ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ʼಶಕ್ತಿʼ ಯೋಜನೆಯಡಿ 500 ಕೋಟಿಗೂ ಹೆಚ್ಚು ಮಹಿಳೆಯರು ರಾಜ್ಯದ ಸರ್ಕಾರಿ ಸ್ವಾಮ್ಯದ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗ ನಗರದ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸೋಮವಾರ ಸಂಭ್ರಮಾಚರಣೆ ನಡೆಯಿತು. ಮಹಿಳಾ ಫಲಾನುಭವಿಗಳಿಗೆ ಸಿಹಿ ವಿತರಿಸಿದ ಚಿತ್ರದುರ್ಗ ಶಾಸಕ ಕೆ ಸಿ ವೀರೇಂದ್ರ ಪಪ್ಪಿ 500 ಕೋಟಿ ಫಲಾನುಭವಿಗಳ ಮೈಲುಗಲ್ಲಿನ ಯಶಸ್ಸನ್ನು ಆಚರಿಸಿದರು.
ಚಿತ್ರದುರ್ಗ ನಗರದ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಅಲಂಕೃತವಾಗಿರುವ ಬಸ್‍ಗೆ ಚಿತ್ರದುರ್ಗ ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಹಾಗೂ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್ ಶಿವಣ್ಣ ಅವರು ಪೂಜೆ ನೆರವೇರಿಸಿ, ಮಹಿಳಾ ಪ್ರಯಾಣಿಕರಿಗೆ ಮತ್ತು ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಹೂ ಹಾಗೂ ಸಿಹಿ ವಿತರಣೆ ಮಾಡಿದರು.

ಐದು ಗ್ಯಾರಂಟಿ ಯೋಜನೆಗಳ ಪೈಕಿ ʼಶಕ್ತಿʼ ಯೋಜನೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಕಳೆದ 2023ರ ಜೂನ್ 11ರಿಂದ ಜಾರಿಗೊಳಿಸಿದ್ದು, ರಾಜ್ಯದ ಎಲ್ಲ ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರು ರಾಜ್ಯದ ಸರ್ಕಾರಿ ಸಾರಿಗೆ ಸಂಸ್ಥೆಗಳ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣಿಸಿದ ಫಲಾನುಭವಿಗಳ ಸಂಖ್ಯೆ 500 ಕೊಟಿ ಗಡಿ ದಾಟಿದ್ದು, ಈ ಸಂಭ್ರಮವನ್ನು ಸಾಂಕೇತಿಕವಾಗಿ ರಾಜ್ಯದ ಜಿಲ್ಲಾ ಕೇಂದ್ರ ಹಾಗೂ ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮೂರು ಸೇರಿದಂತೆ ಎಲ್ಲ ತಾಲೂಕುಗಳಲ್ಲಿನ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ, ಬಸ್ಸಿಗೆ ಪೂಜೆ ಸಲ್ಲಿಸಿ, ಸಾರಿಗೆ ಸಿಬ್ಬಂದಿಗಳು ಹಾಗೂ ಪ್ರಯಾಣಿಕರಿಗೆ ಸಿಹಿ ತಿನಿಸಿ ಸಂಭ್ರಮಾಚರಣೆ ಮಾಡಲಾಯಿತು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸ್ತ್ರೀಯರ ಸಮಾನ ಶಿಕ್ಷಣ, ಸ್ವಾತಂತ್ರ್ಯ ಇಲ್ಲದ ಸಮಾಜ, ದೇಶದ ಪ್ರಗತಿ ಸಾಧ್ಯವಿಲ್ಲ: ಸಚಿವ ಸಂತೋಷ್ ಲಾಡ್
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಹಾಗೂ ಬಿ.ಟಿ. ನಿರಂಜನ್, ತಾಲ್ಲೂಕು ಅಧ್ಯಕ್ಷ ಪ್ರಕಾಶ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಸದಸ್ಯರುಗಳಾದ ಅಬ್ದುಲ್ಲಾ ಷಾವಲಿ, ಇಂದಿರಾ, ಪಾಲೇಗೌಡ, ತಾಲ್ಲೂಕು ಸಮಿತಿ ಸದಸ್ಯರಾದ ರಾಜೇಶ್ ಮದುರೆ, ವಿ. ದಿನೇಶ್, ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ್, ಸಾರಿಗೆ ಸಂಸ್ಥೆಯ ಸಿಬ್ಬಂದಿ, ವಿವಿಧ ಮುಖಂಡರು ಇದ್ದರು.





