ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ , ಹಿರಿಯೂರು, ಚಳ್ಳಕೆರೆ ಸೇರಿದಂತೆ ಎಲ್ಲಾ ತಾಲೂಕಿನ ರೈತ ಮುಖಂಡರು, ರೈತರು ವಿವಿ ಸಾಗರದ ಕಣಿವೆ ಮಾರಮ್ಮ ದೇಗುಲದಲ್ಲಿ ಪೂಜೆ ಸಲ್ಲಿಸಿ ಪೂರ್ಣ ಭರ್ತಿಯಾಗಿ ಕೋಡಿಬಿದ್ದಿದ್ದ ವಾಣಿವಿಲಾಸ ಜಲಾಶಯಕ್ಕೆ ಬಾಗೀನ ಅರ್ಪಣೆ ಮಾಡಿ, ಸಮುದಾಯ ಭವನದಲ್ಲಿ ಜಿಲ್ಲೆಯ ಎಲ್ಲಾ ರೈತರು ಒಟ್ಟಿಗೆ ಸಭೆ ಸೇರಿ ಸಮಗ್ರ ನೀರಾವರಿ ಅನುಷ್ಠಾನಕ್ಕೆ ಒತ್ತಾಯಿಸಿ, ಭದ್ರಾ ಮೇಲ್ದಂಡೆ ಕಾಮಗಾರಿಗೆ ಹಣ ಬಿಡುಗಡೆ ಮಾಡದ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ರಾಜ್ಯ ಕಾರ್ಯಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ “ಸರ್ಕಾರಗಳು ಮತ್ತು ಜನಪ್ರತಿನಿಧಿಗಳು ಜಿಲ್ಲೆಯ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಭದ್ರಾ ನೀರು ಈಗ ಬಂತು, ಆಗ ಬಂತು, ಅಲ್ಲಿ ಬಂತು ಇಲ್ಲಿ ಬಂತು ಎಂದು ಇಲ್ಲದ ಸಬೂಬುಗಳನ್ನು, ಸುಳ್ಳು ಭರವಸೆಗಳನ್ನು ನೀಡಿ ದಾರಿ ತಪ್ಪಿಸುತ್ತಿದ್ದಾರೆ. ಈ ಬಾರಿಯ ಚಳುವಳಿಯಲ್ಲಿ ರೈತರಿಗೆ ಸಮರ್ಪಕ, ಸಮಗ್ರ ನೀರಾವರಿ ಯೋಜನೆ ಜಾರಿ ಮಾಡಬೇಕು ಎಂದು ಸರ್ಕಾರಗಳ ಮೇಲೆ ತೀವ್ರತರದ ಒತ್ತಡ ತರುವ ಹೋರಾಟವನ್ನು ಮಾಡಬೇಕು” ಎಂದು ಅಭಿಪ್ರಾಯಪಟ್ಟರು.

ಈ ವೇಳೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಕೆ ಟಿ ತಿಪ್ಪೇಸ್ವಾಮಿ “ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಾಗೂ ಮಹಾರಾಣಿ ಕೆಂಪನಂಜಮ್ಮಣ್ಣಿಯವರು ಚಿತ್ರದುರ್ಗ ಜಿಲ್ಲೆಯ ಜನರಿಗೆ ವ್ಯವಸಾಯ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಆಸರೆಯಾಗಿ ಜಲಾಶಯ ನಿರ್ಮಿಸಿದರು. ಈ ದಿನ ಜಿಲ್ಲೆಯ ಎಲ್ಲಾ ರೈತರು ಒಟ್ಟಿಗೆ ಸೇರಿ ಬಾಗೀನ ಅರ್ಪಿಸಿರುವುದು ಒಂದು ಐತಿಹಾಸಿಕ ದಿನವಾಗಿದೆ. ಇನ್ನು ಮುಂದೆ ನಮ್ಮ ಜಿಲ್ಲೆಯ ಎಲ್ಲಾ ರೈತರು ಒಟ್ಟುಗೂಡಿ ನೀರಾವರಿ ಹೋರಾಟವನ್ನು ತೀವ್ರಗೊಳಿಸಬೇಕಾಗಿದೆ. ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ ನಲ್ಲಿ ಘೋಷಣೆ ಮಾಡಿರುವ 5300 ಕೋಟಿ ಹಣವನ್ನು ಕೂಡಲೇ ಬಿಡುಗಡೆಗೊಳಿಸಬೇಕು ಮತ್ತು ರಾಜ್ಯ ಸರ್ಕಾರ 5000 ಕೋಟಿ ಹಣವನ್ನು ಈ ಬಜೆಟ್ ಅಧಿವೇಶನದಲ್ಲಿ ಮೀಸಲಿಡಬೇಕು” ಎಂದು ಆಗ್ರಹಿಸಿದರು.

“ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಹೊಸದುರ್ಗ ಸೇರಿ ಎಲ್ಲಾ ತಾಲೂಕುಗಳ ಎಲ್ಲಾ ಕೆರೆಗಳಿಗೂ ನೀರು ತುಂಬಿಸಬೇಕು ಎಂದು ಆಗ್ರಹಿಸಿ ತಾಲೂಕು ಕಚೇರಿಗಳ ಮುಂಭಾಗದಲ್ಲಿ ಜನವರಿ 30ನೇ ತಾರೀಕಿನಿಂದ ಅನಿರ್ದಿಷ್ಟ ಚಳುವಳಿ ಹಮ್ಮಿಕೊಳ್ಳಲಾಗುವುದು. ಇದಕ್ಕೆ ಸರ್ಕಾರ ಸ್ಪಂದಿಸದಿದ್ದರೆ, ಜಿಲ್ಲೆಯ ಆರು ತಾಲೂಕುಗಳನ್ನು ಏಕಕಾಲದಲ್ಲಿ ಬಂದ್ ಮಾಡಿ ಸರ್ಕಾರಕ್ಕೆ ತೀವ್ರವಾಗಿ ಒತ್ತಾಯಿಸಲಾಗುವುದು. ಇದಕ್ಕೂ ಸರ್ಕಾರಗಳು ಸ್ಪಂದಿಸದೆ ಇದ್ದರೆ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲಾಗುವುದು” ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ “ಆಳುವ ಸರ್ಕಾರಗಳು ಒಂದಲ್ಲ ಒಂದು ರೀತಿ ಮೋಸ ಮಾಡುತ್ತಲೇ ಬಂದಿವೆ. ನೀರು ಬಂದರೆ ಮುಗಿಯುವುದಿಲ್ಲ, ಬೆಂಬಲ ಬೆಲೆ ಸ್ವಾಮಿನಾಥನ್ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಬೇಕು. ಆದ್ದರಿಂದ ಎಲ್ಲಾ ರೈತ ಸಂಘಟನೆಗಳು ಒಗ್ಗೂಡಿ ಹೋರಾಟ ಮಾಡಬೇಕು” ಎಂದು ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ತಮ್ಮ ನಿರ್ಧಾರಗಳನ್ನು ತಿಳಿಸದಿದ್ದರೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಚಳುವಳಿ ಹಮ್ಮಿಕೊಳ್ಳಲು ಸಭೆಯಲ್ಲಿ ಒಮ್ಮತದ ತೀರ್ಮಾನ ಮಾಡಲಾಯಿತು.ಇದೇ ವೇಳೆ ಕಾರ್ಯಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವ ರೆಡ್ಡಿ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರೈತರಿಗೆ ಕೃಷಿಸಾಲ ನೀಡದ ಬ್ಯಾಂಕ್ ವಿರುದ್ಧ ಮಲೆಬೆನ್ನೂರಿನಲ್ಲಿ ರೈತಸಂಘ ಪ್ರತಿಭಟನೆ
ಮೊಳಕಾಲ್ಮೂರು ನೀರಾವರಿ ಸಮಿತಿ ಅಧ್ಯಕ್ಷ ನಾಗರಾಜ್, ಹಿರಿಯೂರು ತಾಲೂಕು ಅಧ್ಯಕ್ಷ ಸಿದ್ದರಾಮಯ್ಯ, ಹೊಳಲ್ಕೆರೆ ತಾಲೂಕು ಅಧ್ಯಕ್ಷ ರಂಗಸ್ವಾಮಿ, ಹೊಸದುರ್ಗ ತಾಲ್ಲೂಕು ಅಧ್ಯಕ್ಷ ಚಿತ್ತಪ್ಪ, ಚಳ್ಳಕೆರೆ ತಾಲೂಕು ಅಧ್ಯಕ್ಷ ರಾಜಣ್ಣ, ಮೊಳಕಾಲ್ಮೂರು ತಾಲೂಕು ಅಧ್ಯಕ್ಷ ನಾಗರಾಜ್, ರೈತ ಸಂಘದ ಜಿಲ್ಲಾ ಪದಾಧಿಕಾರಿಗಳು ಬುಡ್ನಟ್ಟಿ ತಿಪ್ಪೇಸ್ವಾಮಿ, ಚನ್ನಕೇಶವ, ಮೂರ್ತಿ, ವೀರಭದ್ರಪ್ಪ, ಜಯಣ್ಣ, ಬಸವರಾಜ್, ನಿರಂಜನ್, ಮೂರ್ತಿ, ಸಣ್ಣ ತಿಮ್ಮಣ್ಣ, ಜಯಣ್ಣ, ಶಿವಣ್ಣ, ರಂಗಸ್ವಾಮಿ, ಶ್ರೀಕಂಠ ಮೂರ್ತಿ, ಗೋವಿಂದ್ ರಾಜ್, ನಾಗರಾಜ, ನಟರಾಜ್, ಹನುಮಂತಪ್ಪ, ಚಿಕ್ಕಣ್ಣ ಹಾಗೂ ಜಿಲ್ಲೆಯ ರೈತರು ಭಾಗವಹಿಸಿದ್ದರು.





