ಜಾತಿ ವ್ಯವಸ್ಥೆ ದೇವರಿಂದ ಸೃಷ್ಟಿಯಾಗಿದ್ದಲ್ಲ. ಸ್ವಾರ್ಥ ಮನುಷ್ಯನ ಸೃಷ್ಟಿ, ಅಸಮಾನತೆ ಹೋಗಲಾಡಿಸದೆ ಶೋಷಿತರ ಏಳಿಗೆ ಅಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.
ಚಿತ್ರದುರ್ಗದಲ್ಲಿ ಭೋವಿ ಗುರುಪೀಠದ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ 25ನೇ ವರ್ಷದ ರಜತದೀಕ್ಷಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.
“ವಿದ್ಯೆ ಕಲಿಯಲು ಅವಕಾಶ ಸಿಕ್ಕ ಕೆಲವರು ಮಾತ್ರ ಆರ್ಥಿಕವಾಗಿ ಮೇಲೆ ಬಂದರು. ವಿದ್ಯೆಯ ಅವಕಾಶ ಇಲ್ಲದವರು ಕುಲ ಕಸುಬು ಮಾಡಿಕೊಂಡು ಹಿಂದೆ ಉಳಿದರು. ಅಸ್ಪೃಶ್ಯತೆ, ಶೋಷಿತ ಸಮುದಾಯಗಳ ವಿಮೋಚನೆಗೆ ಹೋರಾಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣದಿಂದಲೇ ಮೇಧಾವಿಯಾದರು” ಎಂದು ವಿವರಿಸಿದರು.
“ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಶಿಕ್ಷಣ ಪಡೆಯಲು ಸಾಧ್ಯವಾಗಿಲ್ಲ. ಶಿಕ್ಷಣ ಪ್ರತಿಯೊಬ್ಬರ ಮೂಲಭೂತ ಹಕ್ಕು. ಹಲವು ಶತಮಾನಗಳ ಕಾಲ ಗುಲಾಮಗಿರಿ ಇದ್ದುದರಿಂದಲೇ ಶೋಷಿತ, ತಳಸಮುದಾಯಗಳು ವಿದ್ಯೆಯಿಂದ ವಂಚಿತರಾಗಿ ಹಿಂದೆ ಉಳಿದವು. ಈಗಲೂ ಶಿಕ್ಷಣದ ಕೊರತೆಯಿಂದ ಆ ಗುಲಾಮಗಿರಿ ಮನಸ್ಥಿತಿಯಿಂದ ಹೊರಗೆ ಬರಲು ಸಾಧ್ಯವಾಗಿಲ್ಲ. ಆದ್ದರಿಂದ ಸ್ವಾಭಿಮಾನ ಬೆಳೆಸಿಕೊಂಡು ಗುಲಾಮಗಿರಿ ಮನಸ್ಥಿತಿಯಿಂದ ಹೊರಗೆ ಬರಬೇಕು” ಎಂದು ಕರೆ ನೀಡಿದರು.
“ಎಸ್‌ಸಿ/ಎಸ್‌ಟಿ ಸಮುದಾಯಗಳು ರಾಜ್ಯದ ಜನಸಂಖ್ಯೆಯಲ್ಲಿ ಶೇ.24ರಷ್ಟಿದ್ದಾರೆ. ಈ ಜನಸಂಖ್ಯೆಗೆ ಸಮವಾಗಿ ಅಭಿವೃದ್ಧಿ ಆಯವ್ಯಯದ ಶೇ.24ರಷ್ಟು ಹಣವನ್ನು ಈ ಸಮುದಾಯಗಳ ಏಳಿಗೆಗಾಗಿ ಮೀಸಲಿಟ್ಟಿದ್ದು, ಭೋವಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದ್ದು ನಮ್ಮ ಸರ್ಕಾರ. ಭೋವಿ ಸಮುದಾಯದ ಪ್ರತಿನಿಧಿಯನ್ನು ಕೆಪಿಎಸ್‌ಸಿ ಸದಸ್ಯರನ್ನಾಗಿ ಮಾಡಿದ್ದು ನಮ್ಮದೇ ಕಾಂಗ್ರೆಸ್ ಸರ್ಕಾರ” ಎಂದರು.
“ಭೋವಿ ಅಭಿವೃದ್ಧಿ ನಿಗಮವನ್ನು ಭೋವಿ-ವಡ್ಡರ ಅಭಿವೃದ್ಧಿ ನಿಗಮ ಎಂದು ಮರುನಾಮಕರಣ ಮಾಡಬೇಕೆನ್ನುವ ಬೇಡಿಕೆ ಇದೆ. ಈ ಬೇಡಿಕೆಯನ್ನು ಈಡೇರಿಸಲಾಗುವುದು. ಸಿದ್ದರಾಮೇಶ್ವರ ಅಧ್ಯಯನ ಪೀಠಕ್ಕಾಗಿ ಬೇಡಿಕೆ ಇದೆ, ಈ ಬೇಡಿಕೆಯನ್ನೂ ಮುಂದಿನ ದಿನಗಳಲ್ಲಿ ಈಡೇರಿಸಲಾಗುವುದು” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಸಾರಿಗೆ ನೌಕರರ ಒತ್ತಡದ ದುಡಿಮೆಯಿಂದ ಅನಾರೋಗ್ಯ ಹೆಚ್ಚಳ: ಸುರೇಶ್ ಕಲ್ಲಾಗರ
ಸಚಿವರಾದ ಶಿವರಾಜ್ ತಂಗಡಗಿ, ಡಿ ಸುಧಾಕರ್, ಸತೀಶ್ ಜಾರಕಿಹೊಳಿ, ಶಾಸಕರಾದ ರಘುಮೂರ್ತಿ, ವೀರೇಂದ್ರ ಪಪ್ಪಿ, ಹೆಚ್ ವಿ ವೆಂಕಟೇಶ್, ಶ್ರೀನಿವಾಸ್, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್, ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಸಂಸದ ಚಂದ್ರಪ್ಪ ಸೇರಿ ಹಲವು ಮಂದಿ ಸಮಾಜದ ಮುಖ್ಯಸ್ಥರು ಮತ್ತು ಸಮುದಾಯದ ಶ್ರೀಗಳು ಹಾಗೂ ವಿವಿಧ ಸಮುದಾಯದ ಮುಖಂಡರು ಇದ್ದರು.





