“ನಾವು ನಾಗರಿಕ ಪ್ರಪಂಚದಲ್ಲಿ ಬದುಕುತ್ತೇವೆ ಎಂದುಕೊಳ್ಳುತ್ತಿದ್ದೇವೆ. ಆದರೆ ಮಾನಸಿಕವಾಗಿ ನಾಗರೀಕರಾಗಿದ್ದೇವೆಯೇ? ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ. ನಾವು ಇನ್ನೂ ಜಾತಿ, ಭಾಷೆ, ಧರ್ಮ ಇವುಗಳ ಸಂಕೋಲೆ, ಆಲೋಚನೆಗಳಲ್ಲಿ ಸಿಲುಕಿ ಕೊಂಡಿದ್ದೇವೆ. ಇವುಗಳನ್ನು ಮೀರಿ ನಾವು ಹೊರಬಂದು ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ವ್ಯಕ್ತಿಯ ಆಲೋಚನೆ ಬದಲಾದಾಗ ಮಾತ್ರ ಸಮಾಜದ ಸ್ವಾಸ್ಥ್ಯ ಬದಲಾಗಲು ಸಾಧ್ಯ” ಎಂದು ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರಿನ ಸಮಾಜ ಪರಿವರ್ತನಾ ವೇದಿಕೆ ಕಾರ್ಯಕ್ರಮದಲ್ಲಿ ವಕೀಲ, ಚಿಂತಕ ಹರಿರಾಮ್ ಅಭಿಪ್ರಾಯಪಟ್ಟರು.
ಮೊಳಕಾಲ್ಮೂರು ಸಮಾಜ ಪರಿವರ್ತನಾ ವೇದಿಕೆಯು ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಪ್ರಥಮ ದರ್ಜೆ ಪದವಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ “ಭೀಮೋತ್ಸವ ಹಾಗೂ ಸಾಧಕರು, ಸಮಾಜ ಸೇವಕರಿಗೆ ಸೇವಾ ಪ್ರಶಸ್ತಿ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ 2025” ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದರು.
“ಸ್ವಾತಂತ್ರ್ಯ ಪಡೆದ 70 ವರ್ಷದ ನಂತರ ಶೋಷಿತ ವರ್ಗಗಳ ನಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದೇವೆ. ಈಗ ಅನುಕೂಲ ಪಡೆದುಕೊಳ್ಳಲು ಸಾಧ್ಯವಾಗಿದೆ. ಇದಕ್ಕೆ ಕಾರಣ ನಮ್ಮಲ್ಲಿನ ಜ್ಞಾನ ಹೆಚ್ಚಾಗಿರುವುದು, ಅವಕಾಶಗಳು ಹೆಚ್ಚುತ್ತಿರುವುದು. ಸಮಾಜವನ್ನು ಉತ್ತಮಗೊಳಿಸುವ ಆಲೋಚನೆಗಳಿಂದ ನಾವು ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದೇವೆ. ಅದಕ್ಕೆ ಕಾರಣ ಶಿಕ್ಷಣ. ಶಿಕ್ಷಣದಿಂದ ಮಾತ್ರ ಎಲ್ಲಾ ಸಮಾಜದ ಬದಲಾವಣೆ ಸಾಧ್ಯವಾಗಲಿದೆ” ಎಂದು ತಿಳಿಸಿದರು.
“ಶೋಷಿತ ದಲಿತ ವರ್ಗದ ಈ ತಲೆಮಾರಿನ ಮಕ್ಕಳು ಮಾತ್ರ ಉನ್ನತ ಶಿಕ್ಷಣ, ಕೆಲಸ ಪಡೆಯಲು ಸಾಧ್ಯವಾಗಿದೆ. ಹಿಂದಿನ ತಲೆಮಾರುಗಳು ಶಿಕ್ಷಣದಿಂದ ವಂಚಿತರಾಗಿದ್ದರು. ಹಾಗಾಗಿ ಅವಕಾಶವನ್ನು ಬಳಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು” ಎಂದು ಸಲಹೆ ನೀಡಿದರು.

“ಅಂಬೇಡ್ಕರ್ ಹೇಳುವಂತೆ ವಿದ್ಯಾರ್ಥಿಗಳು ಎರಡು ವಿಷಯಗಳನ್ನು ಮೈಗೂಡಿಸಿಕೊಳ್ಳಬೇಕು. ಯಾವುದೇ ವಿದ್ಯಾರ್ಥಿಯು ಕಲಿಕೆ ಸಮಯದಲ್ಲಿ ನಾನು ಯಾವುದೇ ವ್ಯಕ್ತಿಗಿಂತ ಬುದ್ಧಿಶಕ್ತಿ, ಮಾನಸಿಕ ಸಾಮರ್ಥ್ಯದಲ್ಲಿ ಕಡಿಮೆ ಇಲ್ಲ ಎಂದು ತಿಳಿದು ಉತ್ತಮ ಶಿಕ್ಷಣ ಪಡೆಯಬೇಕು. ಮತ್ತು ಉತ್ತಮ ಶಿಕ್ಷಣದ ನಂತರ ಉತ್ತಮ ಸ್ಥಾನಮಾನಕ್ಕೆ ಹೋದಾಗ ಅವಕಾಶ ವಂಚಿತರಿಗೆ ಅವಕಾಶ ಒದಗಿಸಿಕೊಡುವ ಮತ್ತು ಶೋಷಿತರನ್ನು ಮೇಲೆತ್ತುವ ಕೆಲಸ ಮಾಡಬೇಕು” ಎಂದರು.

“ಇಂದು ಕೇವಲ ಶೇ. 12 ರಿಂದ 14 ಮಕ್ಕಳಿಗೆ ಮಾತ್ರ ಉನ್ನತ ಶಿಕ್ಷಣ ಅಥವಾ ಸಂಪೂರ್ಣ ಶಿಕ್ಷಣದ ಅವಕಾಶವಿದೆ. ಉನ್ನತ ಶಿಕ್ಷಣ ಅಥವಾ ಉದ್ಯೋಗ ಪಡೆಯುವ ಅವಕಾಶಗಳಲ್ಲಿ ಇಂದು ಸಾಕಷ್ಟು ಪೈಪೋಟಿ ಏರ್ಪಟ್ಟಿದೆ. ಅವುಗಳನ್ನು ಎದುರಿಸುವ ಸಾಮರ್ಥ್ಯವನ್ನು ನೈಪುಣ್ಯತೆಯನ್ನು ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದ ಪ್ರಾರಂಭದಿಂದಲೇ ಬೆಳೆಸಿಕೊಳ್ಳಬೇಕಿದೆ. ಈ ಪೈಪೋಟಿಗೆ ತಯಾರಿ ಮತ್ತು ಮನಸ್ಸಿಗೆ ಸಿದ್ಧತೆ ಅಗತ್ಯ. ಅದಕ್ಕೆ ತಕ್ಕಂತೆ ನೀವು ಉತ್ತಮ ಸಂವಹನ, ಭಾಷೆ ಕಲಿಕೆ, ಇದರಲ್ಲಿ ಇಂಗ್ಲೀಷ್ ಕಲಿಕೆ ಅತ್ಯವಶ್ಯಕವಾಗಿದೆ” ಎಂದು ಅಭಿಪ್ರಾಯಪಟ್ಟರು
ಸಮಾಜದಲ್ಲಿ ಉತ್ತಮವಾಗಿ ಕಲಿತು ಎಲ್ಲರಿಗೂ “ಸಮಾನವಾಗಿ ಗೌರವಿಸಿ, ಸಮಾನ ಅವಕಾಶ ನೀಡಿದಾಗ ಮಾತ್ರ ನೀವು ಉತ್ತಮ ವಿದ್ಯಾರ್ಥಿಗಳಾಗಲು ಸಾಧ್ಯ. ಪ್ರತಿಭಾವಂತರನ್ನು ಗುರುತಿಸುವ ಕೆಲಸ ಆಗಬೇಕಿದೆ. ಈ ಕೆಲಸ ಮಾಡುತ್ತಿರುವ ಸಮಾಜ ಪರಿವರ್ತನಾ ವೇದಿಕೆಯ ತಂಡದ ಕೆಲಸ ಶ್ಲಾಘನೀಯ” ಎಂದು ಅಭಿಪ್ರಾಯಪಟ್ಟರು.
ಬೇಡರೆಡ್ಡಿಹಳ್ಳಿ ಬಸವ ರೆಡ್ಡಿ ಮಾತನಾಡಿ “ಈ ಹಿಂದೆ ಹಳ್ಳಿಗಳ ಶೋಷಿತ ಜನರಿಗೆ ಅವಕಾಶಗಳನ್ನು ನಿರಾಕರಿಸಲಾಗಿತ್ತು. ಸಂವಿಧಾನವನ್ನು ನಮ್ಮಿಂದ ಮುಚ್ಚಿಡಲಾಗಿತ್ತು. ಹಳ್ಳಿಗಳ ಜನ ಮತ್ತು ಶೋಷಿತರಿಗೆ ಅಂಬೇಡ್ಕರ್ ಮತ್ತು ಸಂವಿಧಾನದ ಪರಿಚಯಿಸಿದ್ದು ದಲಿತ ಚಳುವಳಿ, ರೈತ ಚಳುವಳಿ ಮತ್ತು ಕಾರ್ಮಿಕ ಚಳುವಳಿಗಳು. ಇಂದು ನಾವು ಬೀದಿಯಲ್ಲಿ ನಿಂತು ಹೋರಾಟ ಮಾಡುತ್ತಿದ್ದೇವೆ. ನಮ್ಮ ಹಕ್ಕುಗಳನ್ನು ಕೇಳುತ್ತಿದ್ದೇವೆ ಎಂದರೆ ಅದಕ್ಕೆ ಮೂಲ ಕಾರಣ ಅಂಬೇಡ್ಕರ್ ಮತ್ತು ಸಂವಿಧಾನ” ಎಂದು ಅಭಿಪ್ರಾಯಪಟ್ಟರು.
ದ್ರಾಕ್ಷಾರಸ ಮಂಡಳಿಯ ಅಧ್ಯಕ್ಷ ಯೋಗೇಶ್ ಬಾಬು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ “ಬುದ್ಧ ಬಸವ ಅಂಬೇಡ್ಕರ್ ಸಮಾಜಕ್ಕೆ ಸಮಾನತೆಯ ದಾರಿ ತೋರಿಸಿದ್ದಾರೆ. ಸಮಾಜದ ಪರಿವರ್ತನೆಗೆ ಕಾರಣರಾಗಿದ್ದಾರೆ. ಇಂದು ನಾವು ಹೊರಗೆ ಬಂದು ವಿದ್ಯಾಭ್ಯಾಸ ಪಡೆದು ಮಾತನಾಡುತ್ತಿರುವ ಅವಕಾಶ ನೀಡಿರುವುದು ಅಂಬೇಡ್ಕರ್ ಆದಿಯಾಗಿ ಈ ಮಹನೀಯರು” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ರಾಜಕಾರಣಿಗಳಿಗೆ ಕಿವುಡುತನ ಹೆಚ್ಚು, ಕೇಳಿಸಲು ಹೋರಾಟ ಮಾಡಿ: ಬಸವಕುಮಾರ ಶ್ರೀ
ಕಾರ್ಯಕ್ರಮದಲ್ಲಿ ಉತ್ತಮ ಅಂಕ ಪಡೆದ ಹತ್ತನೇ ತರಗತಿ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.





