ಅತಿಯಾದ ಉನ್ಮಾದದಿಂದ ಸಾರ್ವಜನಿಕ ಉತ್ಸವಗಳಲ್ಲಿ ಅಷ್ಟು ಡಿಜೆ, ಇಷ್ಟು ಡಿಜೆ ಬರಲಿವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಪೋಸ್ಟ್ ಹಾಕಿದರೆ ಜೋಕೆ! ಕೇಸು ಬೀಳಲಿದೆ ಎಚ್ಚರ! ರಾಜ್ಯದಾದ್ಯಂತ ಡಿಜೆ ನಿಷೇಧ ಸದ್ದು ಮಾಡುತ್ತಿರುವ ಬೆನ್ನಲ್ಲೇ ಚಿತ್ರದುರ್ಗ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ ಶೋಭಾಯಾತ್ರೆಯಲ್ಲಿ ಒಂಬತ್ತು ಡಿಜೆ (DJ) ಭಾಗವಹಿಸಲಿವೆ ಎಂದು ಸಾಮಾಜಿಕ ಜಾಲತಾಣ ಫೇಸ್ಬುಕ್ ಪೋಸ್ಟ್ ನಲ್ಲಿ ಸುಳ್ಳುಸುದ್ದಿ ಹಬ್ಬಿಸುತ್ತಿದ್ದ ವ್ಯಕ್ತಿಯ ವಿರುದ್ದ ಮೊಳಕಾಲ್ಮೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆರ್.ಮಂಜುನಾಥ ಅಲಿಯಾಸ್ ಮಂಜ ಎನ್ನುವ ವ್ಯಕ್ತಿಯ ವಿರುದ್ಧ ಮೊಳಕಾಲ್ಮೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈತ ‘manju achar prince’ ಎಂಬ ಫೇಸ್ಬುಕ್ ಐಡಿಯಲ್ಲಿ 2025 ಸೆಪ್ಟೆಂಬರ್ 08ರಂದು ಬೆಳಗ್ಗೆ 11 ಗಂಟೆಯ ಸಮಯದಲ್ಲಿ “ಇತಿಹಾಸ ಸೃಷ್ಟಿಸಲು ಸಿದ್ಧವಾಗಿದೆ ಚಿತ್ರದುರ್ಗ ಬೃಹತ್ ಶೋಭಾಯಾತ್ರೆ, 2025 ಸೆ. 13ಕ್ಕೆ ಶನಿವಾರ ಪ್ರಪಥಮ ಬಾರಿ ಚಿತ್ರದುರ್ಗದ ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆಗೆ ಘರ್ಜಿಸಲು ಮುಂಬೈ, ಬೆಳಗಾವಿ, ಹುಬ್ಬಳ್ಳಿ, ಹಾಗೂ ಇನ್ನೂ ಹೆಸರಾಂತ 9 DJ ಗಳು ಭಾಗವಹಿಸಲಿವೆ ಎಂದು ಪೋಸ್ಟ್ ಹಾಕಿದ್ದು, ಸಾರ್ವಜನಿಕವಾಗಿ ಸುಳ್ಳು ಸುದ್ದಿ ಮತ್ತು ಡಿಜೆ ಬಳಕೆ ಪ್ರಚೋದನೆಗೆ ಕುಮ್ಮಕ್ಕು ನೀಡಿದಂತಾಗಿದೆ ಎಂದು ಆರೋಪಿಸಿ ಕೇಸು ದಾಖಲಾಗಿದೆ.

ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ತರುವಂತೆ ಪ್ರಚೋದನಾಕಾರಿ ಪೋಸ್ಟ್ ಮಾಡಿರುವುದರಿಂದ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತೆ ಕ್ರಮವಾಗಿ ಸದರಿ ಮಂಜುನಾಥನ ವಿರುದ್ಧ ಮೊಳಕಾಲೂರು ಪೊಲೀಸ್ ಠಾಣೆಯಲ್ಲಿ ಪಿಎಆರ್ ನಂಬರ್ 25/2025 ಕಲಂ.126(2)ಬಿ.ಎನ್.ಎಸ್.ಎಸ್-2023 ರೀತ್ಯಾ ಪ್ರಕರಣ ದಾಖಲಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಬೀದಿ ನಾಯಿ ದಾಳಿಗೆ ವೃದ್ಧ, ನಾಲ್ವರು ಮಕ್ಕಳಿಗೆ ಗಂಭೀರ ಗಾಯ; ಆಸ್ಪತ್ರೆಗೆ ದಾಖಲು
ಚಿತ್ರದುರ್ಗ ಜಿಲ್ಲಾಧಿಕಾರಿ ಸೆ.01 ರಿಂದ ಸೆ.15 2025 ರವರೆಗೆ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯಲಿರುವ ಗಣಪತಿ ಶೋಭಾಯಾತ್ರೆ, ವಿಸರ್ಜನಾ ಮೆರವಣಿಗೆ ಮತ್ತು ಈದ್ ಮಿಲಾದ್ ಹಬ್ಬದ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಜಿಲ್ಲಾದ್ಯಂತ ಡಿಜೆ ಸಿಸ್ಟಂ/ ಅತಿಹೆಚ್ಚು ಶಬ್ದ ಹೊರಡಿಸುವ ಉಪಕರಣಗಳನ್ನು ಬಳಸದಂತೆ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅನೇಕ ಕಡೆ ಗಣೇಶ ವಿಸರ್ಜನೆ ಸಮಯದಲ್ಲಿ ದೇಶೀಯ ಸಾಂಸ್ಕೃತಿಕ ಕಲೆಗಳ ಡೊಳ್ಳು, ತಮಟೆ, ವೀರಗಾಸೆ, ಮದ್ದಳೆ, ಯಕ್ಷಗಾನ, ಕೋಲಾಟ, ಬೊಂಬೆ ಕುಣಿತಗಳಂತಹ ಸಾಂಪ್ರದಾಯಿಕ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ಸಾಂಪ್ರದಾಯಿಕ, ಸಾಂಸ್ಕೃತಿಕ ಕಲೆಗಳ ಪುನರುತ್ಥಾನವೂ ಸಾದ್ಯವಾಗಲಿದೆ.





