“ಕನ್ನಡ ನಾಡು, ನುಡಿ ಮತ್ತು ಬದುಕಿನ ಉನ್ನತಿಗಾಗಿ ಇಂದು ಎಲ್ಲರಲ್ಲಿ ಕನ್ನಡ ಪ್ರಜ್ಞೆಯನ್ನು ಜಾಗೃತಿಗೊಳಿಸುವುದು ಅತ್ಯವಶ್ಯವಾಗಿದೆ. ಕನ್ನಡ ಪ್ರಜ್ಞೆ ಎಂದರೆ ಕನ್ನಡ ಅಸ್ಮಿತೆ, ವಿವೇಕ ಮತ್ತು ಸಮಗ್ರ ಅಭಿವೃದ್ಧಿಯ ಬೌದ್ಧಿಕ ಪ್ರೇರಣೆಯಾಗಿದೆ. ಇದರ ಜವಾಬ್ದಾರಿಯನ್ನು ಆಡಳಿತದ ಹೊಣೆ ಹೊತ್ತ ಸರ್ಕಾರಗಳೇ ನಿರ್ವಹಿಸಬೇಕಿದೆ” ಎಂದು ಚಿತ್ರದುರ್ಗದಲ್ಲಿ ಸಾಹಿತಿ ಜಿ ಎನ್ ಮಲ್ಲಿಕಾರ್ಜುನಪ್ಪ (ಜಿಎನ್ಎಂ) ತಿಳಿಸಿದರು.
ಚಿತ್ರದುರ್ಗದ ಜ್ಞಾನ ಭಾರತಿ ಶಾಲೆಯ ಸಭಾಂಗಣದಲ್ಲಿ ಚಿತ್ರದುರ್ಗದ ಯೋಗ ಸಮಿತಿ ಗೆಳೆಯರ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು
“ಹೋರಾಟ, ಚಳವಳಿಗಳು ಒತ್ತಡ ಹಾಕಬಹುದಷ್ಟ್ಟೇ. ಕರ್ನಾಟಕ ಏಕೀಕರಣ ಪೂರ್ವದಲ್ಲಿ ಮಾರ್ಧನಿಸುತ್ತಿದ್ದ ‘ಉದಯವಾಗಲಿ ನಮ್ಮ ಚೆಲುವ, ಕನ್ನಡ ನಾಡು’ ಎನ್ನುವುದು ಎಲ್ಲ ಕಾಲಗಳಲ್ಲಿಯೂ, ಆಯಾ ಕಾಲ ಧರ್ಮಕ್ಕೆ ತಕ್ಕಂತೆ ಶಿಕ್ಷಣ, ಪ್ರೇರಣೆ ಮತ್ತು ಉದ್ಯೋಗ ಸೃಷ್ಟಿಯ ಮೂಲಕ ನಿರಂತರ ಹೊಸತನ್ನು ಅನ್ವೇಷಿಸುತ್ತ, ನಮ್ಮ ಮನಸ್ಸು ಮತ್ತು ಹೃದಯಗಳಲ್ಲಿ ಗಟ್ಟಿಯಾಗಿ ನಿಲ್ಲಬೇಕಿದೆ” ಎಂದು ಅಭಿಪ್ರಾಯಪಟ್ಟರು.

“ಕನ್ನಡದ ವಿವೇಕ ಎಂದರೆ ಆದಿಕವಿ ಪಂಪನಿಂದ ಮೊದಲ್ಗೊಂಡು ಇವತ್ತಿನ ಬುಕರ್ ಪ್ರಶಸ್ತಿ ಪಡೆದ ಭಾನು ಮುಷ್ತಾಕ್ ಅವರ ಸಾಹಿತ್ಯದ ತಿರುಳು ಮತ್ತು ಸತ್ವವಾಗಿದೆ. ಇಲ್ಲಿ ಮನುಕುಲ ಒಂದೇ ಜಾತಿ, ಇವನಾರವ ಇವನಾರವ ಎಂದೆಣಿಸದೆ ಒಳಗೊಳ್ಳುವ ಜನಜೀವನ, ಭಾರತ ಜನನಿಯ ತನುಜಾತೆ ಎಂಬ ರಾಷ್ಟ್ರೀಯ ಭಾವ, ತಲ್ಲಣಗಳಿಗೆ ಸಾಂತ್ವನ ಕಂಡುಕೊಳ್ಳುವ ವಚನ ಮತ್ತು ದಾಸ ಸಾಹಿತ್ಯ ಮತ್ತೆಲ್ಲವೂ ಇವೆ. ಆದರೆ ಪ್ರಭುತ್ವದ ಕ್ರಿಯಾಶೀಲತೆ ಮಾತ್ರ ನಿರೀಕ್ಷಿತ ಮಟ್ಟಕ್ಕಿಲ್ಲ, ಅಷೇ ಅಲ್ಲ, ಭ್ರಷ್ಟಗೊಂಡಿದೆ ಕೂಡಾ” ಎಂದು ಜಿ ಎನ್ ಮಲ್ಲಿಕಾರ್ಜುನಪ್ಪ ವಿಷಾದಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಡಾ.ತೋಯಜಾಕ್ಷಿ ಬಾಯಿ, “ಇಂದು ಎಲ್ಲ ವಯೋಮಾನದ ಜನ ಮೊಬೈಲ್ ಗೀಳಿಗೆ ಒಳಗಾಗಿ ಸಮಯ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ದೇಹ ಮತ್ತು ಮನಸ್ಸಗಳ ಶಕ್ತಿಯನ್ನು ತಮ್ಮ ಏಳಿಗೆಗಾಗಿ ಬಳಸಿಕೊಳ್ಳದೆ ಬದುಕಿನ ಗಟ್ಟಿತನವನ್ನ ಕಳೆದುಕೊಳ್ಳುತ್ತಿದ್ದಾರೆ. ಜೊತೆಗೆ, ಅವರವರ ಬೆಲೆ ಬಾಳುವ ಸಮಯವನ್ನು ಸದುಪಯೋಗಪಡಿಸಿಕೊಂಡು ಅವರಿಗೆ ಅಗತ್ಯವಾದ ಜ್ಞಾನ, ಕೌಶಲ್ಯಗಳನ್ನು ಗಳಿಸಿಕೊಂಡು ಉತ್ತಮ ನಾಗರೀಕರಾಗಿ ಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕೃಷಿಕರಾದ ಲವಕುಮಾರ್, ವೈದ್ಯರಾದ ಡಾ. ತೋಯಜಾಕ್ಷಿಬಾಯಿ, ಚಿತ್ರಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸುನೀತ, ಮಾಜಿ ಸೈನಿಕರಾದ ಪ್ರದೀಪ್ ಮತ್ತು ಕಾರ್ಗಿಲ್ ವೀರ ರಾಜಕುಮಾರ್ ಇವರುಗಳನ್ನು ಸನ್ಮಾನಿಸಲಾಯಿತು. ಮಕ್ಕಳು ಮತ್ತು ಯುವಕರು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಹರೀಶ್ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಅಧ್ಯಕ್ಷತೆಯನ್ನು ಕೆಂಚವೀರಪ್ಪ ವಹಿಸಿದ್ದರು.
ಉ ಸುದ್ದಿ ಓದಿದ್ದೀರಾ? ದಾವಣಗೆರೆ | ಅಂತರ್ಜಾತಿ ವಿವಾಹ ಅಂದು ಕಲ್ಯಾಣ ಕ್ರಾಂತಿಗೆ ಇಂದು ಮರ್ಯಾದಾ ಹತ್ಯೆಗೆ ದಾರಿ: ಎಚ್ಎಲ್ ಪುಷ್ಪ
ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಇನ್ಸ್ಪೆಕ್ಟರ್ ಗುರುಮೂರ್ತಿ, ಜ್ಞಾನ ಭಾರತಿ ಯೋಗಕೇಂದ್ರ ವಿಷಯಪರಿವೀಕ್ಷಕ ರಂಗನಾಯಕ್, ಕಾಂತರಾಜ್, ಪ್ರಶಾಂತ್, ಮಲ್ಲೇಶ್, ನಿತ್ಯಾನಂದ್, ರಾಜ್ ಭಕ್ಷಿ, ಚಿತ್ರದುರ್ಗ ನಗರದ ಎಲ್ಲಾ ಶಾಖೆಗಳ ಯೋಗಬಂಧುಗಳು ಇತರರು ಉಪಸ್ಥಿತರಿದ್ದರು.





