ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಂದಾಪುರ ಶಾಲೆಯಲ್ಲಿ ಶೌಚಾಲಯ ಅವ್ಯವಸ್ಥೆ, ಕಾಂಪೌಂಡ್ ಭದ್ರತೆ ಇಲ್ಲದೆ ಮಕ್ಕಳ ಸ್ಥಿತಿ ಅಯೋಮಯವಾಗಿದ್ದು, ಸಂಕಷ್ಟ ಎದುರಿಸುವಂತಾಗಿದೆ.

ಶಾಲಾ ಆವರಣ ಕುಡುಕರ ಅಡ್ಡೆಯಾಗಿದೆ. ಕಾಂಪೌಂಡ್ ಇಲ್ಲದೆ ಕುಡುಕರು, ದುಶ್ಚಟಕ್ಕೆ ಬಲಿಯಾದವರು ಸಂಜೆಯ ರಾತ್ರಿಯ ನಂತರ ಶಾಲೆ ಆವರಣದಲ್ಲಿ ಪ್ರವೇಶಿಸಿ ಪ್ರತಿನಿತ್ಯ ಕುಡಿತ ಜೂಜು ಸಿಗರೇಟ್ ತಂಬಾಕಿನಂತಹ ನಶಾವಸ್ತುಗಳ ಸೇವನೆ ಮಾಡಿ ಶಾಲಾ ಆವರಣವನ್ನು ಕಲುಷಿತಗೊಳಿಸುತ್ತಿದ್ದು, ಶಾಲೆಗೆ ಭದ್ರತೆಯ ತಡೆಗೋಡೆ ಇಲ್ಲದಿರುವುದು ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಶಾಲೆಯ ಶೌಚಾಲಯ ಕೂಡ ದುಸ್ಥಿತಿಯಲ್ಲಿದ್ದು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶೌಚಾಲಯಕ್ಕಾಗಿ ಕಾಂಪೌಂಡ್ ನಿಂದ ಹೊರಗೆ ಅಥವಾ ಕಾಂಪೌಂಡ್ ಮರೆಯಲ್ಲಿ ಬಯಲನ್ನು ಆಶ್ರಯಿಸುವ ಪರಿಸ್ಥಿತಿ ಎದುರಾಗಿದೆ. ಈ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಶಿಕ್ಷಣ ಇಲಾಖೆ ಮತ್ತು ಪಂಚಾಯಿತಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಎಗ್ಗಿಲ್ಲದೆ ನಡೆಯುತ್ತಿದೆ ಗಣಿಗಾರಿಕೆ: ರೈತರ ಭೂಮಿಯೂ ಕಬಳಿಕೆ, ಆರೋಗ್ಯವೂ ಹಾಳು
ಶಾಲೆಯ ಆವರಣದಲ್ಲಿ ರಾತ್ರಿ ವೇಳೆ ದುಶ್ಚಟಕ್ಕೊಳಗಾದ ಕೆಲವು ಸ್ಥಳೀಯರಿಂದ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು, ಅಲ್ಲಲ್ಲಿ ಮದ್ಯದ ಬಾಟಲ್ ಗಳು, ಸಿಗರೇಟ್, ತಂಬಾಕು ಕವರ್ ಗಳು ಬಿದ್ದಿದ್ದು, ಪ್ರತಿನಿತ್ಯ ಆವರಣದಲ್ಲಿ ಇವುಗಳನ್ನು ನೋಡುವ ಮಕ್ಕಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮುಂದಿನ ದಿನಗಳಲ್ಲಿ ಮಕ್ಕಳು ಕೂಡ ಇದರಿಂದಾಗಿ ದಾರಿ ತಪ್ಪುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಕೂಡಲೇ ಶಾಲಾ ಮುಖ್ಯಸ್ಥರು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.





