ಭಾರತ ಸಂವಿಧಾನವು ಬುದ್ದ, ಬಸವಣ್ಣ, ಬಾಬಾ ಸಾಹೇಬ್ ಅಂಬೇಡ್ಕರ್ ಮೊದಲಾದ ಸಮಾಜದ ಪರಿವರ್ತನೆಗೆ, ದುಡಿದ ಪರಿವರ್ತನಕಾರರ ಒಟ್ಟು ಆಶಯವಾಗಿದೆ. ಇವರೆಲ್ಲರ ಫಲವೇ ನಮ್ಮ ಈ ದೇಶದ ಸಂವಿಧಾನ ಮತ್ತು ಕಾನೂನಾಗಿದೆ ಎಂದು ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಪರಿವರ್ತನ ವೇದಿಕೆ ಕಾರ್ಯಕ್ರಮದಲ್ಲಿ ವಕೀಲ ವಕೀಲರಾದ ಪಿ. ಎಚ್. ತಿಪ್ಪೇರುದ್ರಪ್ಪ ಅಭಿಪ್ರಾಯಪಟ್ಟರು.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ತಮ್ಮೆನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಸಮಾಜ ಪರಿವರ್ತನಾ ವೇದಿಕೆ, ಪೊಲೀಸ್ ಇಲಾಖೆ ಹಾಗೂ ವಿವಿಧ ಇಲಾಖೆಗಳ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು “ಭಾರತ ದೇಶವು ಬಹು ವೈವಿಧ್ಯತೆ, ಬಹುಸಂಸ್ಕೃತಿಯನ್ನು ಒಳಗೊಂಡಿರುವ ದೇಶ, ವಿವಿಧತೆಯಲ್ಲಿ ಏಕತೆಯನ್ನು ಮೈಗೂಡಿಸಿಕೊಂಡಿರುವ ದೇಶ, ಬುದ್ದನ ಕರುಣೆ, ಪ್ರೀತಿ ಮೈತ್ರಿ, ಮಮತೆ, ಬಸವಣ್ಣನ ಕಾಯಕ ತತ್ವ, ಸಮಾನತೆಯ ತತ್ವ, ಇವುಗಳ ಐಕ್ಯವೇ ಭಾರತ ದೇಶದ ಸಂವಿಧಾನವಾಗಿದೆ” ಎಂದು ವಕೀಲರಾದ ಪಿ. ಎಚ್. ತಿಪ್ಪೇರುದ್ರಪ್ಪ ತಿಳಿಸಿದರು.

ಮುಖ್ಯ ಶಿಕ್ಷಕ ಶಿವಕುಮಾರ್ ಮಾತನಾಡಿ, “ಮಕ್ಕಳು ಕಾನೂನುಗಳನ್ನು ಗೌರವಿಸಬೇಕು. ಕಾನೂನುಗಳನ್ನು ನಾವು ರಕ್ಷಿಸಿದರೆ ಕಾನೂನು ನಮ್ಮನ್ನು ರಕ್ಷಿಸುತ್ತದೆ. ಕಾನೂನುಗಳೇ ನಮ್ಮಯ ಜೀವಾಳವಾಗಿವೆ. ಚೆನ್ನಾಗಿ ಓದಿ ತಂದೆ ತಾಯಿ, ಶಿಕ್ಷಕರಿಗೆ ಒಳ್ಳೆಯ ಕೀರ್ತಿ, ಗೌರವ ತರಬೇಕು, ಆಗ ಸಮಾಜ ನಮ್ಮನ್ನು ಗೌರವದಿಂದ ನೋಡುತ್ತದೆ. ಪೋಷಕರು ಶ್ರಮಪಟ್ಟು ನಮ್ಮನ್ನು ಓದಿಸುತ್ತಿದ್ದಾರೆ, ಹಾಗಾಗಿ ಅವರ ಬೆವರು ಮತ್ತು ಶ್ರಮಕ್ಕೆ ಮೋಸ ಮಾಡದೇ ಚೆನ್ನಾಗಿ ಓದಬೇಕು” ಎಂದು ಸಲಹೆ ನೀಡಿದರು.

ಅಧ್ಯಕ್ಷ ಮರಿಸ್ವಾಮಿ ನಾಗಸಮುದ್ರ ಮಾತನಾಡಿ, “ಮರಳಿ ಸಮಾಜಕ್ಕೆ ಕೊಡಿ, ಎನ್ನುವ ಸಂದೇಶದ ಸಾಕ್ಷಾತ್ಕಾರಕ್ಕಾಗಿ ಪ್ರತಿ ಶಾಲೆ, ಕಾಲೇಜುಗಳಲ್ಲಿ ನಾವು ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದೇವೆ” ಎಂದು ತಿಳಿಸಿದರು.
ಕಾರ್ಯದರ್ಶಿ ಪರಮೇಶ್ ಮಾತನಾಡಿ, “ಇಂದು ನಾವೆಲ್ಲ ಭಾರತೀಯರು ಘನತೆ ಗೌರವ ನೆಮ್ಮದಿಯ ಬದುಕನ್ನು ಹೊಂದಿದ್ದೇವೆ ಎಂದರೆ ಅದು, ಈ ದೇಶದ ಸಂವಿಧಾನದಿಂದ ಸಾಧ್ಯವಾಗಿದೆ. ಹಾಗಾಗಿ ನಾವೆಲ್ಲರೂ ಇಂತಹ ಸ್ವಾಭಿಮಾನದ ಸ್ವಾವಲಂಬಿ ಬದುಕನ್ನು ಕಟ್ಟಿಕೊಟ್ಟಿರುವ ಈ ದೇಶದ ಸಂವಿಧಾನವನ್ನು ಹೆಚ್ಚು ಹೆಚ್ಚು ಆಧ್ಯಯನ ಮಾಡಬೇಕು. ಹೆಚ್ಚು ಹೆಚ್ಚು ಗೌರವಿಸಬೇಕು. ಪ್ರಜಾಪ್ರಭುತ್ವವೇ ನಮ್ಮ ಧರ್ಮವಾಗಬೇಕು, ಸಂವಿಧಾನವೇ ನಮ್ಮ ಧರ್ಮ ಗ್ರಂಥವಾಗಬೇಕು” ಎಂದು ಆಶಯ ವ್ಯಕ್ತಪಡಿಸಿದರು

“ನಾವೆಲ್ಲರೂ ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ಕೊಡಿಸುವುದರ ಮೂಲಕ, ಅವರನ್ನು ಉತ್ತಮ ಪ್ರಜೆಗಳಾಗಿ ರೂಪಿಸಬೇಕಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಜೊತೆಗೆ ಪಡೆದುಕೊಂಡ ಶಿಕ್ಷಣ, ಸಮಾಜ ಹಾಗೂ ದೇಶದ ಅಭಿವೃದ್ಧಿಗೆ ವಿನಿಯೋಗವಾಗಬೇಕು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ಬುದ್ಧ, ಬಸವ, ಅಂಬೇಡ್ಕರ್ ಅವರ ಆದರ್ಶದ ದಾರಿಯಲ್ಲಿ ಬೆಳೆಸಬೇಕು” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಗಾಂಧಿ ಹೆಸರು ಬದಲಾವಣೆಯೇ ದೇಶದ ಅಭಿವೃದ್ಧಿ ಎನ್ನುವವರು ಅಧಿಕಾರದಲ್ಲಿ : ಎಬಿ ರಾಮಚಂದ್ರಪ್ಪ
ಈ ಕಾರ್ಯಕ್ರಮದಲ್ಲಿ ಪರಿವರ್ತನ ವೇದಿಕೆಯ ಗೌರವ ಅಧ್ಯಕ್ಷರಾದ ಭಂಗಿ ನಾಗರಾಜ್, ಜಿಲ್ಲಾ ಅಧ್ಯಕ್ಷರಾದ ಎಂ. ರುದ್ರಯ್ಯ, ಪೊಲೀಸ್ ಇಲಾಖೆಯ ತಿಮ್ಮಣ್ಣ, ಎಸ್. ಪರಮೇಶ್ ತಿಪ್ಪೇಸ್ವಾಮಿ ಮುಖ್ಯ ಶಿಕ್ಷಕರಾದ ಶಿವಕುಮಾರ್, ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಕುಮಾರಸ್ವಾಮಿ, ಶಾಲಾ ಸಿಬ್ಬಂದಿ, ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.





