ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗ ಚಿತ್ರದುರ್ಗ ಹಾಗೂ ತಾಲ್ಲೂಕು ಆರ್ಯ ಈಡಿಗ ಸಂಘದ ವತಿಯಿಂದ ಇಂದು ಚಿತ್ರದುರ್ಗ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥವಾಗಿ ಭಾವಪೂರ್ಣ ಪುಷ್ಪ ನಮನ ಹಾಗೂ ಉಪಹಾರ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥವಾಗಿ ತಾಲ್ಲೂಕು ಆರ್ಯ ಈಡಿಗರ ಸಂಘದಿಂದ ಸಮಾಜಸೇವಾ ಚಟುವಟಿಕೆಗಳನ್ನು ಕೈಗೊಂಡು ಕಾರ್ಯಕ್ರಮದ ಅಂಗವಾಗಿ ಆಸ್ಪತ್ರೆಯ ಸಿಬ್ಬಂದಿ, ರೋಗಿಗಳು ಹಾಗೂ ಅವರ ಬಂಧುಗಳಿಗೆ ಉಚಿತ ಉಪಹಾರ ವಿತರಣೆ ಮಾಡಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಸಿ. ಎಸ್ ರವೀಂದ್ರ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಉಪವಿಭಾಗದ ಡಿ.ವೈ.ಎಸ್.ಪಿ ಶ್ರೀನಿವಾಸ್ ಆಗಮಿಸಿ ಭಾಗವಹಿಸಿ ಮಾತನಾಡಿದರು.

ಅತಿಥಿಗಳು ಮಾತನಾಡಿ “ಪುನೀತ್ ರಾಜ್ ಕುಮಾರ್ ಅವರ ಮಾನವೀಯತೆ, ಸಮಾಜಸೇವೆ ಹಾಗೂ ಯುವಕರಿಗೆ ನೀಡಿದ ಪ್ರೇರಣೆ ಕುರಿತು ಮಾತನಾಡಿ, “ಸಮಾಜಕ್ಕಾಗಿ ಕೆಲಸ ಮಾಡುವ ಮನಸ್ಸು ಇರಬೇಕು. ಪುನೀತ್ ಅವರ ಜೀವನವೇ ಅದಕ್ಕೆ ಮಾದರಿ. ಎಲ್ಲರೂ ತಮ್ಮ ಆರೋಗ್ಯದ ಕಡೆ ಗಮನಹರಿಸಿ. ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಅನೇಕರಿಗೆ ದಾರಿ ದೀಪವಾಗಿ ಸ್ಫೂರ್ತಿಯಾಗಿದ್ದಾರೆ” ಎಂದು ಸ್ಮರಿಸಿದರು.

ಆರ್ಯ ಈಡಿಗ ಸಂಘದ ಮುಖಂಡರು ಮಾತನಾಡಿ “ನಮ್ಮ ಸಂಘವು ಸಮಾಜ ಸೇವೆಯನ್ನು ಧ್ಯೇಯವನ್ನಾಗಿ ಮಾಡಿಕೊಂಡು, ಪುನೀತ್ ರಾಜ್ ಕುಮಾರ್ ಅವರ ದಾನಶೀಲತೆಯಿಂದ ಪ್ರೇರಣೆ ಪಡೆದುಕೊಂಡಿದೆ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅವರ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವಿಸಲಾಯಿತು. ಸಂಘದ ಸದಸ್ಯರು ಅವರ ಸ್ಮರಣಾರ್ಥ ಆಸ್ಪತ್ರೆಯ ಪರಿಸರದಲ್ಲಿ ಸಾವಿರಾರು ಜನರಿಗೆ ಉಪಹಾರ ವಿತರಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ನವೆಂಬರ್ 08ಕ್ಕೆ ಕನಕದಾಸರ ಜಯಂತಿ: ತಯಾರಿಗೆ ಜಿಲ್ಲಾಧಿಕಾರಿ ವೆಂಕಟೇಶ್ ಸೂಚನೆ
ಈ ಸಂದರ್ಭದಲ್ಲಿ ಸಂಘದ ಮುಖಂಡರುಗಳಾದ ಈ ಎನ್.ಲಕ್ಷ್ಮಿ ಕಾಂತ್, ಲಕ್ಷ್ಮಿನಾರಾಯಣ್, ಶ್ರೀನಿವಾಸ್, ಶಿವಕುಮಾರ್, ಉದಯ್, ಗುರು, ಗುರು ಕೊಳಲು, ಮಂಜುನಾಥ್ ಜೆ, ಯೋಗೇಶ್, ಚಂದ್ರು, ಮೃತ್ಯುಂಜಯ, ನವೀನ್, ಸಂತೋಷ್, ಸುರೇಶ್, ಅಭಿ, ನಿಂಗೇಶ್ ಎಲ್. ಶ್ರೀನಿವಾಸ್, ಪ್ರಸನ್ನ ಬಾಬು, ಡಿ. ಮಂಜುನಾಥ್, ಹಾಗೂ ಅಭಿಮಾನಿ ಬಳಗದ ಸುರೇಂದ್ರ, ರಾಘವೇಂದ್ರ ಎಸ್ ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.





