ಚಿತ್ರದುರ್ಗದ ಮುರುಘಾ ಮಠದ ಅತ್ಯಾಚಾರ ಆರೋಪಿ ಶಿವಮೂರ್ತಿ ಮುರುಘಾ ಅವರ ಬಿಡುಗಡೆ ಇಂದು (ಬುಧವಾರ) ಸಾಧ್ಯವಿಲ್ಲ ಎಂದು ಸರ್ಕಾರಿ ವಕೀಲ ಜಗದೀಶ್ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮುರುಘಾ ಅವರ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. ಒಂದು ಪ್ರಕರಣದಲ್ಲಿ ಮಾತ್ರ ಜಾಮೀನು ಸಿಕ್ಕಿದೆ. ಎರಡನೇ ಫೋಕ್ಸೋ ಪ್ರಕರಣದಲ್ಲಿ ವಾರೆಂಟ್ ಇದೆ. ಆ ಪ್ರಕರಣದ ಜಾಮೀನು ಮಂಜೂರಾಗಿಲ್ಲ” ಎಂದು ತಿಳಿಸಿದ್ದಾರೆ.
“ಗುರುವಾರದವರೆಗೆ ಮುರುಘಾ ಅವರು ಬಾಡಿ ವಾರೆಂಟ್ ನಲ್ಲಿರುತ್ತಾರೆ. ಗುರುವಾರ ಎರಡನೇ ಪ್ರಕರಣದ ವಿಚಾರಣೆ ನಡೆಯಲಿದೆ. ಆ ಪ್ರಕರಣದ ವಿಚಾರಣೆ ನಡೆಸಿದ ಬಳಿಕ ಕೋರ್ಟ್ ತನ್ನ ಆದೇಶ ನೀಡಲಿದೆ” ಎಂದು ಅವರು ವಿವರಿಸಿದ್ದಾರೆ.
ಮೊದಲ ಪೋಕ್ಸೋ ಪ್ರಕರಣದಲ್ಲಿ ಮುರುಘಾ ಅವರಿಗೆ ಏಳು ಷರತ್ತುಗಳನ್ನು ವಿಧಿಸಿ ಹೈಕೋರ್ಟ್ ಜಾಮೀನು ನೀಡಿದೆ. ಹೀಗಾಗಿ, ಬುಧವಾರ ಮುರುಘಾ ಅವರು ಜೈಲಿನಿಂದ ಬಿಡುಗಡೆಯಾಗುತ್ತಾರೆ ಎಂದು ಮುರುಘಾ ಅವರ ಪರ ವಕೀಲರು ಹೇಳಿದ್ದರು. ಆದರೆ, ಎರಡನೇ ಪ್ರಕರಣದಲ್ಲಿ ಜಾಮೀನು ನೀಡಲಾಗಿಲ್ಲ. ಇದರಿಂದಾಗಿ, ಅವರ ಬಿಡುಗಡೆ ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ.
ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ 2ನೇ ಪೋಕ್ಸೋ ಪ್ರಕರಣದ ವಿಚಾರಣೆ ನಡೆಸಲಿದೆ. ಆ ಪ್ರಕರಣದಲ್ಲಿ ನೀಡಲಾಗಿರುವ ಬಾಡಿ ವಾರೆಂಟ್‌ಅನ್ನು ನ್ಯಾಯಾಂಗ ಬಂಧನವಾಗಿ ವಿಸ್ತರಣೆ ಮಾಡುವಂತೆ ಸರ್ಕಾರಿ ವಕೀಲ ಜಗದೀಶ್ ವಾದ ಮಂಡಿಸಲಿದ್ದಾರೆ ಎಂದು ತಿಳಿದುಬಂದಿದೆ.




