ಬರದ ನಾಡಾಗಿರುವ ಮೊಳಕಾಲ್ಮೂರಿನಲ್ಲಿ ತೊಗರಿ, ಶೇಂಗಾ, ಹತ್ತಿ ಸೇರಿದಂತೆ ರೈತ ಬೆಳೆದಿರುವ ಹಲವು ಬೆಳೆಗಳು ಮಳೆ ಇಲ್ಲದೆ ಅನಾವೃಷ್ಟಿಗೆ ಒಣಗಿ ಹೋಗಿದ್ದು ರೈತ ಭಾರಿ ಸಂಕಷ್ಟಕ್ಕೀಡಾಗಿದ್ದಾನೆ. ಉತ್ತರ ಕರ್ನಾಟಕದ ಜನರ ಬೆಳೆ ನಷ್ಟಕ್ಕೆ ವಿಮೆ ಪರಿಹಾರ ಮತ್ತು ಬೆಳೆ ಸಾಲ ಮನ್ನಾಕ್ಕೆ ಬೆಳೆಪರಿಹಾರ ಘೋಷಣೆ ಮಾಡಿದಂತೆ ಮಾದರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಬೆಳೆ ನಷ್ಟವಾಗಿರುವ ರೈತರ ಸಾಲ ಮನ್ನಾ ಮತ್ತು ಬೆಳೆ ವಿಮೆ ಪರಿಹಾರ ಘೋಷಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಘಟಕ ಮೊಳಕಾಲ್ಮುರು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಿ ಒತ್ತಾಯಿಸಿತು.

ಈ ವೇಳೆ ಮಾತಾಡಿದ ರೈತ ಮುಖಂಡರು, “ಬರದ ನಾಡು ಮೊಳಕಾಲ್ಮೂರಿನಲ್ಲಿ ಸತತ ಬರದಿಂದ ಮಳೆ ಇಲ್ಲದೆ ಈ ಬಾರಿ ಬೆಳೆದಿದ್ದ ಶೇಂಗಾ, ತೊಗರಿ ಹತ್ತಿ ಸಂಪೂರ್ಣ ಒಣಗಿ ಹೋಗಿದ್ದು, ಪ್ರತಿ ಎಕರೆಗೆ 50,000 ರೂ. ದಂತೆ ಬೆಳೆ ಪರಿಹಾರ ಘೋಷಣೆ ಮಾಡಬೇಕು. ಅಧಿಕಾರಿಗಳು ಖುದ್ದಾಗಿ ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಬೇಕು. ಎಲ್ಲೋ ಕುಳಿತು ಒಂದು ಕಡೆ ಸರ್ವೇ ಮಾಡಿ ಅವೈಜ್ಞಾನಿಕ ವರದಿ ನೀಡಬಾರದು. ಕಳೆದ ಬಾರಿ ಒಂದು ಪಂಚಾಯತಿಗೆ ಮಾತ್ರ ಬೆಳೆ ಪರಿಹಾರ ದೊರೆತಿದ್ದು ಬೇರೆ ಕಡೆ ನಷ್ಟವಾದೆಡೆ ಪರಿಹಾರ ದೊರೆತಿರುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಕಳೆದ ಬಾರಿ ಅಕಾಲಿಕ ಅತಿವೃಷ್ಟಿಯಿಂದಾಗಿ ಮೆಕ್ಕೆಜೋಳ ಸಂಪೂರ್ಣ ಹಾಳಾಗಿದ್ದು, ಅಧಿಕಾರಿಗಳ ತಪ್ಪಿನಿಂದಾಗಿ ಬೆಳೆ ಪರಿಹಾರಕ್ಕೆ ಸರ್ವೇ ನಂಬರ್ ಗಳು ದಾಖಲಾಗದೆ ರೈತರು ನಷ್ಟ ಅನುಭವಿಸಿದ್ದರು. ಈ ಬಾರಿ ಹಾಗಾಗದಂತೆ ಎಚ್ಚರವಹಿಸಿ ಕಳೆದ ಬಾರಿಯ ನಷ್ಟವನ್ನು ಅಧಿಕಾರಿಗಳಿಂದ ವಸೂಲಿ ಮಾಡಿಕೊಡಬೇಕು” ಎಂದು ಆಗ್ರಹಿಸಿದರು.
“ಕೇಂದ್ರ ಸರ್ಕಾರ ಘೋಷಿಸಿರುವ ಫಸಲ್ ಭೀಮಾ ಯೋಜನೆಯಲ್ಲಿ ಷರತ್ತುಗಳನ್ನು ವಿಧಿಸಿರುವುದರಿಂದ ಲಾಭಕ್ಕಿಂತವೇ ನಷ್ಟವೇ ಹೆಚ್ಚಾಗಿದ್ದು, ರೈತರು ವಂತಿಗೆ ತುಂಬುವಲ್ಲಿ, ಬೆಳೆವಿಮೆ ಪರಿಹಾರ ಪಡೆಯುವಲ್ಲಿ ಹಿಂದೆ ಸರಿಯುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಬೆಳೆಗೆ ಪೂರಕವಾಗಿ ಅನುಕೂಲಕರ ತಿದ್ದುಪಡಿಗಳನ್ನು ಕೇಂದ್ರ ಸರ್ಕಾರ ತರುವಂತೆ ಒತ್ತಾಯಿಸುತ್ತಿದ್ದೇವೆ. ಈ ಬಾರಿ ರೈತರು ಯೂರಿಯಾ ಆಭಾವದಿಂದ ಸಂಕಷ್ಟಕ್ಕೆ ಗುರಿಯಾಗಿದ್ದು, ತಕ್ಷಣವೇ ಯೂರಿಯ ಪೂರೈಕೆಗೆ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ ? ಚಿತ್ರದುರ್ಗ | ಸಹಬಾಳ್ವೆ, ಸಮಾಜ ಪರಿವರ್ತನೆ ನಮ್ಮ ಧ್ಯೇಯವಾಗಲಿ: ಭಂಗಿ ನಾಗರಾಜ್
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೇಡ ರೆಡ್ಡಿಹಳ್ಳಿ ಬಸವ ರೆಡ್ಡಿ, ಜಿಲ್ಲಾಧ್ಯಕ್ಷ ಮರ್ಲ್ಲಹಳ್ಳಿ ರವಿಕುಮಾರ್, ತಾಲೂಕು ಅಧ್ಯಕ್ಷ ಸೂರಮ್ಮನಹಳ್ಳಿ ರಾಜಣ್ಣ, ಜಿಲ್ಲಾ ಉಪಾಧ್ಯಕ್ಷ ಹಿರೇಹಳ್ಳಿ ತಿಪ್ಪೇಸ್ವಾಮಿ, ಕಾರ್ಯದರ್ಶಿಗಳಾದ ಈರಣ್ಣ, ಕೋಟಿ ಈರಣ್ಣ, ಮುಖಂಡರಾದ ಎಸ್ ಟಿ ಚಂದ್ರಣ್ಣ, ಈರಣ್ಣ, ಮುಕ್ಕಣ್ಣ, ಮಹಾಲಿಂಗಪ್ಪ, ನಿಂಗಣ್ಣ, ನಾಗರಾಜ, ಶಿವಪ್ಪ, ಮಹೇಶ, ಪಾಶೆಟ್ಟಿ ಪಾಪಯ್ಯ ,ರಾಮಾಂಜನಿ ಬೊಮ್ಮಲಿಂಗನಹಳ್ಳಿ, ರಮೇಶ, ವೆಂಕಟೇಶ, ದಾಸಪ್ಪ, ಶ್ರೀನಿವಾಸ, ಶಿವಮೂರ್ತಿ, ಕಲ್ಲಣ್ಣ, ನಾಗಭೂಷಣ, ಕೃಷ್ಣಮೂರ್ತಿ, ರಾಜಶೇಖರ ನಾಯ್ಕ, ಶಶಿಕುಮಾರ, ಎಲ್ಲಣ್ಣ, ತಿಪ್ಪೇಶಿ, ತಿಪ್ಪೇಸ್ವಾಮಿ ಆಚಾರಿ ಸೇರಿದಂತೆ ಹಲವು ಕಾರ್ಯಕರ್ತರು ಭಾಗವಹಿಸಿದ್ದರು.





