“ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿ ಕನಕದಾಸರ ಜಯಂತಿಯನ್ನು ನವೆಂಬರ್ 08 ರಂದು ಆಯೋಜಿಸಲಾಗಿದ್ದು, ಈ ನಿಟ್ಟಿನಲ್ಲಿ ಅಗತ್ಯ ತಯಾರಿ ಕೈಗೊಳ್ಳಬೇಕು” ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.
ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾದ ಕನಕದಾಸರ ಜಯಂತಿ ಆಚರಣೆಯ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು “ಪ್ರತಿ ವರ್ಷದಂತೆ ಈ ಬಾರಿಯೂ ಕನಕದಾಸರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ನ. 08 ರಂದು ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿ ಆಚರಿಸಲಾಗುವುದು. ಸಮಾಜದವರ ಕೋರಿಕೆಯಂತೆ ನಗರದ ಹೊಳಲ್ಕೆರೆ ರಸ್ತೆಯಲ್ಲಿರುವ ಕನಕ ವೃತ್ತ ಬಳಿ ಬೃಹತ್ ವೇದಿಕೆಯಲ್ಲಿ ಸಮಾರಂಭ ಆಯೋಜಿಸಲಾಗಿದೆ” ಎಂದು ತಿಳಿಸಿದರು.

“ಬೆಳಿಗ್ಗೆ 11.30 ಗಂಟೆಗೆ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ಕನಕದಾಸರ ಕೀರ್ತನೆಗಳ ಗೀತ ಗಾಯನ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗುವುದು. ಜಯಂತಿ ಅಂಗವಾಗಿ ಅಂದು ಕನಕ ವೃತ್ತ ಬಳಿಯ ಕನಕದಾಸರ ಪುತ್ಥಳಿಗೆ ಹಾಗೂ ಮಾಳಪ್ಪನಹಟ್ಟಿ ರಸ್ತೆಯಲ್ಲಿನ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಗಣ್ಯರಿಂದ ಮಾಲಾರ್ಪಣೆ ನೆರವೇರಿಸಲಾಗುವುದು” ಎಂದು ತಿಳಿಸಿದರು.
“ಕಾರ್ಯಕ್ರಮ ಅಂಗವಾಗಿ ಎರಡೂ ವೃತ್ತಗಳಲ್ಲಿ ನಗರಸಭೆ ವತಿಯಿಂದ ಸ್ವಚ್ಛತೆ ಕೈಗೊಳ್ಳಬೇಕು. ಕನಕ ವೃತ್ತದಲ್ಲಿನ ನೀರಿನ ಕಾರಂಜಿಯನ್ನು ಕಾರ್ಯ ನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು. ವೃತ್ತಗಳಲ್ಲಿ ದೀಪಾಲಂಕಾರ ವ್ಯವಸ್ಥೆ ಮಾಡಬೇಕು” ಎಂದು ಸೂಚಿಸಿದರು.
“ಕಾರ್ಯಕ್ರಮದ ವೇಳೆ ಮಳೆಯ ಪರಿಸ್ಥಿತಿ ಕಂಡುಬಂದಲ್ಲಿ ವೇದಿಕೆ ಕಾರ್ಯಕ್ರಮವನ್ನು ನಗರದ ವಾಲ್ಮೀಕಿ ಭವನದಲ್ಲಿ ಆಯೋಜಿಸಲಾಗುವುದು. ವೇದಿಕೆ ಕಾರ್ಯಕ್ರಮ ಮುಕ್ತಾಯವಾದ ಬಳಿಕ, ಕನಕ ವೃತ್ತದಿಂದಲೇ ಕನಕದಾಸರ ಭಾವಚಿತ್ರದ ಮೆರವಣಿಗೆಯನ್ನು ಪ್ರಮುಖ ರಸ್ತೆಗಳಲ್ಲಿ ಸಾಗಿ, ಕುರುಬರ ಹಾಸ್ಟೆಲ್ ವರೆಗೆ ನಡೆಸಲಾಗುವುದು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳನ್ನು ಭಾಗವಹಿಸಲಿವೆ” ಎಂದು ಜಿಲ್ಲಾಧಿಕಾರಿಗಳು ಹೇಳಿದರು.

“ಜಿಲ್ಲೆಯಲ್ಲಿ ಡಿ.ಜೆ. ಯನ್ನು ಶಾಶ್ವತವಾಗಿ ನಿಷೇಧಿಸಲಾಗಿದ್ದು, ಸಮಾಜದವರ ಕೋರಿಕೆಯಂತೆ 04 ಸ್ಪೀಕರ್ ಗಳ ಧ್ವನಿವರ್ಧಕ ಬಳಕೆಗೆ ಅವಕಾಶ ಇದ್ದು, ಅನುಮತಿ ನೀಡಿದಕ್ಕಿಂತ ಹೆಚ್ಚಿನ ಡೆಸಿಬಲ್ ಶಬ್ದ ಹೊರಸೂಸುವ ಧ್ವನಿವರ್ಧಕ, ಸ್ಪೀಕರ್ ಬಳಸಿದರೆ ಸಂಬಂಧಿಸಿದವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗುವುದು” ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
“ಕನಕದಾಸರ ಜಯಂತಿ ಅಂಗವಾಗಿ ನಗರದಲ್ಲಿ ಸೂಕ್ತ ಹಾಗೂ ಸುಗಮವಾಗಿ ಸಂಚಾರ ವ್ಯವಸ್ಥೆ ಕೈಗೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಳ್ಳಬೇಕು. ಎಲ್ಲ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅರ್ಥಪೂರ್ಣವಾಗಿ ಆಚರಿಸಬೇಕು” ಎಂದು ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, “ಕನಕದಾಸರ ಜಯಂತಿ ಸರ್ಕಾರಿ ಕಾರ್ಯಕ್ರಮವಾಗಿದ್ದು, ಎಲ್ಲಾ ಶಾಲಾ ಕಾಲೇಜುಗಳಲ್ಲಿ, ಗ್ರಾಮ ಪಂಚಾಯತಿಗಳಲ್ಲಿ, ನಗರ, ಸ್ಥಳೀಯ ಸಂಸ್ಥೆಗಳಲ್ಲಿ ತಪ್ಪದೆ ಜಯಂತಿ ಆಚರಣೆ ಕೈಗೊಳ್ಳಬೇಕು. ಈ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳು ಸುತ್ತೋಲೆ ಮೂಲಕ ನಿರ್ದೇಶನ ನೀಡಬೇಕು” ಎಂದು ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮುಖ್ಯಮಂತ್ರಿ ಬದಲಾವಣೆವಿಚಾರ; ಯತೀಂದ್ರಗೆ ನೋಟೀಸ್ ಏಕಿಲ್ಲ? ಶಾಸಕ ಬಸವರಾಜ್ ಶಿವಗಂಗಾ ಪ್ರಶ್ನೆ
ಸಭೆಯಲ್ಲಿ ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ, ಡಿಡಿಪಿಐ ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಗುರುನಾಥ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಶ್ರೀರಾಮ್, ಪ್ರಧಾನ ಕಾರ್ಯದರ್ಶಿ ಬಿ.ಟಿ. ಜಗದೀಶ್, ಖಜಾಂಚಿ ಮೃತ್ಯುಂಜಯ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ್ ಮುದ್ದಜ್ಜಿ ಸೇರಿದಂತೆ ಸಮಾಜದ ಮುಖಂಡರಾದ ಎಸ್.ಬಿ.ಎಲ್. ಮಲ್ಲಿಕಾರ್ಜುನ್, ಓಂಕಾರಪ್ಪ, ಯೋಗೀಶ್ ಸಹ್ಯಾದ್ರಿ, ರಾಜಣ್ಣ, ಉಮೇಶ್, ಕೃಷ್ಣಮೂರ್ತಿ, ರಮೇಶ್, ಮಧು, ಈಶ್ವರಪ್ಪ ಮಾಳಪ್ಪನಹಟ್ಟಿ ಮುಂತಾದವರು ಭಾಗವಹಿಸಿದ್ದರು.





