“ಬೆಳೆ ಖರೀದಿ ಕೇಂದ್ರ ತೆರೆಯಲು, ಚಿತ್ರದುರ್ಗ ಜಿಲ್ಲೆಯ ರೈತರಿಗೆ ಬೆಳೆ ಪರಿಹಾರ ಬಿಡುಗಡೆಯಾಗದೇ ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ರೈತರಿಗೆ ಬೆಳೆ ಪರಿಹಾರ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ತೀರ್ಮಾನಗಳನ್ನು ಅನುಷ್ಠಾನಗೊಳಿಸದ ಜಿಲ್ಲಾಧಿಕಾರಿಗಳ ಕ್ರಮವನ್ನು ಖಂಡಿಸಿ ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂಭಾಗದಲ್ಲಿ ಒಂದು ದಿನ ಉಪವಾಸ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು” ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಿತ್ರದುರ್ಗ ಜಿಲ್ಲಾ ಘಟಕದ ಮುಖಂಡರು ಎಚ್ಚರಿಸಿದರು.
ಈ ಕುರಿತು ಚಿತ್ರದುರ್ಗ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಿ ಮಾತನಾಡಿದ ಮುಖಂಡರು “ಚಿತ್ರದುರ್ಗ ಜಿಲ್ಲೆಯ 6 ತಾಲೂಕಿನ ರೈತರಿಗೆ ಯಾವುದೇ ಪರಿಹಾರ ಬರದೇ ಸಂಕಷ್ಟದಲ್ಲಿ ದಿನ ದೂಡುತ್ತಿದ್ದಾರೆ. ಜಿಲ್ಲಾಡಳಿತದ ಗಮನಕ್ಕೆ ಹಲವು ಸಮಸ್ಯೆಗಳ, ಬೇಡಿಕೆಗಳ ಬಗ್ಗೆ ಒತ್ತಾಯಿಸಿದರೂ ಕ್ರಮ ಕೈಗೊಂಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಚಿತ್ರದುರ್ಗ ಜಿಲ್ಲೆಯ ರೈತರು ತೀವ್ರ ಬರಗಾಲಕ್ಕೆ ತುತ್ತಾಗಿ ನಂತರ ಅತಿವೃಷ್ಟಿ ಆಗಿದ್ದು, ರೈತರಿಗೆ ಯಾವುದೇ ವಿಮೆ ಪರಿಹಾರ ಬಂದಿರುವುದಿಲ್ಲ. 2022-23ನೇ ಸಾಲಿನಲ್ಲಿ ಅತಿವೃಷ್ಟಿ ಉಂಟಾಗಿ ಸರ್ಕಾರ ರೈತರ ಅಕೌಂಟಿಗೆ ಜಮಾ ಮಾಡಲು ಬಿಡುಗಡೆ ಆಗಿದ್ದ ಹಣವನ್ನು ರೈತರ ಅಕೌಂಟ್ ಹಾಕದೆ ಬೇನಾಮಿ ಹೆಸರಿಗೆ ಹಾಕಿ 46 ಕೋಟಿ ಹಣ ಲೂಟಿ ಮಾಡಿರುವ ಬಗ್ಗೆ ತನಿಖೆ ಆದರೂ ಇದುವರೆಗೂ ಯಾವುದೇ ಕ್ರಮ ವಹಿಸಿರುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“2022-23ನೇ ಸಾಲಿನಲ್ಲಿ ಹವಮಾನ ಆಧಾರಿತ ಬೆಳೆವಿಮೆಯಲ್ಲಿ ರೈತರಿಗೆ ಮೋಸವಾಗಿದ್ದು, ಸಮಗ್ರ ತನಿಖೆ ನಡೆಸಿ ಕ್ರಮ ವಹಿಸಬೇಕು. ಸರ್ಕಾರ ಘೋಷಿಸಿದ ಬೆಳೆಗಳನ್ನು ಖರೀದಿಸಲು ವರ್ಷಾ ಪೂರ್ತಿ ಖರೀದಿ ಕೇಂದ್ರ ತೆರೆದಿರಬೇಕು. ಮತ್ತು ರೈತರು ಬೆಳೆದ ಎಲ್ಲಾ ಧವಸ ಧಾನ್ಯಗಳನ್ನು ಮಿತಿಗೊಳಿಸದೇ ಪೂರಾ ಖರೀದಿ ಮಾಡಬೇಕು” ಎಂದು ಒತ್ತಾಯಿಸಿದರು.
“ಹಲವು ಬಾರಿ ಖಾಸಗಿ ಶಿಕ್ಷಣ ವ್ಯವಸ್ಥೆ ಸರಿಪಡಿಸುವ ಬಗ್ಗೆ ಮನವಿ ಸಲ್ಲಿಸಿದರೂ, ಖಾಸಗಿ ಶಾಲೆಯಲ್ಲಿ ನಡೆಯುತ್ತಿರುವ ದುರಾಡಳಿತವನ್ನು ಇದುವರೆಗೂ ಸರಿಪಡಿಸಿಲ್ಲ. ರೈತರನ್ನು ಶೋಷಿಸುವ ಬೋರ್ವೆಲ್ ಗಾಡಿಗಳು ಕೊರೆಯುವ ಕೊಳವೆ ಬಾವಿ ಅಡಿಗೆ ದರ ನಿಗದಿ ತೀರ್ಮಾನವನ್ನು ಗಟ್ಟಿಗೊಳಿಸಿಲ್ಲ. ಬೆಳೆ ಕಟಾವು ಮತ್ತು ಪೆಂಡಿ ಕಟ್ಟುವ ಯಂತ್ರಗಳ ದರ ನಿಗದಿ ಅನುಷ್ಠಾನಗೊಂಡಿಲ್ಲ. ಈಚಗಟ್ಟ ಗ್ರಾಮದಲ್ಲಿ ಸೋಲಾರ್ ಪ್ಲಾಂಟಿನಿಂದ ಬರುವ ತೆರಿಗೆಯನ್ನು ಅದೇ ಗ್ರಾಮದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ಇವುಗಳ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
“ಮೇಲ್ಕಂಡ ಒತ್ತಾಯಗಳ ಬಗ್ಗೆ ಜಿಲ್ಲಾಡಳಿತ ಕೂಡಲೇ ಶೀಘ್ರ ಕ್ರಮವಹಿಸಿ ರೈತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ, ಕೂಡಲೇ ಪರಿಹಾರವನ್ನು ಕೊಡಿಸಿ ಕೊಡಬೇಕು ಎಂದು ಒತ್ತಾಯಿಸಿ ಕಛೇರಿ ಮುಂಭಾಗದಲ್ಲಿ ಡಿಸೆಂಬರ್ 10, 2025ನೇ ಬುಧವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5:00 ವರೆಗೆ ಉಪವಾಸ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಹಿರಿಯೂರು ಒಳಚರಂಡಿ ಯೋಜನೆ ಕಾಮಗಾರಿಗೆ ಅನುಮೋದನೆ: ಸಚಿವ ಡಿ ಸುಧಾಕರ್
ಈ ವೇಳೆ ಜಿಲ್ಲಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ರಾಜ್ಯ ಕಾರ್ಯಧ್ಯಕ್ಷರಾದ ಈಚಘಟ್ಟಸಿದ್ದವೀರಪ್ಪ, ಮುಖಂಡರಾದ ಕರಿಸಿದ್ದಯ್ಯ, ಸಿದ್ದರಾಮಣ್ಣ, ಸತೀಶ್, ಜಯಣ್ಣ, ರಂಗಸ್ವಾಮಿ, ಸಣ್ಣ ತಿಮ್ಮಣ್ಣ, ವೀರಭದ್ರಪ್ಪ, ರಾಮಣ್ಣ, ರಾಜಪ್ಪ, ವೇದಮೂರ್ತಿ, ತಿಮ್ಮಾರೆಡ್ಡಿ, ಮಂಜುನಾಥ್, ಕುಮಾರಣ್ಣ, ಪ್ರಸನ್ನ, ವೆಂಕಟೇಶ್, ತಿಮ್ಮಯ್ಯ, ಗೋವಿಂದಪ್ಪ, ನಿಂಗಪ್ಪ, ಸಣ್ಣಪ್ಪ, ಕರಿಯಪ್ಪ, ದಾಸಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.





