ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಕಿಡಿಗೇಡಿಗಳ ಅಟ್ಟಹಾಸದಿಂದ ಅಲ್ಲಿಯ ನಗರ ಪ್ರದೇಶದಲ್ಲಿ ಶಾಂತಿ ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಜುಲೈ 30, 2025 ರಂದು ಸಂಜೆ 4:30 ರಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಪಕ್ಕದಲ್ಲಿ ಇರುವಂತಹ ಮೊಬೈಲ್ ಅಂಗಡಿಗೆ ರಿಪೇರಿ ಮಾಡುವ ನೆಪದಲ್ಲಿ ಹೋಗಿ ಉದ್ದೇಶಪೂರ್ವಕವಾಗಿ ಕೆ ಆರ್ ಎಸ್ ಕಾರ್ಯಕರ್ತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆದಿದ್ದು , ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರು ಹಿರಿಯೂರಿನ ಕಾರ್ಯಕರ್ತ ವಿನಯ್ ವಿರುದ್ಧ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಖಂಡಿಸಿ ಚಿತ್ರದುರ್ಗ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಚಿತ್ರದುರ್ಗ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಮನವಿ ಸಲ್ಲಿಸಿ ಮಾತನಾಡಿದ ಮುಖಂಡರು,
“ಭ್ರಷ್ಟಾಚಾರದ ವಿರುದ್ಧ ಹಾಗೂ ಅನ್ಯಾಯದ ವಿರುದ್ಧ ಹೋರಾಡುತ್ತಿರುವುದನ್ನು ಸಹಿಸಲಾರದೆ ಹಿರಿಯೂರು ತಾಲೂಕಿನಲ್ಲಿ ಇತ್ತೀಚೆಗೆ ನಗರಸಭೆ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದಂತಹ ತಾಲೂಕಿನ ಅಧ್ಯಕ್ಷ ವಿನಯ್ ರವರ ಕೆಲಸಗಳನ್ನ ಸಹಿಸಲಾರದೆ ಉದ್ದೇಶಪೂರ್ವಕವಾಗಿ ಹಲ್ಲೆ ಮಾಡಿರುವುದು ಹಾಗೂ ಮಾಡಿಸಿದ್ದಾರೆ ಎಂಬುದು ಸ್ಪಷ್ಟವಾಗಿ ಮೇಲ್ನೋಟಕ್ಕೆ ಕಂಡುಬರುತ್ತಿದೆ” ಎಂದು ಆರೋಪಿಸಿದರು.

“ಹಿರಿಯೂರು ತಾಲೂಕಿನ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ರವರ ಹೆಸರನ್ನು ಈ ಕಿಡಿಗೇಡಿಗಳು ಬಳಸಿಕೊಂಡು ಈ ರೀತಿಯ ದೌರ್ಜನ್ಯ ಅಕ್ರಮಗಳನ್ನು ಮಾಡುತ್ತಿರುವುದು ಎಂದು ಅಲ್ಲಿಯ ಸ್ಥಳೀಯ ಜನರು ಮತ್ತು ಸಾರ್ವಜನಿಕರು ಆರೋಪಿಸುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿಸೆಂಬರ್ 30 ರಂದು ಅಂಗಡಿಗೆ ಅಕ್ರಮವಾಗಿ ನುಗ್ಗಿ ಹಲ್ಲೆ ಮಾಡಿ ಹಾಗೂ ಕೆಟ್ಟ ಶಬ್ದಗಳನ್ನು ನಿಂದಿಸಿ ಅಕ್ಕ ಪಕ್ಕದಲ್ಲಿರುವ ಮಹಿಳೆಯರು ಮತ್ತು ಸಾರ್ವಜನಿಕರು ಸಹಾಯಕ ಧಾವಿಸಿದರೆ ಅವರಿಗೂ ಧಮ್ಕಿಹಾಕಿ ಕೆಟ್ಟ ಶಬ್ದಗಳನ್ನು ನಿಂದಿಸಿದ್ದಾರೆ. ಇದರಿಂದ ಹಿರಿಯೂರು ತಾಲೂಕು, ನಗರ ಯಾವ ಅವ್ಯವಸ್ಥೆಗೆ ಹೋಗಿದೆ ಎನ್ನುವ ಜನರಿಗೂ ಸಹ ಆತಂಕ ಶುರುವಾಗಿದ್ದು , ಈ ಘಟನೆಯನ್ನು ನೋಡಿ ಸಾರ್ವಜನಿಕರು ಭಯಭೀತರಾಗಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆ ನಿಜವಾಗಿ ಅನ್ಯಾಯಕ್ಕೆ ಒಳಗಾದಂತಹ ಅಸ್ಪೃಶ್ಯತೆ ಆಚರಿಸುವಂತಹ ವಿರುದ್ಧ ದಾಖಲಿಸುವಂತಹ ಮಹತ್ವವಾದ ಈ ಕಾಯ್ದೆಯನ್ನು ಈ ಪುಂಡಾಟಿಕೆ ಮಾಡುವಂತಹ ರೌಡಿ ವರ್ತನೆ ಮಾಡುವಂತಹ ದಿಲೀಪ್ ಮತ್ತು ಮಾರುತಿ ಅಲಿಯಾಸ್ ಸ್ಟೀಫನ್ ಇಂಥವರು ಈ ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡು ಸುಳ್ಳು ಅಟ್ರಾಸಿಟಿ ಪ್ರಕರಣವನ್ನು ದಾಖಲಿಸಿ ಕೆ ಆರ್ ಎಸ್ ಪಕ್ಷದವರನ್ನು ಅವರ ಹೋರಾಟಗಳನ್ನು ಮಾನಸಿಕವಾಗಿ ಕುಗ್ಗಿಸಬೇಕೆನ್ನುವ ನಿಟ್ಟಿನಲ್ಲಿ ಇಂತಹ ಸುಳ್ಳು ದೂರುಗಳನ್ನು ಸಲ್ಲಿಸುತ್ತಿರುವುದು ಗಮನಿಸಿದರೆ ಸಮಾಜದಲ್ಲಿ ಅಕ್ರಮ ಮತ್ತು ಕಾಯ್ದೆ ದುರುಪಯೋಗ ಕಂಡು ಬರುತ್ತದೆ” ಎಂದು ಆಗ್ರಹಿಸಿದರು.
“ಈ ರೀತಿ ಸುಳ್ಳು ಪ್ರಕರಣಗಳನ್ನು ದಾಖಲಿಸುವ ರವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಮತ್ತು ಇಂತಹ ಘಟನೆಗಳನ್ನು ಮರುಕಳಿಸಿದಂತೆ ಹಿರಿಯೂರು ತಾಲೂಕಿನಲ್ಲಿ ಕಾನೂನು ವ್ಯವಸ್ಥೆ ಕಾಪಾಡಿ, ಪಕ್ಷದ ಕಾರ್ಯಕರ್ತ ವಿನಯ ರವರಿಗೆ ನ್ಯಾಯ ಕೊಡಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರವೀಂದ್ರನಾಥ ಬಡಾವಣೆ ನಿರಾಶ್ರಿತರನ್ನು ಗಂಜಿಕೇಂದ್ರದಿಂದ ಹೊರದೂಡಿದ ಕ್ರಮಕ್ಕೆ ಕರವೇ ಆಕ್ರೋಶ
ಕರ್ನಾಟಕ ರಾಜ್ಯ ಸಮಿತಿ ಪಕ್ಷದ ರಾಜ್ಯ ಎಸ್ಸಿ ಎಸ್ಟಿ ರಾಜ್ಯ ಕಾರ್ಯದರ್ಶಿ ಮಾರುತಿ ಮತ್ತು ಕಾರ್ಯನಿರ್ವಾಹಕ ಸಮಿತಿ ಸದಸ್ಯರಾದ ಮಹೇಶ್ ನಗರಂಗೆರೆ ಅವರ ನೇತೃತ್ವದಲ್ಲಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾಧಿಕಾರಿಗಳು ಚಿತ್ರದುರ್ಗ ಮತ್ತು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಇವರುಗಳಿಗೆ ಕೆಆರ್ ಎಸ್ ಪಕ್ಷ ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ಈ ವೇಳೆ ಜಿಲ್ಲಾ ಉಸ್ತುವಾರಿ ವೀರಭದ್ರಪ್ಪ, ಚಳ್ಳಕೆರೆ ತಾಲ್ಲೂಕು ಉಪಾಧ್ಯಕ್ಷ ಜಬಿವುಲ್ಲಾ , ಹೊಳಲ್ಕೆರೆ ಉಪಾಧ್ಯಕ್ಷೆ ದೇವಿಕಾ, ಪುಟ್ಟಮ್ಮ ಲುಂಕೇಶ್, ತಿಪ್ಪೇಸ್ವಾಮಿ, ಕೆಂಚಪ್ಪ , ನಾಗರಾಜ ಶಂಕರಪ್ಪ ಎಸ್ಸಿ ಎಸ್ಟಿ ಪದಾಧಿಕಾರಿಗಳು ಮತ್ತು ಜಿಲ್ಲಾ ಮಹಿಳಾ ಘಟಕದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.





