ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಎರಡು ಪೊಕ್ಸೋ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಮೊದಲ ಪ್ರಕರಣದ ಕೋರ್ಟ್ ತೀರ್ಪು ಹೊರಬಿದ್ದಿದ್ದು, ಮುರುಘಾ ಶರಣರಿಗೆ ಬಿಗ್ ರಿಲೀಫ್ ನೀಡಿದೆ. ಚಿತ್ರದುರ್ಗದ 2ನೇ ಅಡಿಷನಲ್ ಸೆಷನ್ಸ್ ಕೋರ್ಟ್ ನಿರ್ದೋಷಿ ಎಂದು ಆದೇಶ ನೀಡಿದ್ದು, 2022ರ ಆಗಸ್ಟ್ 26ರಂದು ಮುರುಘಾ ಶ್ರೀ ವಿರುದ್ಧ ಮೊದಲ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಪ್ರಸಿದ್ಧ ವೈಚಾರಿಕ ಮಠವೊಂದರ ಶರಣರ ಮೇಲೆ ದಾಖಲಾಗಿದ್ದ ಆರೋಪ ಹಾಗೂ ಪ್ರಕರಣ ದೇಶದ ಗಮನ ಸೆಳೆದಿತ್ತು.

ಮೊದಲ ಪೋಕ್ಸೋ ಪ್ರಕರಣ ಸಂಬಂಧ ಬುಧವಾರ ಮಧ್ಯಾಹ್ನ ತೀರ್ಪು ಹೊರಬಿದ್ದಿದ್ದು ಡಾ.ಶಿವಮೂರ್ತಿ ಮುರುಘಾ ಶರಣರು ನಿರಾಳರಾಗಿದ್ದಾರೆ. ಅವರ ಜೊತೆ ಮತ್ತಿಬ್ಬರು ಆರೋಪಿಗಳಿಗೂ ರಿಲೀಫ್ ಸಿಕ್ಕಿದೆ.
ಮುರುಘಾ ಮಠದಲ್ಲಿ ವ್ಯಾಸಂಗ ಮಾಡುತ್ತಿದ್ದ ಹಾಸ್ಟೆಲ್ಲಿನ ಇಬ್ಬರು ಅಪ್ರಾಪ್ತ ಸಂತ್ರಸ್ತ ವಿದ್ಯಾರ್ಥಿನಿಯರು ಮೈಸೂರಿನ ಒಡನಾಡಿ ಸಂಸ್ಥೆಯ ನೆರವಿನಿಂದ ಮೈಸೂರು ನಗರದ ನಜರಾಬಾದ್ ಪೊಲೀಸ್ ಠಾಣೆಯಲ್ಲಿ 2022ರ ಆಗಸ್ಟ್ 26ರಂದು ಶರಣರ ವಿರುದ್ಧ ದೂರು ನೀಡಿದ್ದರು. ಇದರನ್ವಯ ಮುರುಘಾಶರಣರು, ಲೇಡಿ ವಾರ್ಡನ್ ರಶ್ಮಿ, ಬಸವಾದಿತ್ಯ, ಮ್ಯಾನೇಜರ್ ಪರಮಶಿವಯ್ಯ, ವಕೀಲ ಗಂಗಾಧರಯ್ಯ ವಿರುದ್ಧ ಮೊದಲ ಪೋಕ್ಸೋ ಕೇಸ್ ದಾಖಲಾಗಿತ್ತು.
ಪ್ರಕರಣ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾವಣೆಯಾಗಿತ್ತು. 2022ರ ಸೆಪ್ಟಂಬರ್ 1ರಂದು ಮುರುಘಾಶ್ರೀ, ವಾರ್ಡನ್ ರಶ್ಮಿಯನ್ನ ಪೊಲೀಸರು ಬಂಧಿಸಿದ್ದರು. ಆರೋಪಪಟ್ಟಿ ಸಲ್ಲಿಸುವ ವೇಳೆ ಬಸವಾದಿತ್ಯ, ವಕೀಲ ಗಂಗಾಧರಯ್ಯ ಅವರನ್ನು ಕೈಬಿಡಲಾಗಿತ್ತು.
ತನ್ನಿಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಮಠದ ಅಡುಗೆ ಸಹಾಯಕಿ ನೀಡಿದ್ದ ದೂರಿನ ಅನ್ವಯ ಮುರುಘಾ ಶರಣರ ವಿರುದ್ಧ ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದ್ದು, ಅದರಲ್ಲಿ ಏಳು ಜನ ಆರೋಪಿಗಳನ್ನು ಹೆಸರಿಸಲಾಗಿದೆ. ಇದರಲ್ಲಿ ತೀರ್ಪು ಇನ್ನೂ ಬಾಕಿ ಇದೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅಂಬೇಡ್ಕರ್ ಪ್ರತಿಮೆ ಮುಂದೆ ದಸಂಸ ಹಾಗೂ ವಿದ್ಯಾರ್ಥಿಗಳಿಂದ ಸಂವಿಧಾನ ದಿನಾಚರಣೆ
ಈ ಎರಡೂ ಪ್ರಕರಣಗಳಲ್ಲಿ ವಿಚಾರಣೆ ವೇಳೆ ಮುರುಘಾ ಶರಣರು ಚಿತ್ರದುರ್ಗಕ್ಕೆ ಪ್ರವೇಶಿಸದಂತೆ ಸುಪ್ರೀಂ ಕೋರ್ಟ್ ಷರತ್ತು ವಿಧಿಸಿದ್ದು, ಜಿಲ್ಲೆಯಿಂದ ಹೊರಗಿರುವಂತೆ ಷರತ್ತು ಬದ್ಧ ಜಾಮೀನು ಪಡೆದು ಮರಳಿದ್ದರು. ಇದರ ಜಾಮೀನು ರದ್ದತಿ ಕೋರಿ ಸಂತ್ರಸ್ತೆಯರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಈ ವೇಳೆ ಮುಖ್ಯಸಾಕ್ಷ್ಯ ವಿಚಾರಣೆ ಪೂರ್ಣ ಆಗುವವರೆಗೆ ಮುರುಘಾಶ್ರೀ ಬಂಧನದಲ್ಲಿಡಲು ಕೋರ್ಟ್ ಆದೇಶಿಸಿತ್ತು. ಸುಪ್ರೀಂ ಆದೇಶದನ್ವಯ ಮೇ 27, 2024ರಂದು ನ್ಯಾಯಾಲಯ ಎದುರು ಮುರುಘಾಶ್ರೀ ಶರಣಾಗಿದ್ದರು. ಈ ವೇಳೆ ಅವರಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿತ್ತು. ಸಂತ್ರಸ್ತೆಯರಿಬ್ಬರು ಸೇರಿ 13 ಜನರ ಸಾಕ್ಷ್ಯ ವಿಚಾರಣೆ ಅಂತ್ಯ ಹಿನ್ನೆಲೆ ಅ.07, 2024ರಂದು ಮುರುಘಾಶ್ರೀ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಮುರುಘಾಶರಣರ ಪರವಾಗಿ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದ್ದರು.





