ಬಗರ್ ಹುಕುಂ ಮತ್ತು ಇತರ ಸಾಗುವಳಿದಾರರಿಗೆ, ಭೂರಹಿತ, ವಸತಿ ರಹಿತರಿಗೆ “ಅಲೆಸಿದ್ದು ಸಾಕು-ಬಡವರಿಗೆ ಭೂಮಿ ಮಂಜೂರಾತಿ ಆಗಲೇಬೇಕು” ಎನ್ನುವ ಹಕ್ಕೊತ್ತಾಯದೊಂದಿಗೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಇದೇ 26 ಕ್ಕೆ ಬೆಂಗಳೂರಿನ ಚಲೋ ಹೋರಾಟದ ಅಂಗವಾಗಿ ಮುಖಂಡರು ಚಿತ್ರದುರ್ಗ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ, ಕಾರ್ಯಕ್ರಮದ ರೂಪುರೇಷೆ, ಬೇಡಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖಂಡರು,”ಉಳುವವರಿಗೇ ಭೂಮಿ’ ಘೋಷದೊಂದಿಗೆ ಸ್ವತಂತ್ರಗೊಂಡ ಭಾರತದಲ್ಲಿ 79 ವರ್ಷಗಳಾದರೂ ಸ್ವತಂತ್ರ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ಕೋಟ್ಯಾಂತರ ಬಡ ಕುಟುಂಬಗಳಿಗೆ ತುಂಡು ಭೂಮಿ ಇಲ್ಲವಾಗಿದೆ. ಉಳುಮೆಗೆ ಮಾತ್ರವಲ್ಲ ನೆತ್ತಿಯ ಮೇಲೊಂದು ಸೂರೂ ಇಲ್ಲವಾಗಿದೆ. ಸತ್ತ ಮೇಲೆ ಹೆಣ ಹೂಳಲು ಪರದಾಡುವ ಪರಿಸ್ಥಿತಿ ಇದೆ. ಭೂಮಿಯೆಲ್ಲಾ ಬಲಾಡ್ಯರ, ಕಂಪನಿಗಳ ಕೈಯಲ್ಲಿದೆ. ಆದರೂ ಅವರ ತಣಿಯದ ದಾಹಕ್ಕಾಗಿ ಭೂ ಕಾಯ್ದೆಗೆ ತಿದ್ದುಪಡಿ ತಂದು ಕೃಷಿಯೇತರರೂ ಮನಸೋಇಚ್ಛೆ ಭೂಮಿ ಖರೀದಿಸಲು ಅವಕಾಶ ನೀಡಲಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ರೈತರ ಸ್ವಾಧೀನವಾಗುತ್ತಿದೆ. ಬಡವರ ಪರ ಆಡಳಿತ ನೀಡುತ್ತೇವೆಂದು ಬಂದ ರಾಜ್ಯದ ಕಾಂಗ್ರೆಸ್ ಸರಕಾರ ಸಹ ಇದೇ ಹಾದಿಯಲ್ಲಿ ನಡೆಯುತ್ತಿದೆ. ‘ಬಾಯಲ್ಲಿ ಬಡವರ ಪರ, ಮನದಲ್ಲಿ ಬಲಾಡ್ಯರು’ ಎಂಬಂತೆ ನಡೆದುಕೊಳ್ಳುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರ ಆದಿವಾಸಿಗಳನ್ನೂ ಬಿಡದೆ ಬೀದಿಗೆ ತಳ್ಳುತ್ತಾ ಲಕ್ಷಾಂತರ ಎಕರೆ ಭೂಮಿಗಳನ್ನು ದೇಶದ ಅತ್ಯಂತ ಲೂಟಿಕೋರ ಅಂಬಾನಿ-ಆದಾನಿಗಳಿಗೆ ಮತ್ತು ವಿದೇಶಿ ಕಂಪನಿಗಳಿಗೆ ಗಣಿಗಾರಿಕೆ ಮಾಡಲು ಅನುವು ಮಾಡಿಕೊಡುವ ಮೂಲಕ ಬಕಾಸುರನ ಪಾತ್ರ ವಹಿಸುತ್ತಿದೆ. ದೇಶಪ್ರೇಮದ ಹೆಸರಲ್ಲಿ ಮೋದಿ ನೇತೃತ್ವದ ಸರಕಾರ ವಿದೇಶಿಗರ ಸೇವೆಯಲ್ಲಿ ನಿರತವಾಗಿದೆ” ಎಂದು ಕಿಡಿಕಾರಿದರು.
“ಲಕ್ಷಾಂತರ ಭೂರಹಿತ ಕುಟುಂಬಗಳು ದಶಕಗಳಿಂದಲೂ ತುಂಡು ಭೂಮಿಯನ್ನು ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಇವರಿಗೆ ಭೂಮಿ ಮಂಜೂರು ಮಾಡುವ ಕೆಲಸ ಸರ್ಕಾರ ಮಾಡುತ್ತಿಲ್ಲ. ಈ ಭೂಮಿ, ವಸತಿ ರಹಿತರ
ಮುಗಿಯದ ಗೋಳಿನ ಕಥೆಗಳು ದೊಡ್ಡ ಸರಮಾಲೆಯೇ ಆಗಿದೆಯಾದರೂ ಸರ್ಕಾರಗಳು ಇದನ್ನು ಸರಿಪಡಿಸುವ, ಬಡವರಿಗೆ ನ್ಯಾಯ ಕೊಡಿಸುವ ವಿಚಾರಕ್ಕೆ ಕೈಹಾಕದೆ ಕಾಲ ತಳ್ಳುತ್ತಲೇ ಇದ್ದಾರೆ. ಬಡವರು ಇನ್ನೆಷ್ಟು ವರ್ಷಗಳ ಕಾಲ ಕಾಯಬೇಕು?” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ರಾಜ್ಯದಲ್ಲಿ ಹಲವು ರೀತಿಯ ಹೆಸರಿನಲ್ಲಿ ಭೂಮಿಗಳಿವೆ. ಸರ್ಕಾರಿ, ಗೋಮಾಳ (ಗಾಯರಾಣ), ಹುಲ್ಲುಬನಿ ಖರಾಬ್, ಖಾರೀಜ್ ಖಾತಾ, ಸೊಪ್ಪಿನ ಬೆಟ್ಟ, ಹರಳು ಪ್ರದೇಶ, ಗುಡ್ಡ ಪ್ರದೇಶ, ಕಲ್ಲು ಪ್ರದೇಶ, ಸೇಂದಿವನ, ಅನಾಧೀನ, ಕಾವಲು, ಅಮೃತ ಮಹಲ್ ಕಾವಲು, ಬಾಣೆ, ಪೈಸಾರಿ, ಅರಣ್ಯ, ಸಾಮಾಜಿಕ ಅರಣ್ಯ, ಲ್ಯಾಂಡ್ ಬ್ಯಾಂಕ್ ಇನ್ನಿತರೆ ಹೆಸರಿನಲ್ಲಿರುವ ಈ ಎಲ್ಲಾ ಭೂಮಿಗಳಿಗೆ ಇವುಗಳ ಉಪಯೋಗದ ಬಗ್ಗೆ ಅದರದೇ ಆದ ಕಾನೂನುಗಳನ್ನು ರೂಪಿಸಲಾಗಿದೆ ಎಂದು ಅಭಿಪ್ರಾಯಪಟ್ಟರು.

“ಈಗಿನ ಸರ್ಕಾರದ ಪ್ರಕಾರ ಮೇಲಿನ ಯಾವ ಭೂಮಿಗಳನ್ನೂ ಫಾರಂ ನಂ. 50-53-57ರಲ್ಲಿ ಸಲ್ಲಿಸಿರುವ ಅರ್ಜಿದಾರರಿಗೆ ಮಂಜೂರಾತಿ ಮಾಡಲು ಅವಕಾಶವಿಲ್ಲ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ತಾನು ಬಡವರ ಪರ, ಸಂವಿಧಾನ ಪರ ಎಂದು ಸಾಬೀತು ಪಡಿಸಲು, ಈಗಿರುವ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರಾತಿ ನೀಡಬೇಕು. 5-6 ದಶಕಗಳ ಕಾಲದಿಂದಲೂ ಇರುವ ಸಮಸ್ಯೆಯಿಂದಾಗಿ ರೈತರು ಅಲೆದಲೆದು ಸವಕಳಿಯಾಗಿದ್ದಾರೆ. ಇನ್ನು ಮುಂದೆ ಅರ್ಜಿ ಹಿಡಿದು ಪುನಃ ಅಲೆಸುವುದೆಂದರೆ ಜನರನ್ನು ಹಿಂಸೆಗೆ ಗುರಿಪಡಿಸಿದಂತಾಗುತ್ತದೆ. ಆದ್ದರಿಂದ ಸರಕಾರ ಬಡವರಿಗಾಗಿ ‘ಒನ್ ಟೈಮ್ ಸೆಟಲೈಂಟ್’ ಎಂಬ ತೀರ್ಮಾನ ಕೈಗೊಂಡು, ಭೂಮಂಜೂರಾತಿ ನೀಡಲು ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯು ಆಗ್ರಹಿಸುತ್ತದೆ” ಎಂದು ಒತ್ತಾಯಿಸಿದರು.
“ಸರಕಾರ ಭೂಮಿ-ಮತ್ತು ವಸತಿ ವಿಚಾರಕ್ಕೆ ಗಟ್ಟಿಯಾದ ತೀರ್ಮಾನವನ್ನು ಮಾಡಲೇಬೇಕೆಂದು ಒತ್ತಾಯಿಸಿ ನಾಡಿನ ರೈತ-ದಲಿತ-ಕಾರ್ಮಿಕ-ಮಹಿಳೆ-ವಿದ್ಯಾರ್ಥಿ ಯುವಜನ ಮತ್ತಿತರೆ ಸಮುದಾಯಗಳ ಐಕ್ಯ ವೇದಿಕೆಯಾದ ‘ಸಂಯುಕ್ತ ಹೋರಾಟ ಕರ್ನಾಟಕ’ ನೇತೃತ್ವದಲ್ಲಿ ಇದೇ ನವೆಂಬರ್ 26ರಂದು ಬೆಂಗಳೂರಿನ ಫ್ರೀಡಂ ಪಾರ್ಕ್.ನಲ್ಲಿ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಲಿದೆ. ಈ ಪ್ರತಿಭಟನೆಯಲ್ಲಿ ಬಗರ್ ಹುಕುಂ ಸಾಗುವಳಿದಾರರು, ಅರಣ್ಯ ಭೂಮಿ ಅರ್ಜಿದಾರರು, ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿ, ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು .
ಈ ಭಾರಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಗರ್ ಹುಕುಂ ಸಾಗುವಳಿದಾರರು ಭಾಗವಹಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಸರ್ಕಾರಿ ವಿಜ್ಞಾನ ಕಾಲೇಜು ಉಳಿಸಿ: ಎಐಡಿಎಸ್ಓ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಚಿತ್ರದುರ್ಗ | ಸರ್ಕಾರಿ ವಿಜ್ಞಾನ ಕಾಲೇಜು ಉಳಿಸಿ: ಎಐಡಿಎಸ್ಓ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯ ಮುಖಂಡರಾದ ಕೆ.ಮರಿಯಪ್ಪ, ಕುಮಾರ್ ಸಮತಳ, ಜಿಲ್ಲಾ ಮುಖಂಡರಾದ ಸತ್ಯಪ್ಪ ಮಲ್ಲಾಪುರ, ಹನುಮಂತಣ್ಣ ಗೋನೂರು, ಭೀಮಸಮುದ್ರ ಅಂಜನಪ್ಪ, ವೆಂಕಟೇಶ್ ಬಚ್ಚಬೋರನಹಟ್ಟಿ, ಈಚಘಟ್ಟ ಕರಿಯಪ್ಪ, ರಾಮಚಂದ್ರಪ್ಪ, ಮಂಜುನಾಥ್, ಕುಮಾರ್ ಕಲ್ಲಟ್ಟಿ, ಶಷಾಂಕ್, ಪುರುಷೋತ್ತಮ ತೋರಣಘಟ್ಟ ಸೇರಿದಂತೆ ಹಲವರು ಭಾಗವಹಿಸಿದ್ದರು.





