ಚಿತ್ರದುರ್ಗದ ಮಹಾತ್ಮ ಜ್ಯೋತಿಬಾ ಪುಲೆ ಸ್ಪರ್ಧಾತ್ಮಕ ಕೇಂದ್ರದಲ್ಲಿ ಜಂಬೂದ್ವೀಪ ಕರ್ನಾಟಕ ಹಾಗೂ ಚಿತ್ರದುರ್ಗದ ಅಂಬೇಡ್ಕರ್ ವಿಚಾರ ವೇದಿಕೆ ಜಂಟಿಯಾಗಿ ಸಾವಿತ್ರಿಬಾ ಪುಲೆ ಜನ್ಮದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಚಿತ್ರದುರ್ಗದ ಬುದ್ಧನಗರ ಮಾರ್ಗದಲ್ಲಿನ ಸಾವಿತ್ರಿ ಬಾಪುಲೆ ವೃತ್ತದ ನಾಮಫಲಕಕ್ಕೆ ಅಂಬೇಡ್ಕರ್ ವಿಚಾರ ವೇದಿಕೆಯ ಸದಸ್ಯರು ಹೂವಿನ ಹಾರ ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ವೇದಾಂತ ಏಳಂಜಿ ಮಾತನಾಡಿ “ಸಾವಿತ್ರಿಬಾ ಪುಲೆ ಮತ್ತು ಜ್ಯೋತಿಬಾ ಪುಲೆ ದಂಪತಿಗಳನ್ನು ಒಬ್ಬರು ಮತ್ತೊಬ್ಬರನ್ನು ಹೊರತು ಪಡಿಸಿ ನೋಡಲು ಸಾಧ್ಯವಿಲ್ಲ. ದೇಶದ ಎಲ್ಲಾ ಸಮುದಾಯಗಳು ಸಾವಿತ್ರಿ ಬಾಪುಲೆ ಅವರ ಜೀವನವನ್ನು ಅರಿಯಬೇಕು. ಕುಟುಂಬ ಮೇಲ್ವರ್ಗದ ವಿರೋಧದ ನಡುವೆ ಸ್ವತಃ ಗಂಡನಿಂದ ಅಕ್ಷರ ಕಲೆತು ದೇಶದ ಪ್ರಥಮ ಶಿಕ್ಷಕಿಯಾದರು. ಅಸ್ಪೃಶ್ಯರ ಹಾಗೂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಶಾಲೆಗಳನ್ನು ತೆರೆದು ಸಾವಿರಾರು ಜನರಿಗೆ ಅಕ್ಷರ ಕಲಿಸುವ ಜೊತೆಗೆ ಸ್ವಾಭಿಮಾನದ ಘನತೆಯ ಬದುಕನ್ನು ಕಲಿಸಿಕೊಟ್ಟವರು ಸಾವಿತ್ರಿ ಭಾಪುಲೆ” ಎಂದು ಸ್ಮರಿಸಿದರು.

“ಬಡ ವಿದ್ಯಾರ್ಥಿಗಳಿಗೆ ಹಾಸ್ಟೇಲ್ ಸೌಲಭ್ಯ, ವಿದ್ಯಾರ್ಥಿ ಭತ್ಯೆ, ಬಟ್ಟೆಗಳನ್ನು ನೀಡಿದರು. ಮನೆಮನೆಗಳಿಗೆ ತೆರಳಿ ತಂದೆ-ತಾಯಿಯರಿಗೆ ಶಿಕ್ಷಣದ ಮಹತ್ವ ತಿಳಿಸಿಕೊಟ್ಟರು. ಒಳಜಾತಿ, ವೈವಿವಾಹಿಕ ಕಟ್ಟುಪಾಡುಗಳು ಜಾತಿಯತೆಗೆ ಮೂಲ ಕಾರಣವೆಂದು ಅರಿತು ಅಂತರ್ಜಾತಿ ವಿವಾಹಗಳನ್ನು ಮಾಡಿದರು. ಪುರೋಹಿತರಿಲ್ಲದ, ಮಂತ್ರಘೋಷಗಳಿಲ್ಲದ ಕಡಿಮೆ ಖರ್ಚಿನ ಸರಳ ವಿವಾಹಗಳನ್ನು ಮಾಡಿಸಿದರು. ಜ್ಯೋತಿಬಾ ಪುಲೆ ಸ್ವತಃ ಮಂಗಳಷ್ಟಾಕಗಳನ್ನು ಬರೆದು ಓದಿಸಿದರು. ಗಂಡು-ಹೆಣ್ಣಿನ ಸಮಾನತೆಯನ್ನು ಸಾರಿದರು” ಎಂದು ತಿಳಿಸಿದರು.
“ಮಹಿಳಾ ಸಂಘಟನೆಗಳನ್ನು ಸ್ಥಾಪಿಸಿ ಹಲವು ಮಹಿಳೆಯರಿಗೆ ಪ್ರೇರಣೆಯಾದರು. ಪುಲೆ ದಂಪತಿಗಳ ಸತ್ಯಶೋಧಕ ಸಮಾಜದಿಂದ ಮೌಢ್ಯ ನಿರ್ಮೂಲನೆ, ವಿಧವಾ ಪುನರ್ ವಿವಾಹ ಮಾಡಿದರು. ಕ್ಷಾಮ ಬರಗಾಲದ ಪರಿಸ್ಥಿತಿಯಲ್ಲಿಯೂ ದೀನದಲಿತರ ಪರವಾಗಿದ್ದು ಜೀವತೆತ್ತರು” ಎಂದು ಹೇಳಿದರು.
ಶಿಕ್ಷಕ ಪ್ರದೀಪ್ ಮಾತನಾಡಿ “ಶಾಲೆಗಳಲ್ಲಿ ಸರಸ್ವತಿ ಪೂಜಿಸುತ್ತೇವೆ. ಸರಸ್ವತಿ ಪುಸ್ತಕ ಬರೆದವರು ಅಲ್ಲ ಶಾಲೆಗಳನ್ನು ಕಟ್ಟಿಸಿದವರು ಅಲ್ಲ. ನಿಜವಾಗಿ ಶಾಲೆ ಕಟ್ಟಿಸಿ ಪುಸ್ತಕ ಕೊಟ್ಟವರು ಫುಲೆ ದಂಪತಿಗಳು. ಮೇಲ್ವರ್ಗಗಳ ಮೋಸಕ್ಕೆ ಸಿಲುಕಿ ಪಶುಗಳಂತೆ ದುಡಿವ ಶೂದ್ರಾತಿಶೂದ್ರರಿಗೆ ಯೋಚಿಸಲು ಕಲಿಸಿದರು. ಸ್ವತಃ ಅಂಬೇಡ್ಕರರಿಗೆ ಸ್ಫೂರ್ತಿಯಾದರು” ಎಂದು ಅಭಿಪ್ರಾಯಪಟ್ಟರು.

ಸಾವಿತ್ರಮ್ಮ ಸಾವಿತ್ರಮ್ಮ ಸಾಟಿಯುಂಟೆ ಅಕ್ಷರದಮ್ಮ ಎಂಬ ಸ್ವರಚಿತ ಪದ್ಯವನ್ನು ಹಾಡಿ ಮಾತನಾಡಿದ ಕವಿ ಶಿವಶಂಕರ ಸೀಗೆಹಟ್ಟಿ “ಜ್ಯೋತಿಬಾ ಪುಲೆ ಅವರನ್ನು ಇತಿಹಾಸ ಸದಾ ಸ್ಮರಿಸಬೇಕು. ಅವರನ್ನು ಕೊಲ್ಲಲು ೫೦ ರೂ.ಗಳನ್ನು ನೀಡಿದ್ದ ವ್ಯಕ್ತಿ ಅಸ್ಪೃಶ್ಯರಿಗಾಗಿ ಜೀವನವನ್ನು ಮೂಡುಪಾಗಿಟ್ಟಿದ್ದನ್ನು ಕೇಳಿ ಪರಿವರ್ತನೆಯಾದನು. ತನ್ನನ್ನು ಕೊಲ್ಲಲು ಬಂದವರನ್ನು ಮನಃ ಪರಿವರ್ತನೆ ಮಾಡಿದ್ದು ಚರಿತ್ರೆಯಲ್ಲಿ ಬುದ್ಧ ಗುರು. ಸಾವಿತ್ರಿ ಭಾಪುಲೆ ದೇಶದ ಪ್ರಥಮ ಶಿಕ್ಷಕಿಯಾಗಿ ಅಂದಿನ ಬ್ರಾಹ್ಮಣರ ವಿರೋಧದ ನಡುವೆಯೂ ಅಸ್ಪೃಶ್ಯರು, ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಟ್ಟು ದಲಿತ ಸಮಾಜಕ್ಕೆ ತಾಯಿಯಂತೆ ಸಲುಹಿದರು” ಎಂದರು.
ಅಧ್ಯಕ್ಷತೆ ವಹಿಸಿದ್ದ ಜಂಬೂದ್ವೀಪ ರಾಮಣ್ಣ “ಅನಕ್ಷರಸ್ಥ ಸಾವಿತ್ರಿ ಬಾಪುಲೆ, ಅಕ್ಷರಸ್ಥೆಯಾಗಿ ದೇಶದ ಪ್ರಥಮ ಶಿಕ್ಷಕಿಯಾಗಿ ದೇಶಕ್ಕೆ ಮಾದರಿಯಾದರು. ಸದಾ ಪುಸ್ತಕಗಳನ್ನು ಓದುವಂತೆ. ಕಷ್ಟಕಾಲದಲ್ಲೂ ಕೈಬಿಡದೆ ಓದಿದರೆ ಉತ್ತಮ ಜೀವನ ಕಟ್ಟಿಕೊಳ್ಳಬಹುದು” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಸಾಮಾಜಿಕ ಪರಿವರ್ತನಾ ಚಳುವಳಿಯ ಮಹಾಚೇತನ ಮಾತೆ ಸಾವಿತ್ರಿ ಭಾಪುಲೆ ಜನ್ಮದಿನಾಚರಣೆ
ಕಾರ್ಯಕ್ರಮದಲ್ಲಿ ಸಾವಿತ್ರಿಬಾ ಪುಲೆ ಸರ್ಕಲ್ ಸ್ಥಾಪಕರಾದ ಚಕ್ರವರ್ತಿ, ಶ್ರೀನಿವಾಸರಾಜು, ವಿಶ್ವಾನಂದ(ವಿಕೆವಿ), ಶಿಕ್ಷಕ ಸಿದ್ದೇಶ್.ಕೆ. ಪ್ರಾಧ್ಯಾಪಕರಾದ ಮಂಜುನಾಥ ಆರ್, ಕುಮಾರ್ ಹೆಚ್, ಶಿಕ್ಷಕ ಯಾದಲಗಟ್ಟೆ ಪ್ರಕಾಶ್, ವಾರ್ಡನ್ ರುದ್ರಮುನಿ, ಸಮಯ ಏಳಂಜಿ ಮುಂತಾದವರು ಪಾಲ್ಗೊಂಡಿದ್ದರು.





