“ಬಗರ್ ಹುಕುಂ ಸಮಸ್ಯೆ, ಬೆಳೆಗೆ ವೈಜ್ಞಾನಿಕ ಬೆಲೆ, ಮಳೆ ಹವಾಮಾನ ಆಧಾರಿತ ಬೆಳೆವಿಮೆ ಪರಿಹಾರ ಕೊಡುವುದು, ಸ್ವಾಮಿನಾಥನ್ ವರದಿ ಪ್ರಕಾರ ಬೆಳೆಗಳಿಗೆ ಬೆಂಬಲ ಬೆಲೆ ಸಿ2+50% ಕೊಡುವುದು, ವಿದ್ಯುಚ್ಛಕ್ತಿ ಅಕ್ರಮ-ಸಕ್ರಮದ ಹಣ ಕಟ್ಟಿದ್ದು ಅಭಿವೃದ್ಧಿ ಪಡಿಸುವುದು ಸೇರಿದಂತೆ ಇನ್ನೂ ಅನೇಕ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸಮಸ್ಯೆಗಳನ್ನು ಸರ್ಕಾರ ಬಗೆಹರಿಸಬೇಕಿದೆ. ಸರ್ಕಾರದ ಗಮನಕ್ಕೆ ತಂದು ಪರಿಹರಿಸುವಂತೆ ರೈತ ಸಂಘ ಒತ್ತಾಯ ಮಾಡಲಿದೆ” ಎಂದು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾ. ಬಿದುರ್ಗ, ಕಲ್ಲವ್ವನಾಗತಿಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷರಾದ ಹೆಚ್.ಆರ್ ಬಸವರಾಜಪ್ಪ ಒತ್ತಾಯಿಸಿದರು.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕು ಕಲ್ಲವ್ವನಾಗತಿಹಳ್ಳಿ, ಬಿ.ದುರ್ಗ ಗ್ರಾಮಗಳ ರೈತ ಸಂಘದ ಗ್ರಾಮ ಘಟಕಗಳ ಹಾಗೂ ನಾಮಫಲಕಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷರಾದ ಹೆಚ್.ಆರ್ ಬಸವರಾಜಪ್ಪ, “ಸ್ಥಳೀಯ ನೀರಾವರಿ ಸಮಸ್ಯೆಗೆ ಸಿರಿಗೆರೆ ಸ್ವಾಮಿಗಳು ಲಿಫ್ಟ್ ಇರಿಗೇಷನ್ ಒತ್ತಾಯಿಸಿ ಮಾಡಿಸಿದಂತ ಸಾಸ್ವೆಹಳ್ಳಿ ಏತ ನೀರಾವರಿಯ ಪೈಪ್ ಲೈನ್ ಆಗಿದ್ದು ನೀರು ಬರುತ್ತಿಲ್ಲ. ಅತಿವೃಷ್ಟಿ ಬರಗಾಲದ ನಷ್ಟಕ್ಕೆ ಹಿಂದಿನ ಕಾಲದ ಲೆಕ್ಕದ ಪರಿಹಾರ ಕೊಡುತ್ತಿದ್ದು, ರೈತರ ಖರ್ಚಿನ ಬಿಡಿಗಾಸು ಸಿಗುತ್ತಿಲ್ಲ. ಕನಿಷ್ಟ ಎಕರೆಗೆ 25 ಸಾವಿರ ಪರಿಹಾರ ಕೊಡಬೇಕು” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ತೀವ್ರ ಸ್ವರೂಪದ ಬರದ ಸಂದರ್ಭ 1963ರಲ್ಲಿ ಬೇರೆ ದೇಶದಿಂದ ಆಹಾರ ತಂದು ದೇಶದ ಜನರನ್ನು ಬದುಕಿಸುತ್ತಿದ್ದರು. ಆದರೆ ರೈತರು ಬೆಳೆ ಬೆಳೆದು ಆಹಾರದಲ್ಲಿ ದೇಶವನ್ನು ಸ್ವಾವಲಂಭಿಯನ್ನಾಗಿ ಮಾಡಿದ್ದಾರೆ. ಆದರೆ ರೈತ ಬೆಲೆ ಮೋಸದಿಂದ ಸಾಲಗಾರನಾಗಿದ್ದಾನೆ. ರೈತರು ಸುಮಾರು 24ಲಕ್ಷಕ್ಕೂ ಹೆಚ್ಚು ಬಗರ್ ಹುಕುಂ ಫಾರಂ ನಂ. 50,53,57 ರಡಿ ನಮೂನೆ ಅರ್ಜಿಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಅದರಲ್ಲಿ 18ಲಕ್ಷಕ್ಕೂ ಹೆಚ್ಚು ಅರ್ಜಿಗಳು ತಿರಸ್ಕಾರ ಮಾಡಿದ್ದಾರೆ” ಎಂದು ಆರೋಪಿಸಿದರು.

“ಅಕ್ರಮ-ಸಕ್ರಮದ ಸಮಸ್ಯೆ ಪರಿಹರಿಸುವುದರ ಜೊತೆಗೆ ಗಣಿಗಾರಿಕೆ ಕಂಪನಿಗಳು ಅಭಿವೃದ್ಧಿ ಮಾಡುವ ವಿಚಾರದಲ್ಲಿ ಕಲ್ಲವ್ವನಾಗತಿಹಳ್ಳಿ ಗ್ರಾಮವನ್ನು ಸೇರಿಸುವುದು ಸೇರಿದಂತೆ ಇನ್ನೂ ಅನೇಕ ಸ್ಥಳೀಯ ಸಮಸ್ಯೆಗಳ ಬಗ್ಗೆ ಅಕ್ಟೋಬರ್ 10ರಂದು ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿದೆ. ಎಲ್ಲ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು” ಎಂದು ಕರೆ ನೀಡಿದರು.

ಈ ಸುದ್ದಿ ಓದಿದ್ದೀರಾ? ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆತ: ಕಾನೂನಿನ ಶಿಷ್ಟತೆ ಕಾಪಾಡುವವರಿಂದಲೇ ಸಂವಿಧಾನದ ಕಗ್ಗೊಲೆ

ಉದ್ಘಾಟನೆ ಕಾರ್ಯಕ್ರಮದಲ್ಲಿ ಒಂಟಿಕಂಬದ ಮುರುಘಾಮಠದ ಶ್ರೀ ತಿಪ್ಪೇರುದ್ರಸ್ವಾಮಿಗಳು,
ರಾಜ್ಯ ಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ, ತರೀಕೆರೆ ಮಹೇಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಚಿಕ್ಕಬ್ಬಿಗೆರೆ ನಾಗರಾಜ್, ಚಿತ್ರದುರ್ಗ ಜಿಲ್ಲಾಧ್ಯಕ್ಷ ಡಿ.ಎಸ್ ಮಲ್ಲಿಕಾರ್ಜುನ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಜಲಿಂಗಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ಬಯಲಪ್ಪ, ಜಿಲ್ಲಾ ಕಾರ್ಯದರ್ಶಿ ರಾಮರೆಡ್ಡಿ, ದಾವಣಗೆರೆ ಜಿಲ್ಲಾಧ್ಯಕ್ಷ ಮರುಳಸಿದ್ದಯ್ಯ, ಹೊಳಲ್ಕೆರೆ ತಾಲೂಕು ಅಧ್ಯಕ್ಷ ಎಸ್.ಎಂ ಶಿವಕುಮಾರ್ ಹಾಗೂ ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮಘಟಕದ ಎಲ್ಲಾ ಪದಾಧಿಕಾರಿಗಳು, ರೈತರು ಹಾಜರಿದ್ದರು.





