ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಕೇಂದ್ರೀಯ ವಿದ್ಯಾಲಯ ಹಾಗೂ ಕಾಲೇಜಿನ ಆವರಣದಲ್ಲಿ ಮಹಿಳಾ ಕಾಲೇಜು ಆರಂಭಿಸುವುದನ್ನು ವಿರೋಧಿಸಿ ಇಂದು ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ಹಾಗೂ ವಿದ್ಯಾರ್ಥಿಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಚಿತ್ರದುರ್ಗ ಜಿಲ್ಲೆಯ ಪ್ರತಿಷ್ಠಿತ ಸರ್ಕಾರಿ ವಿಜ್ಞಾನ ಕಾಲೇಜು ಉಳಿಸಲು ಆಗ್ರಹಿಸಿ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಕಾಲೇಜಿನಿಂದ ಮೂಲಕ ಜಿಲ್ಲಾಸ್ಪತ್ರೆ, ಮದಕರಿ ವೃತ್ತದ ಮೂಲಕ ಡಿಸಿ ವೃತ್ತಕ್ಕೆ ಬಂದು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಮಹಾಂತೇಶ್ ಬಿಳೂರು ಮಾತನಾಡಿ, “ಚಿತ್ರದುರ್ಗದ ಪ್ರತಿಷ್ಠಿತ ಸರ್ಕಾರಿ ವಿಜ್ಞಾನ ಕಾಲೇಜಿಗೆ 7 ದಶಕಗಳು ಕಳೆದಿವೆ. 1,700ಕ್ಕೂ ಅಧಿಕ ವಿದ್ಯಾರ್ಥಿಗಳು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸಮರ್ಪಕ ಕೊಠಡಿ, ಸಿಬ್ಬಂದಿ ಹಾಗೂ ಪ್ರಯೋಗಾಲಯಗಳ ಕೊರತೆಯಿಂದಾಗಿ ಈಗಾಗಲೇ ಎರಡು ಪಾಳಿಯಲ್ಲಿ ಕಾಲೇಜನ್ನು ನಡೆಸಲಾಗುತ್ತಿದೆ. ದ್ವಿತೀಯ ಹಾಗೂ ಅಂತಿಮ ವರ್ಷದ ತರಗತಿಗಳನ್ನು ಬೆಳಗ್ಗೆ ನಡೆಸಲಾಗುತ್ತಿದೆ. ಪ್ರಥಮ ವರ್ಷದ ತರಗತಿಗಳನ್ನು ಮಧ್ಯಾಹ್ನ ನಡೆಸಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಇಂತಹ ಪರಿಸ್ಥಿತಿಯಲ್ಲಿ ವಿಜ್ಞಾನ ಕಾಲೇಜಿನ ನೆಲಮಹಡಿಯ ಕೊಠಡಿಗಳನ್ನು ಕೇಂದ್ರಿಯ ವಿದ್ಯಾಲಯಕ್ಕೆ ನೀಡಲಾಗಿದೆ. ಕಾಲೇಜಿನ ವಿದ್ಯಾರ್ಥಿಗಳಿಗೆ ಕೊಠಡಿಯಷ್ಟೇ ಅಲ್ಲದೇ ನೆಲಮಹಡಿಯಲ್ಲಿನ ಶೌಚಾಲಯ ಕೂಡ ಬಳಕೆಗೆ ದೊರೆಯದಿರುವುದರಿಂತ ವಿದ್ಯಾರ್ಥಿನಿಯರಿಗೆ ತೊಂದರೆ ಉಂಟಾಗುತ್ತದೆ. ಶಾಲಾ ಮಕ್ಕಳ ಪ್ರವೇಶದಿಂದಾಗಿ ಕಾಲೇಜಿನ ಮುಕ್ತ ವಾತಾವರಣಕ್ಕೆ ತೊಂದರೆಯುಂಟಾಗುತ್ತದೆ. ಶಾಲಾ ಮಕ್ಕಳ ಬೆಳವಣಿಗೆ ದೃಷ್ಟಿಯಿಂದ ಕೂಡ ಕಾಲೇಜಿನ ವಾತಾವರಣ ಉತ್ತಮವಾದುದಲ್ಲ” ಎಂದು ಆಕ್ಷೇಪ ವ್ಯಕ್ತಪಡಿಸಿದರು.
“ಸರ್ಕಾರಿ ಮಹಿಳಾ ಪದವಿ ಕಾಲೇಜಿಗೆ ಕೂಡ ವಿಜ್ಞಾನ ಕಾಲೇಜಿನ ಆವರಣದಲ್ಲಿಯೇ ಸ್ಥಳ ಮಂಜೂರು ಮಾಡಿರುವುದಾಗಿ ತಿಳಿದು ಬಂದಿದೆ. ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ನಡೆಸುತ್ತಿರುವ ವಿಜ್ಞಾನ ಕಾಲೇಜಿಗೆ ವಿಶಾಲ ಆವರಣವು ಅತ್ಯವಶ್ಯಕ. ಮೈದಾನವು ಕಾಲೇಜಿನ ವಿದ್ಯಾರ್ಥಿಗಳ ದೈಹಿಕ ಬೆಳವಣಿಗೆಗೆ ಬೇಕು. ಜೀವಶಾಸ್ತ್ರದ ಪ್ರಯೋಗಗಳಿಗೆ ಮರ ಸೇರಿದಂತೆ ಅನೇಕ ಸಸ್ಯಗಳ ಅವಶ್ಯಕತೆಯಿದೆ. ಮಹಿಳಾ ಕಾಲೇಜಿಗೆ ಸ್ವಂತ ಕಟ್ಟಡವಾಗಬೇಕೆಂಬುದು ಜಿಲ್ಲೆಯ ವಿದ್ಯಾರ್ಥಿಗಳ ಬಹುದಿನದ ಬೇಡಿಕೆ. ಆದರೆ ವಿಜ್ಞಾನ ಕಾಲೇಜಿನ ವಾತಾವರಣಕ್ಕೆ ಧಕ್ಕೆಯುಂಟು ಮಾಡಿ ಹೊಸ ಕಟ್ಟಡ ಒದಗಿಸುವುದು ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡಿದಂತಾಗುವುದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಕೇಂದ್ರೀಯ ವಿದ್ಯಾಲಯ ಹಾಗೂ ಸರ್ಕಾರಿ ಮಹಿಳಾ ಪದವಿ ಕಾಲೇಜಿಗೆ ಬೇರೆ ಕಡೆ ಸ್ಥಳ ಒದಗಿಸಿ ತುರ್ತಾಗಿ ಸ್ವಂತ ಹಾಗೂ ಸುಸಜ್ಜಿತ ಕಟ್ಟಡ ಒದಗಿಸಬೇಕು ಮತ್ತು ಸರ್ಕಾರಿ ಕಾಲೇಜಿಗೆ ಕಾಂಪೌಂಡ್ ನಿರ್ಮಿಸಿಕೊಡಬೇಕೆಂದು ಎಐಡಿಎಸ್ಓ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಆಗ್ರಹಿಸುತ್ತೇವೆ” ಎಂದು ಹೇಳಿದರು.

“ಶೀಘ್ರವಾಗಿ ಸ್ಪಂದಿಸಿ ಸಮಸ್ಯೆಯನ್ನು ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟಕ್ಕೆ ಮುಂದಾಗುತ್ತೇವೆ” ಎಂದು ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಮಹಾಂತೇಶ್ ಬಿಳೂರು ಅವರು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಶ್ರೀಕುಮಾರ್ ಅವರು ಮಾತನಾಡಿ “ವಿಜ್ಞಾನ ಕಾಲೇಜಿನಲ್ಲಿ ಕೇಂದ್ರಿಯ ವಿದ್ಯಾಲಯ ಹಾಗೂ ಮಹಿಳಾ ಕಾಲೇಜಿಗೆ ನೀಡಿರುವ ವಿದ್ಯಾರ್ಥಿಗಳ ಆಕ್ಷೇಪಣೆಯನ್ನು ಸೂಕ್ತ ಕ್ರಮಕ್ಕಾಗಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಅಧಿಕಾರಿಗಳು ರಜಾ ದಿನಗಳಲ್ಲಿ ಕೆಲಸದ ಕೇಂದ್ರ ಸ್ಥಾನದಲ್ಲಿರಲು ಜಿಲ್ಲಾಧಿಕಾರಿ ವೆಂಕಟೇಶ್ ಸೂಚನೆ
ಪ್ರತಿಭಟನೆಯಲ್ಲಿ ಎಐಡಿಎಸ್ಓ ಜಿಲ್ಲಾ ಸಂಚಾಲಕರು ಕೆ. ಈರಣ್ಣ, ಕಾಲೇಜು ಸಮಿತಿ ಸದಸ್ಯರಾದ ಭಾವನಾ, ದಿವ್ಯ , ಸ್ವಪ್ನಾ, ದರ್ಶನ್, ದೇವೆಗೌಡ, ಮನು, ನೀತಿಶ್, ರಂಗಸ್ವಾಮಿ ಸೇರಿದಂತೆ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.




