೆಚ್ಚಿಸಿದೆ. ಇದರಿಂದ ಪರಿಸರ ನಾಶವಾಗಿ, ಸ್ಥಳೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವುಗಳ ನಡುವೆಯೇ ಜೆಎಸ್‌ಡಬ್ಲ್ಯೂ ಸ್ಟೀಲ್‌ನಂತಹ ಖಾಸಗಿ ಕಂಪೆನಿಗಳು ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿವೆ.
ಚಿತ್ರದುರ್ಗ ಜಿಲ್ಲೆಯ ಮೇಗಳಹಳ್ಳಿ, ಭೀಮಸಮುದ್ರ ಹಿರೇಕಂದವಾಡಿ, ತಣಿಗೆಹಳ್ಳಿ, ಪಳಕೇಹಳ್ಳಿ, ಶಿವಗಂಗಾ, ಮಹದೇವಪುರ, ಮಳಲಿ, ಮದಕರಿಪುರ, ಮಾಡದಕೆರೆ, ನಾಕಿಕೆರೆ, ಕಿಟ್ಟದಹಳ್ಳಿ- ಈ ಗ್ರಾಮಗಳಿಗೆ ಕಾಲಿಟ್ಟರೆ ಕೆಂಪು ಬಣ್ಣದ ಧೂಳು ಸ್ವಾಗತಿಸುತ್ತದೆ. ಸ್ವಲ್ಪ ಹೊತ್ತು ನಿಂತರೆ ಮೈಮೇಲೆ ಕೆಂಪು ಮಣ್ಣು ಮಿಶ್ರಿತ ಬಣ್ಣದಲ್ಲಿ ಕಾಣಸಿಗುತ್ತವೆ. ಮಳೆ ಬಂದರೆ ಹರಿಯುವ ನೀರೆಲ್ಲ ಕೆಂಪು ಕೆಂಪಾಗಿ ಮಡುಗಟ್ಟಿದ ರಕ್ತದಂತೆ ಹರಿಯುತ್ತಿದೆಯೇನೋ ಎನ್ನುವಂತೆ ಕಾಣಿಸುತ್ತದೆ. ಎಗ್ಗಿಲ್ಲದೆ ನಡೆಯುತ್ತಿರುವ ಗಣಿಗಾರಿಕೆಯೇ ಇದಕ್ಕೆ ಕಾರಣವಾಗಿದೆ.
ಕೆಲವೆಡೆ ಜಗಲಿ ಕಟ್ಟೆಯ ಮೇಲೆ ಕೆಮ್ಮುತ್ತ ಕುಳಿತ ಮಧ್ಯ ವಯಸ್ಕರು, ಮುದುಕರು; ಇನ್ನೊಂದೆಡೆ ಧೂಳು ಮಿಶ್ರಿತ ಹಸಿರು, ಒಣ ಮೇವನ್ನು ತಿಂದು ಸಣಕಲಾಗಿದ್ದ ದನ-ಕರುಗಳು. ಇಂದು ಮೇವಿಗೆ ಎಲ್ಲಿಗೆ ಹೊಡೆದುಕೊಂಡು ಹೋಗಲಿ ಎನ್ನುವ ಚಿಂತೆಯ ದನಗಾಹಿ. ಇದು ಬೆಟ್ಟ ಗುಡ್ಡಗಳನ್ನು ಕಬ್ಬಿಣದ ಅದಿರು ಗಣಿಗಾರಿಕೆ ನಡೆಸುವ ಕಂಪನಿಗಳ ಸುಪರ್ದಿಗೆ ಒಪ್ಪಿಸಿ, ಅದರ ಪ್ರತಿಕೂಲ ಪರಿಣಾಮಗಳನ್ನು ಅನುಭವಿಸುತ್ತಿರುವ ಹಳ್ಳಿಗಳ ಸ್ಥಿತಿ. ಇದು ಚಿತ್ರದುರ್ಗ ಜಿಲ್ಲೆಯಲ್ಲಿ ಗಣಿಗಾರಿಕೆಯಿಂದ ನಲುಗಿರುವ ಹಲವು ಹಳ್ಳಿಗಳಲ್ಲಿ ಕಂಡುಬರುವ ಸಾಮಾನ್ಯ ದೃಶ್ಯ.
ಇಲ್ಲಿನ ಪ್ರಾಕೃತಿಕ ಸಂಪತ್ತೇ ಅದಕ್ಕೆ ಶಾಪವಾಗಿ ಬದಲಾಗಿದೆ. ಕಾಣುವ ದೂರದ ಸಾಲು ಗುಡ್ಡಗಳು, ಕೆಲವೆಡೆ ಅಲ್ಲಲ್ಲಿ ಬೋಳಾದ ಗುಡ್ಡಗಳು, ಅವುಗಳ ಮಧ್ಯದಲ್ಲಿ ದೊಡ್ಡ ದೊಡ್ಡ ಯಂತ್ರಗಳು, ಜೆಸಿಬಿ, ಇಟಾಚಿ ಮತ್ತು ಲಾರಿಗಳಂತಹ ವಾಹನಗಳ ಕಾರ್ಯಾಚರಣೆಯಿಂದಾಗಿ ಹರಡಿರುವ ಧೂಳು, ಬೋಳುಗುಡ್ಡದ ದೃಶ್ಯಗಳು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸೇರಿದಂತೆ ಹೊಳಲ್ಕೆರೆ ತಾಲೂಕುಗಳ ಮೇಗಳಹಳ್ಳಿ, ಭೀಮಸಮುದ್ರ ಹಿರೇಕಂದವಾಡಿ, ತಣಿಗೆಹಳ್ಳಿ, ಪಳಕೇಹಳ್ಳಿ, ಶಿವಗಂಗಾ, ಮಹದೇವಪುರ, ಮಳಲಿ, ಮದಕರಿಪುರ, ಮಾಡದಕೆರೆ, ನಾಕಿಕೆರೆ, ಕಿಟ್ಟದಹಳ್ಳಿ ಹಾಗೂ ವಿಶಾಲ ನೀರ್ಥಡಿ ಅರಣ್ಯ ಪ್ರದೇಶಗಳಲ್ಲಿ ಸಾಮಾನ್ಯವಾಗಿವೆ.

ಪ್ರಪಂಚ ಮತ್ತು ದೇಶಕ್ಕೆ ಕಬ್ಬಿಣದ ಅವಶ್ಯಕತೆಗಾಗಿ ಖನಿಜ ಸಂಪತ್ತು, ಪ್ರಾಕೃತಿಕ ಸಂಪತ್ತು ಹೊಂದಿರುವ ಹಳ್ಳಿಗಳು ಗಣಿ ಮಾಲೀಕರ ಧನದಾಹಕ್ಕೆ ಬಲಿಯಾಗಿ ನರಳಿ ಹೋಗುತ್ತಿವೆ. ನಿತ್ಯ ಲಕ್ಷಾಂತರ ಟನ್ ಕಬ್ಬಿಣ ಸೇರಿದಂತೆ ಖನಿಜಗಳ ಅದಿರಿನ ಮಣ್ಣಿನ ಸಾಗಾಟಕ್ಕೆ ಅಪಘಾತ ಹಾಗೂ ಆರೋಗ್ಯ ಸಮಸ್ಯೆಯಿಂದಾಗಿ ಜನ ಜೀವ ಕಳೆದುಕೊಂಡಿದ್ದಾರೆ. ಗಣಿಗಾರಿಕೆಯಿಂದ ಸುತ್ತಮುತ್ತಲಿನ ಅಂತರ್ಜಲ ಮೂಲಗಳು ಬತ್ತುತ್ತಿದೆ.
ಇಲ್ಲಿನ ಭೀಮಸಮುದ್ರ ಗ್ರಾಮದ ಸಮೀಪದ ಹಳ್ಳಿಗಳ ದಾರಿ ಪಕ್ಕದಲ್ಲಿ ಎಮ್ಮೆ ಮೇಯಿಸುತ್ತಿದ್ದ ರೈತ ಅಂಜಿನಪ್ಪ ಮಾತನಾಡಿ, “ಈಗ ಗಣಿಗಾರಿಕೆ ನಡೆಯುತ್ತಿರುವುದು ಗೋಮಾಳ ಪ್ರದೇಶ. ಈ ಸರ್ಕಾರಿ ಜಮೀನಿನಲ್ಲಿ ನನ್ನಂತಹ ಅನೇಕ ರೈತರು ಇಲ್ಲಿ ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೆವು. ನನ್ನ ಜಮೀನೂ ಸೇರಿದಂತೆ ಅರಣ್ಯ ಪ್ರದೇಶವನ್ನು ಗಣಿಗಾರಿಕೆ ಇಲಾಖೆ, ಖಾಸಗಿಯವರಿಗೆ ಗಣಿಗಾರಿಕೆಗೆ ನೀಡಿದೆ” ಎಂದು ಹೇಳಿದರು.

“ಆಗ ನಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸುವ ಸಮಯದಲ್ಲಿ ನಮಗೆ ಉದ್ಯೋಗ ನೀಡುವ ಆಸೆ ತೋರಿಸಿದರು. ಆರಂಭದಲ್ಲಿ ಒಂದೆರಡು ವರ್ಷ ಭದ್ರತಾ ಸಿಬ್ಬಂದಿ ಹಾಗೂ ಒಳಗಡೆ ಸ್ವಚ್ಛತೆಯಂತಹ ಕೆಲಸಕ್ಕೆ ಸೇರಿಸಿಕೊಂಡರು. ನಂತರ ನಮ್ಮನ್ನು ಅಲ್ಲಿಂದ ಹೊರನೂಕಲಾಗಿದ್ದು, ಜಮೀನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ನಾವು ಜಮೀನು ಇಲ್ಲದೆ, ಅತ್ತ ಕೆಲಸವೂ ಇಲ್ಲದೆ ಅತಂತ್ರವಾಗಿ ಬದುಕುತ್ತಿದ್ದೇವೆ. ಅಲ್ಲದೆ ಇಲ್ಲಿ ಓಡಾಡುವ ದೊಡ್ಡ ದೊಡ್ಡ ಲಾರಿ, ಬೃಹತ್ ಯಂತ್ರಗಳ ಅಬ್ಬರಕ್ಕೆ ಹಲವು ಜೀವಗಳು ಬಲಿಯಾಗಿವೆ. ಧೂಳಿನಿಂದಾಗಿ ಆರೋಗ್ಯ ಕೂಡ ಹದಗೆಡುತ್ತಿದ್ದು ಕೆಮ್ಮು, ಅಸ್ತಮಾ, ದಮ್ಮು ಸೇರಿದಂತೆ ಹಲವು ಉಸಿರಾಟದ ಕಾಯಿಲೆಗಳಿಗೆ ಹಳ್ಳಿಗರು ಆಸ್ಪತ್ರೆಗೆ ಅಡ್ಡಾಡುವಂತಾಗಿದೆ” ಎಂದು ಸಂಕಟ ತೋಡಿಕೊಂಡರು.

ಮನುಷ್ಯನ ಅವಶ್ಯಕತೆ ಪೂರೈಸಲೆಂದೇ ಇರುವವು ಎಂಬಂತೆ ದುರಾಸೆಯಿಂದ ನೂರಾರು ಮೀಟರ್‌ಗಳ ಎತ್ತರದ ಗುಡ್ಡಗಳನ್ನು ಸಮನಾಗಿಸಿ ಭೂಮಿಯ ಒಡಲನ್ನು ಬಗೆದು ಬರಡಾಗಿಸಿ ಮನುಷ್ಯ ತನ್ನ ಹಣದಾಸೆಗೆ, ತನ್ನ ಅವಶ್ಯಕತೆಗೆ ಭೂಸಂಪತ್ತನ್ನು ನಿಸ್ಪೃಹವಾಗಿ ಬಳಸಿ, ಪಶು ಪಕ್ಷಿಗಳು, ಸರಿಸೃಪಗಳು, ಮರ ಗಿಡಗಳು ಸೇರಿದಂತೆ ಪ್ರಕೃತಿ ನಾಶಕ್ಕೆ ಸರ್ಕಾರವೇ ಮುಂದಾಗಿದೆ.
ನೂರಾರು ಲಾರಿಗಳಲ್ಲಿ, ಹತ್ತಾರು ರೈಲುಗಳಲ್ಲಿ ನಿತ್ಯವೂ ಲಕ್ಷಾಂತರ ಟನ್ ಕಬ್ಬಿಣ, ಮ್ಯಾಂಗನೀಸ್ ಸೇರಿದಂತೆ ಹಲವು ಬಗೆಯ ಅದಿರು ರೂಪದ ಮಣ್ಣನ್ನು ಬಗೆದು ಸಾಗಿಸಲಾಗುತ್ತಿದೆ. ಇದರಿಂದಾಗಿ ಗಣಿ ಮಾಲೀಕರ ಸಂಪತ್ತು ಮೇಲೇರಿ, ಸುತ್ತಮುತ್ತಲಿನ ಹಳ್ಳಿಗರ ಬದುಕು ಪಾತಾಳಕ್ಕಿಳಿಯುತ್ತಿದೆ.

ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಅದಿರು(ಮಣ್ಣು) ಗಣಿಗಾರಿಕೆ ಹಳ್ಳಿಗಳಲ್ಲಿನ ಪರಿಸರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಈ ಹಿಂದೆ 2008-09ರಲ್ಲಿ ಬಳ್ಳಾರಿ ಗಣಿ ಧಣಿಗಳ ಆರ್ಭಟ, ಅವರ ಸಂಪತ್ತಿಗೆ ಮಾರುಹೋದ ಜಿಲ್ಲೆಯ ಅನೇಕ ಸ್ಥಳೀಯ ಯುವಕರು, ಹಿರಿಯರು ಊರುಗಳ ಸುತ್ತಮುತ್ತಲ ಗುಡ್ಡಗಳಲ್ಲಿ, ಖಾಸಗಿ ಜಮೀನುಗಳಲ್ಲಿ ಕೂಡ ಅಕ್ರಮ ಗಣಿಗಾರಿಕೆಗೆ ಕೈ ಹಾಕಿದ್ದರು. ವಾರ ತಿಂಗಳು ಕಳೆಯುವಷ್ಟರಲ್ಲಿ ತಾವೂ ಕೂಡ ಗಣಿಧಣಿಗಳಾಗುವ ಕನಸು ಕಂಡಿದ್ದರು. ಬದಲಾದ ಸನ್ನಿವೇಶದಲ್ಲಿ ಗಣಿ ಧೂಳಿನ ವ್ಯವಹಾರದಲ್ಲಿ ಹೊಲ ಮನೆ ಸೇರಿದಂತೆ ಲಕ್ಷಾಂತರ ರೂಪಾಯಿ ಕಳೆದುಕೊಂಡರು. ಈಗ ಅವರೆಲ್ಲ ನಿರ್ಗತಿಕರು. ಮುಂದಿನ ದಿನಗಳ ಅನೇಕ ಕಾನೂನುಗಳಿಂದಾಗಿ ಹಳ್ಳಿಗರ ಅಕ್ರಮ ಗಣಿಗಾರಿಕೆ ನಿಂತು ಹೋದರೂ, ಪರವಾನಗಿ ಪಡೆದ ಕಂಪೆನಿಗಳ ಕೃಪಾಪೋಷಿತ ಗಣಿಗಾರಿಕೆ ಅಕ್ರಮವಾಗಿ ಮುಂದುವರೆದಿದೆ.

ಅಕ್ಕಪಕ್ಕದ ಜಮೀನುಗಳ ಒತ್ತುವರಿ, ಸರ್ಕಾರಿ ಜಮೀನುಗಳ ಕಬಳಿಕೆ, ಅರಣ್ಯ ನಾಶ, ಗಡಿನಾಶದಂತಹ ಕೃತ್ಯಗಳು, ಅನುಮತಿ ಪಡೆದ ಗಣಿಗಾರಿಕೆಯ ಕಂಪೆನಿಗಳಿಂದ ಸಮೃದ್ಧವಾಗಿ ಮುಂದುವರೆದಿದೆಯೆಂದು ಸ್ಥಳೀಯರು ಆಪಾದಿಸುತ್ತಾರೆ. ಇದರಿಂದಾಗಿ ಸರ್ಕಾರದಿಂದ ಪರವಾನಗಿ ಪಡೆದ ಗಣಿಗಾರಿಕೆ ಜತೆಗೆ ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆಯ ವ್ಯಾಪ್ತಿ ನಿಯಂತ್ರಣಕ್ಕೆ ಸಿಗದೇ ಹಬ್ಬಿಕೊಂಡಿವೆ. ಅನುಮತಿಗಿಂತ ಹೆಚ್ಚೆಚ್ಚು ಮತ್ತು ಆಳವಾಗಿ ಭೂಮಿಯನ್ನು ಅಗೆದು ಗಣಿಗಾರಿಕೆ ನಡೆಸುತ್ತಿದ್ದಾರೆಂಬುದು ಪರಿಸರ ಪ್ರಿಯರ ಆರೋಪವಾಗಿದೆ.
ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಯ ಹೊಡೆತಕ್ಕೆ ಭೌಗೋಳಿಕ ಪ್ರದೇಶದ ನಕ್ಷೆಯೇ ಬದಲಾಗಿಹೋಗಿದೆ. ಕೆಲ ಹಳ್ಳಿಗಳ ವ್ಯಾಪ್ತಿಗಳಲ್ಲಿದ್ದ ಬೆಟ್ಟ ಗುಡ್ಡಗಳು ಕಣ್ಮರೆಯಾಗಿ ಸಮತಟ್ಟಾದ ಪ್ರದೇಶ, ದೊಡ್ಡ ದೊಡ್ಡ ಗುಂಡಿಗಳು, ಮಣ್ಣಿನ ರಾಶಿಗಳು ಕಂಡುಬರುತ್ತಿವೆ. ಕೆಲವೇ 8 -10 ವರ್ಷಗಳ ಹಿಂದೆ ಇದ್ದ ಆಡು ಕುರಿ ದನ ಮೇಕೆಗಳ ಮೇವಿಗೆ ಆಶ್ರಯ ತಾಣವಾಗಿದ್ದ, ಅಪರೂಪದ ದಿನನಿತ್ಯ ಚಿಲಿಪಿಲಿ ಕೇಳಿಸುತ್ತಿದ್ದ ಪಕ್ಷಿಗಳಿಗೆ ವಾಸಸ್ಥಾನವಾಗಿದ್ದ, ಕರಡಿ, ಚಿರತೆ, ಕಾಡುಹಂದಿ, ನರಿ, ಸಿಂಗಳೀಕಾ, ಕಾಡು ಬೆಕ್ಕು, ತೋಳಗಳಿಗೆ ಆವಾಸ ಸ್ಥಳವಾಗಿ ಆಹಾರ ಒದಗಿಸಿ ಪರಿಸರ ಮತ್ತು ಜೀವವೈವಿಧ್ಯ ಚಕ್ರದ ಸಮತೋಲನ ಕಾಯುತ್ತಿದ್ದ ಬೆಟ್ಟ ಗುಡ್ಡಗಳು ಗುರುತಿಲ್ಲದಂತಾಗಿವೆ.

“ಬೆಟ್ಟ ಗುಡ್ಡಗಳ, ಕೆಲವೆಡೆ ರೈತರ ಜಮೀನುಗಳಿಗೆ ಹೊಂದಿಕೊಂಡಿರುವ ಜಮೀನುಗಳಲ್ಲಿ ನಡೆಯುವ ಗಣಿಗಾರಿಕೆ ಜಲಕ್ಷಾಮಕ್ಕೆ, ಇದು ಅಂತರ್ಜಲ ಕುಸಿತಕ್ಕೆ ಕಾರಣವಾಗಿದೆ. ಈ ಪ್ರದೇಶಗಳಲ್ಲಿ ನಡೆಯುತ್ತಿರುವ ಅತಿಯಾದ ಅದಿರು ಗಣಿಗಾರಿಕೆಯಿಂದ ಮಳೆಯಿಂದ ಸುರಿಯುವ ನೀರಿನ ಹರಿವು ಬದಲಾಗಿ ಹಲವೆಡೆ ಜಲ ಕ್ಷಾಮಕ್ಕೆ, ಅಂತರ್ಜಲ ಕುಸಿತಕ್ಕೂ ಕಾರಣವಾಗಿದೆ. ಗಣಿಗಾರಿಕೆಯ ಕಾರಣದಿಂದಾಗಿ ಬೆಟ್ಟಗುಡ್ಡಗಳ ಮೇಲಿಂದ ಹರಿದು ಬರುವ ನೀರಿನ ಹರಿವು ಬದಲಾಗಿದ್ದು, ಇವು ಸಾಂಪ್ರದಾಯಿಕ ಮತ್ತು ಪಾರಂಪರಿಕವಾಗಿ ಹರಿದು ಬಂದು ತುಂಬಿಸುತ್ತಿದ್ದ ಕೆರೆಕಟ್ಟೆಗಳಿಗೆ ಹರಿಯದೇ ಬೇರೆ ಮಾರ್ಗದಲ್ಲಿ ಸಾಗಿವೆ” ಎಂದು ಸ್ಥಳೀಯರು ತಿಳಿಸಿದ್ದಾರೆ.
“ಇದರ ನೇರ ಪರಿಣಾಮ ಅಕ್ಕಪಕ್ಕದ ಹಳ್ಳಿಗಳ ಮೇಲಾಗಿದೆ. ಇಲ್ಲಿನ ಕೆರೆಕಟ್ಟೆಗಳ ಅಂತರ್ಜಲದ ನೀರಿನಲ್ಲಿ ಜಮೀನುಗಳ ನೀರಾವರಿ, ತೋಟಗಾರಿಕೆಗೆ ಮತ್ತು ಕುಡಿಯುವ ನೀರಿಗೆ ಅವಲಂಬಿಸಿದ್ದ ಹಳ್ಳಿಗಳ ಜನರು ಇದೀಗ ಸಾವಿರ ಅಡಿ ಕೊರೆದರೂ ನೀರಿಲ್ಲದೆ ತೋಟಗಳನ್ನು ಒಣಗಿಸಿಕೊಂಡ ಬಹಳಷ್ಟು ನಿದರ್ಶನಗಳು ಮೇಗಳಹಳ್ಳಿ ಸಿರಿಗೆರೆ ಮದಕರಿಪುರ ಹಿರೇಕಂದವಾಡಿ, ನುಲೇನೂರು, ಭೀಮಸಮುದ್ರ ವ್ಯಾಪ್ತಿಯ ಹಲವು ಹಳ್ಳಿಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಅಲ್ಲದೆ ಗುಡ್ಡಗಳ ಬೆಟ್ಟಗಳ ಒಡಲು ಬಗೆದು ಅಲ್ಲಲ್ಲಿ ದಾರಿಗಳನ್ನು ನಿರ್ಮಿಸಿ, ಅವುಗಳ ನಕ್ಷೆಯನ್ನೇ ಬದಲಿಸಿ ಪರಿಸರ ನಾಶ ಮಾಡಿರುವುದು ಮಳೆಯ ನೀರಿನ ಹರಿವಿನಿಂದ ಮಣ್ಣಿನ ಸವಕಳಿ ಸೇರಿದಂತೆ ಎತ್ತಲೋ ಹರಿದು ಕೆರೆಕಟ್ಟೆಗಳು ಬರಿದಾಗುವುದು ಸಾಮಾನ್ಯವಾಗಿದೆ. ಅಲ್ಲದೆ ನೀರಿನೊಂದಿಗೆ ಸೇರಿ ಹರಿಯುವ ಗಣಿಗಾರಿಕೆಯ ಧೂಳು(ಮಣ್ಣಿನ ತ್ಯಾಜ್ಯ) ಕೆರೆಕಟ್ಟೆ ಮತ್ತು ನದಿ ಪಾತ್ರಗಳಲ್ಲಿ, ಹಳ್ಳಗಳಲ್ಲಿ ಹೂಳು ತುಂಬಿಕೊಳ್ಳಲು ಕೂಡ ಕಾರಣವಾಗಿದೆ. ಭೂಗರ್ಭದ ನೀರಿನ ಮಟ್ಟ ಕುಸಿಯುತ್ತಿದೆ. ಅನೇಕ ಗ್ರಾಮಗಳಲ್ಲಿ ಬಾವಿ ಮತ್ತು ಬೋರ್‌ವೆಲ್‌ಗಳು ಒಣಗುತ್ತಿವೆ” ಎಂದು ರೈತರು ಕಳವಳ ವ್ಯಕ್ತಪಡಿಸಿದರು.

ಗಣಿಗಾರಿಕೆ ಪ್ರದೇಶದ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಮಳೆ ಸುರಿದರೆ ಗಣಿಗಾರಿಕೆ ಧೂಳು ಸೇರಿಕೊಂಡು ಕೆಂಪಾಗಿ ಕಾಣುವ ನೀರು, ಸರ್ವೇಸಾಮಾನ್ಯ. ಹಳ್ಳಿಗಳ ರಸ್ತೆಗಳೂ ಕೂಡ ಕೆಂಪು ಕೆಂಪಾಗಿರುತ್ತವೆ. ಅಲ್ಲಿ ಸುರಿಯುವ ಮಳೆಯ ಮೊದಲ ಹನಿಗಳಿಗೆ ಗಿಡಮರಗಳ ಮೇಲೆ ಕೂತಿರುವ ಅದಿರಿನ ಧೂಳು ಕೆಂಪನೆಯ ನೀರಾಗಿ ಕೆಳಗಿಳಿಯುತ್ತದೆ.
“ಹಗಲು ರಾತ್ರಿ ನಿರಂತರವಾಗಿ ಟಿಪ್ಪರ್ ಮತ್ತು ಲಾರಿಗಳ ಮೂಲಕ ಅದಿರು ಸಾಗಣೆ ನಡೆಯುತ್ತಿದೆ. ಯಾವ ಮಟ್ಟಿಗೆಂದರೆ ಒಂದೊಂದು ಲಾರಿಯಲ್ಲಿ 15ರಿಂದ 40 ಟನ್ ಅದಿರು ಮಣ್ಣನ್ನು ಸಾಗಿಸಲಾಗುತ್ತಿದ್ದು. ಹಳ್ಳಿಗಳಲ್ಲಿ ಸಾಲಾಗಿ ಹೋಗುತ್ತಿರುತ್ತವೆ. ಇವುಗಳಿಂದಾಗಿ ಹಳ್ಳಿಗಳ ಜನರು ದನ-ಕರುಗಳನ್ನು ಹಿಡಿದುಕೊಂಡು ರಸ್ತೆ ದಾಟುವಾಗ ಕೆಲ ಹೊತ್ತು ನಿಂತು ರಸ್ತೆ ದಾಟಬೇಕಾಗಿದೆ. ರಸ್ತೆಯ ಮೇಲೆ ವೇಗವಾಗಿ ಸಾಗುವುದರಿಂದ, ಮಿತಿಗಿಂತ ಹೆಚ್ಚು ಭಾರ ಹಾಕುವ ಇಂತಹ ವಾಹನಗಳಿಂದ ಗ್ರಾಮೀಣ ರಸ್ತೆಗಳ ಸ್ಥಿತಿ ಹೇಳತೀರದಾಗಿದೆ. ಈ ರಸ್ತೆಗಳ ಮೂಲಕ ಹಾದು ಹೋಗುವ ಹಳ್ಳಿಜನರ ವಾಹನಗಳು ಮತ್ತು ಜನರು ಜೀವ ಕೈಯಲ್ಲಿಡಿದು ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ” ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.

ಈ ಪ್ರದೇಶದಲ್ಲಿ ವಾರಕ್ಕೆ ಒಂದರಿಂದ ಎರಡು ಅಪಘಾತಗಳು ಸಂಭವಿಸುವುದು ಸಾಮಾನ್ಯವಾಗಿಬಿಟ್ಟಿವೆ. ಇಲ್ಲಿ ಓಡಾಡುವ ಅದಿರಿನ ಸಾಗಾಟದ ಲಾರಿಗಳಿಂದಲೇ ಅಪಘಾತಗಳು ಸಂಭವಿಸುತ್ತಿವೆ ಎನ್ನುವುದು ಅಂಕಿ ಅಂಶಗಳಿಂದ ಬಹಿರಂಗವಾಗಿದೆ. 2020ರ ಆಸುಪಾಸಿನಲ್ಲಿ ನಡೆದಿದ್ದ ರಸ್ತೆ ದುರ್ಘಟನೆಯಲ್ಲಿ ಅದಿರು ವಾಹನದ ಕೆಳಗೆ ಸಿಲುಕಿದ ದ್ವಿಚಕ್ರ ವಾಹನದಲ್ಲಿದ್ದ ಗರ್ಭಿಣಿಯೊಬ್ಬಳ ಹೊಟ್ಟೆಯೊಳಗಿನ ಕೂಸು ಕೂಡ ಹೊರಬಂದು ಅಪಘಾತದ ತೀವ್ರತೆ ಮತ್ತು ರಸ್ತೆಯಲ್ಲಿ ಸಂಚರಿಸುವ ಆತಂಕವನ್ನು ಬಯಲುಗೊಳಿಸಿದ್ದು ಒಂದು ನಿದರ್ಶನ.
ಇದನ್ನೂ ಓದಿದ್ದೀರಾ? ಸಿಐಟಿಯು 16ನೇ ರಾಜ್ಯ ಸಮ್ಮೇಳನ ಯಶಸ್ವಿ: ಶ್ರಮ ವಿರೋಧಿ ನೀತಿಗಳ ವಿರುದ್ಧ ಸ್ಫೂರ್ತಿದಾಯಕ ಹೋರಾಟ
ಆಗಸ್ಟ್ 2022ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದಾಗಿ ಚಿತ್ರದುರ್ಗದಲ್ಲಿ ಗಣಿಗಾರಿಕೆ ಹೆಚ್ಚಾಗಿದೆ. ಇದು ವಾರ್ಷಿಕ ಕಬ್ಬಿಣದ ಅದಿರು ಉತ್ಪಾದನಾ ಮಿತಿಯನ್ನು 7ರಿಂದ 15 ಮಿಲಿಯನ್ ಮೆಟ್ರಿಕ್ ಟನ್‌ಗಳಿಗೆ ಹೆಚ್ಚಿಸಿದೆ. ಇದರಿಂದ ಪರಿಸರ ನಾಶವಾಗಿ, ಸ್ಥಳೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವುಗಳ ನಡುವೆಯೇ ಜೆಎಸ್‌ಡಬ್ಲ್ಯೂ ಸ್ಟೀಲ್‌ನಂತಹ ಖಾಸಗಿ ಕಂಪೆನಿಗಳು ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿವೆ. ಭಾರತೀಯ ಬಹುರಾಷ್ಟ್ರೀಯ ಗಣಿಗಾರಿಕೆ ಕಂಪೆನಿಯಾಗಿರುವ ವೇದಾಂತ ಸ್ಥಾವರ ಕಂಪನಿಯು ಗೋವಾ, ಕರ್ನಾಟಕ, ರಾಜಸ್ಥಾನ ಮತ್ತು ಒಡಿಶಾದಲ್ಲಿ ಕಬ್ಬಿಣದ ಅದಿರು, ಚಿನ್ನ ಹಾಗೂ ಅಲ್ಯೂಮಿನಿಯಂ ಗಣಿಗಾರಿಕೆ ಕಾರ್ಯಾಚರಣೆಗಳನ್ನು ನಡೆಸುತ್ತದೆ. ಜತೆಗೆ ಚಿತ್ರದುರ್ಗದಲ್ಲಿಯೂ ನಿರ್ದಿಷ್ಟ ಗಣಿಗಳ ಕಾರ್ಯಾಚರಣೆಯನ್ನು ಪುನರಾರಂಭಿಸಿವೆ. ಆದರೆ ಇವುಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.





