ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪಟ್ಟಣದಲ್ಲಿರುವ ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಾಲಯದ ವೇದಾಧ್ಯಯನ ವಸತಿ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬನ ಮೇಲೆ ಸಂಸ್ಕೃತ ಶಿಕ್ಷಕ ಕ್ರೌರ್ಯ ಮೆರೆದ ಘಟನೆ ವರದಿಯಾಗಿದೆ. ಶಿಕ್ಷಕ ವೀರೇಶ್ ಹಿರೇಮಠ್ ವಿದ್ಯಾರ್ಥಿಯೊಂದಿಗೆ ಅಮಾನುಷವಾಗಿ ವರ್ತಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಸಾರ್ವಜನಿಕರು ಮತ್ತು ಪೋಷಕರಲ್ಲಿ ಆಕ್ರೋಶ ವ್ಯಕ್ತವಾಗಿದೆ.
ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ದೇವಾಲಯದ ಕಾರ್ಯನಿರ್ವಹಣಾಧಿಕಾರಿ (ಇಒ) ಗಂಗಾಧರ್ ಅವರು ನಾಯಕನಹಟ್ಟಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯ ವೇಳೆ ಶಿಕ್ಷಕ ವೀರೇಶ್ ಸ್ಥಳದಿಂದ ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ಘಟನೆಯ ನಂತರ ಸ್ಥಳಕ್ಕೆ ನಾಯಕನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಶಾಲೆಯ ಮುಂದೆ ಸಾರ್ವಜನಿಕರು ಜಮಾಯಿಸಿ ಶಾಲೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ಶಿಕ್ಷಕನ ಬಂಧನಕ್ಕೆ ಆಗ್ರಹ ವ್ಯಕ್ತಪಡಿಸಿದರು.
ಇದನ್ನೂ ಓದಿ: ಚಿತ್ರದುರ್ಗ | ಶಿಕ್ಷಣ ಇಲಾಖೆ ಕಚೇರಿಯಲ್ಲಿ ‘ಎಣ್ಣೆ ಪಾರ್ಟಿ’; ಐವರು ಅಮಾನತು
ಸ್ಥಳೀಯ ಮುಖಂಡರು ಹಾಗೂ ಪೋಷಕರು ಶಿಕ್ಷಕ ವೀರೇಶ್ ಹಿರೇಮಠ್ ಅವರನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯವನ್ನು ಖಂಡಿಸಿದ ಜನರು ಶಾಲೆ ನಿರ್ವಹಣೆಯ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ವ್ಯಕ್ತಪಡಿಸಿದ್ದಾರೆ.





