ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮೈದುಂಬಿ ಹರಿಯುತ್ತಿರುವ ವಾಣಿ ವಿಲಾಸ ಸಾಗರ ಅಣೆಕಟ್ಟೆ(ವಿವಿ ಸಾಗರ)ಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಸ್ಥಳೀಯರು ಹಾಗೂ ಸುತ್ತಮುತ್ತಲಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿರುವ ವಾಣಿ ವಿಲಾಸ ಅಣೆಕಟ್ಟು ರಾಜ್ಯದ ಅತ್ಯಂತ ಹಳೆಯ ಜಲಾಶಯಗಳಲ್ಲಿ ಒಂದಾಗಿದ್ದು, ಶುಕ್ರವಾರ ಸಂಜೆಯಿಂದಲೂ ಮೈದುಂಬಿ ಹರಿಯುತ್ತಿದೆ. ಇದರಿಂದ ಸುತ್ತಲಿನ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಈ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಳ್ಳಲು ಬರುತ್ತಿರುವ ನೂರಾರು ಪ್ರವಾಸಿಗರು ಉತ್ಸುಕರಾಗಿದ್ದಾರೆ, ಫೋಟೋಗಳನ್ನು ಸೆರೆ ಹಿಡಿಯುವಲ್ಲಿ ಮಗ್ನರಾಗಿದ್ದಾರೆ.
ಮಾರಿ ಕಣಿವೆ ಎಂದೂ ಕರೆಯಲ್ಪಡುವ ವಾಣಿ ವಿಲಾಸ ಸಾಗರ ಅಣೆಕಟ್ಟನ್ನು 20ನೇ ಶತಮಾನದಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಯಿತು. ಇದರಿಂದಾಗಿ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಕೆಲವು ಭಾಗಗಳಿಗೆ ನೀರಾವರಿ ಮತ್ತು ಕುಡಿಯುವ ನೀರಿನ ನಿರ್ಣಾಯಕ ಮೂಲವಾಗಿ ಉಳಿದಿದೆ.
“ಅಣೆಕಟ್ಟು ತನ್ನ ಗರಿಷ್ಠ ಸಂಗ್ರಹ ಸಾಮರ್ಥ್ಯ 885 ಮೀಟರ್ ತಲುಪಿದೆ. ಹಾಗಾಗಿ ಹೆಚ್ಚುವರಿ ನೀರನ್ನು ಕೆಳಕ್ಕೆ ಹರಿಸಲು ಎಲ್ಲ ಗೇಟ್‌ಗಳನ್ನು ತೆರೆಯಲಾಗಿದೆ” ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರಿ ಕಣಿವೆ ಜಲಾಶಯವನ್ನು ನೋಡಲು ಬಂದಿದ್ದ ಪ್ರವಾಸಿಗರೊಬ್ಬರು ನೀರಿನ ಸೆಳೆತಕ್ಕೆ ಸಲುಕಿ ಕೊಚ್ಚಿಹೋಗುತ್ತಿದ್ದರು. ಕೂಡಲೇ ಇದನ್ನು ಗಮನಿಸಿದ ಪೊಲೀಸ್ ಸಿಬ್ಬಂದಿ ಮತ್ತು ಸ್ಥಳೀಯ ಈಜುಗಾರರು ಪ್ರವಾಸಿಗನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
“ನಿರ್ಬಂಧಿತ ಪ್ರದೇಶವನ್ನು ಪ್ರವೇಶಿಸಿದ ವ್ಯಕ್ತಿಯೊಬ್ಬರು ಫೋಟೋ ತೆಗೆಯಲು ಮುಂದಾದಾಗ ನೀರಿನ ರಭಸಕ್ಕೆ ಸಿಲುಕಿ, ಕಾಲು ಜಾರಿದ್ದಾರೆ. ಇದನ್ನು ಕಂಡ ಪೊಲೀಸ್ ಸಿಬ್ಬಂದಿ ಮತ್ತು ಸ್ಥಳೀಯ ಈಜುಗಾರರು ಕೂಡಲೇ ಕಾರ್ಯಪ್ರವೃತ್ತರಾಗಿ ನೀರಿನೊಂದಿಗೆ ಸ್ವಲ್ಪಹೊತ್ತು ಸೆಣಸಾಣಿದ ಬಳಿಕ ವ್ಯಕ್ತಿಯೊಬ್ಬರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಅಪಾಯದಿಂದ ಪಾರಾಗಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.
ಅಂದಿನಿಂದ ಪೊಲೀಸರು ಮತ್ತು ಕಂದಾಯ ಅಧಿಕಾರಿಗಳು ಅಣೆಕಟ್ಟಿನ ಸುತ್ತಲೂ ಕಟ್ಟೆಚ್ಚರ ವಹಿಸಿದ್ದು, ಜಾಗರೂಕತೆಯನ್ನು ಹೆಚ್ಚಿಸಲಾಗಿದೆ. ಪ್ರವಾಸಿಗರು ನೀರಿನ ಹತ್ತಿರ ಹೋಗದಂತೆ ತಡೆಯಲು ಬ್ಯಾರಿಕೇಡ್‌ಗಳು ಮತ್ತು ಎಚ್ಚರಿಕೆ ಫಲಕಗಳನ್ನು ಹಾಕಲಾಗಿದೆ. ಕೊಚ್ಚಿಹೋಗುತ್ತಿದ್ದ ವ್ಯಕ್ತಿಯ ಘಟನೆಯಿಂದ ಸಾರ್ವಜನಿಕರರಲ್ಲಿ ಮನವಿ ಮಾಡಿದ ಪೊಲೀಸರು, ಜಲಾಶಯ ತುಂಬಿ ಹರಿಯುವ ಭಾಗಗಳಿಗೆ ಪ್ರವೇಶಿಸದಂತೆ ಮತ್ತು ಅಂತಹ ಜಾಗಗಳಲ್ಲಿ ನಿಂತುಕೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ದುರುಳರ ಕಾಟಕ್ಕೆ ಅಪ್ರಾಪ್ತೆ ಬಲಿ: ಕಿಡ್ನ್ಯಾಪ್, ಪೋಕ್ಸೊ ಕೇಸ್‌ನಡಿ ಆರೋಪಿಗಳ ಬಂಧನ
ತುಂಬಿ ಹರಿಯುತ್ತಿರುವ ಅಣೆಕಟ್ಟಿನ ದೃಶ್ಯವು ನಿವಾಸಿಗಳು ಮತ್ತು ಪ್ರವಾಸಿಗರಿಗೆ ಒಂದು ಆಕರ್ಷಣೆಯಾಗಿದೆ. ಆದರೆ ಅಧಿಕಾರಿಗಳು ನೀರಿನ ಒಳಹರಿವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ನಿರ್ಬಂಧಿತ ಪ್ರದೇಶಕ್ಕೆ ಹೋಗದೆ ಸುರಕ್ಷತೆ ಕಾಪಾಡಿಕೊಳ್ಳುವಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಅಲ್ಲದೆ ಅಣೆಕಟ್ಟೆಯ ಸೌಂದರ್ಯವನ್ನು ದೂರದಿಂದಲೇ ನೋಡಿ ಆನಂದಿಸುವಂತೆ ಸಲಹೆ ನೀಡುತ್ತಿದ್ದಾರೆ.





