ಚಿತ್ರದುರ್ಗದ ಧಮ್ಮ ಕೇಂದ್ರದಲ್ಲಿ ವಿಮುಕ್ತಿ ವಿದ್ಯಾ ಸಂಸ್ಥೆ, ಶಾಂತಿ ಮತ್ತು ಸೌಹಾರ್ದ ವೇದಿಕೆ ಮತ್ತು ಧಮ್ಮ ಸಾಂಸ್ಕೃತಿಕ ಕೇಂದ್ರದ ವತಿಯಿಂದ ಸಂವಿಧಾನ ಮತ್ತು ಅಲ್ಪಸಂಖ್ಯಾತ ಮಹಿಳೆಯರ ಹಕ್ಕುಗಳು ಕುರಿತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಶಾಂತಿ & ಸೌಹಾರ್ದ ವೇದಿಕೆಯ ಅಧ್ಯಕ್ಷರಾದ ನರೇನಹಳ್ಳಿ ಅರುಣ್ ಕುಮಾರ್, “ಮಂದಿರ, ಮಸೀದಿ, ಚರ್ಚ್ ಗಳು ಸಮಾನತೆಯ ಕೇಂದ್ರಗಳಾಗಬೇಕು. ಆಗ ಮಾತ್ರ ಸಂವಿಧಾನದ ಆಶಯ ಸಾಕಾರಗೊಂಡು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳಿಗೆ ಮಹತ್ವ ಬರುತ್ತದೆ” ಎಂದು ಪ್ರತಿಪಾದಿಸಿದರು.

“ಭಾರತದ ಸಂವಿಧಾನದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರು ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಮಾನವಾದ ಹಕ್ಕು ನೀಡಿದ್ದಾರೆ. ಪ್ರತಿಯೊಬ್ಬರಿಗೂ ಸಮಾನವಾದ ಅವಕಾಶ ನೀಡುವ ಮೂಲಕ ಸಮಾನತೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ಸಂವಿಧಾನದ ಪೀಠಿಕೆಯಲ್ಲಿ ಪ್ರಜಾಪ್ರಭುತ್ವ,ಸಮಾನತೆ, ಸಮಾಜವಾದ, ಸಾಮರಸ್ಯ ಕುರಿತು ಸ್ಪಷ್ಟವಾಗಿ ಹೇಳಲಾಗಿದೆ” ಎಂದು ತಿಳಿಸಿದರು.
“ಸಂವಿಧಾನವು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ,ಕ್ರಿಶ್ಚಿಯನ್, ಬೌದ್ಧ,ಪಾರ್ಸಿಗಳು, ಜೃೆನರು ಹೀಗೆ ಎಲ್ಲಾ ಸಮುದಾಯದ ಮಹಿಳೆಯರು ಮತ್ತು ಮಕ್ಕಳಿಗೂ ಸಮಾನ ಅವಕಾಶ ನೀಡಿದ್ದು. ಡಾ.ಬಿ.ಆರ್ ಅಂಬೇಡ್ಕರ್ ರವರು ಸಂವಿಧಾನದಲ್ಲಿ ಬುದ್ಧ,ಬಸವಣ್ಣನಂತಹವರ ವಿಚಾರಧಾರೆಗಳನ್ನು ಅಳವಡಿಸುವ ಮೂಲಕ ಸಂವಿಧಾನದ ಆಶಯ, ಮೌಲ್ಯಗಳನ್ನು ಹೆಚ್ಚಿಸಿದ್ದಾರೆ. ಇಡೀ ಸಮಾಜ ಶಾಂತಿ, ಸೌಹಾರ್ದ ಮತ್ತು ಸಾಮರಸ್ಯದಿಂದ ಬದುಕುವ ವಾತಾವರಣವನ್ನು ಕಾನೂನು ಮುಖಾಂತರ ನೀಡಿದ್ದಾರೆ” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ ? ದಾವಣಗೆರೆ | ಹೃದಯಾಘಾತಕ್ಕೆ ಯುವಕ ಬಲಿ, ಹೃದಯಕ್ಕೇನಾಗಿದೆ?
“ದೇಶದಲ್ಲಿ ಕೆಲವು ಶಕ್ತಿಗಳು ಸಂವಿಧಾನವನ್ನು ಬದಲಾವಣೆ ಮಾಡುವ ವಿಚಾರ ಪದೇಪದೇ ಮುನ್ನಲೆಗೆ ತರುವ ಮೂಲಕ ಸಮಾಜದ ನೆಮ್ಮದಿಗೆ ಭಂಗ ಉಂಟು ಮಾಡುವ ಪ್ರಯತ್ನವನ್ನು ನಡೆಸುತ್ತಲೇ ಬಂದಿದ್ದಾರೆ. ಇತ್ತೀಚೆಗೆ ಕೆಲವು ವರ್ಷಗಳಲ್ಲಿ ಕೋಮುಭಾವನೆ ಕೆರಳಿಸುವ ಕೆಲಸ ಮತ್ತು ದ್ವೇಷದ ಮಾತುಗಳನ್ನು ಆಡುವ ಮೂಲಕ ಸಮಾಜದ ನೆಮ್ಮದಿ ಹಾಳು ಮಾಡುವ ಪ್ರಯತ್ನ ನಡೆದಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೇಷ್ಮಾ ಖಾನಂ ಮಾತನಾಡಿ “ಮುಸ್ಲಿಂ ಸಮುದಾಯದಲ್ಲಿ ಸಲಾಮ್ ವಾಲೇಕುಂ ಅನ್ನುವ ಪದವನ್ನು ಬಳಸುವ ಮೂಲಕ ಪ್ರತಿಯೊಬ್ಬ ಮನುಷ್ಯನಿಗೂ ಪ್ರತಿಗೌರವ ನೀಡುವ ಸಂಪ್ರದಾಯವಿದ್ದು, ಅದನ್ನು ಖುರಾನ್ ಕೂಡ ಅನುಸರಿಸಲು ಹೇಳಿಕೊಟ್ಟಿದೆ. ಮುಸ್ಲಿಂ ಪುರುಷ ಮಹಿಳೆಯರಿಬ್ಬರೂ ನಮಾಜ್ ಮಾಡುವ ಮೂಲಕ ಧಾರ್ಮಿಕ ಸಮಾನತೆಯನ್ನು ಅನುಸರಿಸಿಕೊಂಡು ಬರಲಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕಳ್ಳರ ತಂಡ ಸಕ್ರಿಯ; ಗಡಿಭಾಗದ ಮನೆ, ಹಳ್ಳಿಗಳು ಎಚ್ಚರಿಕೆ ವಹಿಸಲು ಪೊಲೀಸ್ ಇಲಾಖೆ ಸೂಚನೆ
ಕಾರ್ಯಕ್ರಮದಲ್ಲಿ ಅಲ್ ಎ ಮಸ್ಜಿದ್ ಸಮಿತಿಯ ಡಾ.ರೆಹಮಾನ್, ವಿಮುಕ್ತಿ ವಿದ್ಯಾ ಸಂಸ್ಥೆಯ ಅಧ್ಯಕ್ಷೆ ಅನ್ನಪೂರ್ಣ, ಅಲ್ ಎ.ಮಸೀದಿಯ ಸಿರಾಜುದ್ದೀನ್, ಜುಬೇರ್ ಅನ್ಸಾರಿ, ವಿಮುಕ್ತಿ ವಿದ್ಯಾ ಸಂಸ್ಥೆ ಯ ನಿರ್ದೇಶಕರಾದ ಆರ್.ವಿಶ್ವಸಾಗರ್, ಧಮ್ಮ ಕೇಂದ್ರದ ಅರಣ್ಯ ಸಾಗರ್, ಸಂಯೋಜಕರಾದ ನಾಗರತ್ನಮ್ಮ , ಬೀಬಿಜಾನ್, ನಾಗಪ್ಪ ಮುಂತಾದವರು ಹಾಜರಿದ್ದರು.





