ಚಿತ್ರದುರ್ಗ ತಾಲೂಕಿನ ತುರುವನೂರು ಹೋಬಳಿ ಬೆಳಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಯ್ಕಲ್ ಗ್ರಾಮದಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದುಕಾಣುತ್ತಿದೆ. ನಿರ್ವಹಣೆ ಇಲ್ಲದೆ ಚರಂಡಿಗಳು ಮುಚ್ಚಿಹೋಗಿವೆ. ಜೊತೆಗೆ ಪ್ರಭಾವಿಗಳು ಬೇಕೆಂದೇ ಕುಡಿಯುವ ನೀರಿನ ಪೈಪ್‌ಲೈನ್, ಚರಂಡಿಗಳನ್ನು ನಾಶಪಡಿಸುತ್ತಿರುವ ಗಂಭೀರ ಆರೋಪಗಳು ಕೇಳಿಬಂದಿವೆ. ಪಂಚಾಯಿತಿ ಅಧಿಕಾರಿಗಳು ಅನುದಾನದ ಕೊರತೆಯ ನೆಪವೊಡ್ಡುತ್ತಿದ್ದು, ಬೇಸತ್ತ ಗ್ರಾಮಸ್ಥರು ಚಳ್ಳಕೆರೆ ಶಾಸಕರ ಮೊರೆ ಹೋಗಿದ್ದಾರೆ.
ಹಾಯ್ಕಲ್ ಗ್ರಾಮದ ರಂಗವನ್ನಳ್ಳಿ ಹನುಮಂತಪ್ಪನವರ ಮನೆಯಿಂದ ಸಣ್ಣಬೋರಯ್ಯನವರ ಮನೆವರೆಗೆ ಇರುವ ಚರಂಡಿ ಸಂಪೂರ್ಣವಾಗಿ ಮುಚ್ಚಿಹೋಗಿದೆ. ಹೊಸದಾಗಿ ಚರಂಡಿ ಹಾಗೂ ಡಕ್ಕು ನಿರ್ಮಾಣ ಮಾಡುವಂತೆ ಗ್ರಾಮಸ್ಥರಾದ ಸಿ.ಪಿ. ತಿಪ್ಪೇಸ್ವಾಮಿ ಬೆಳಘಟ್ಟ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದರು.

ಪಂಚಾಯಿತಿ ಅಧಿಕಾರಿಗಳು ‘ಅನುದಾನ ಇಲ್ಲ’ ಎಂಬ ಉತ್ತರ ನೀಡಿ ಕೈತೊಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ತಿಪ್ಪೇಸ್ವಾಮಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕೆ.ಎಸ್.ಎಸ್.ಐ.ಡಿ.ಸಿ ಅಧ್ಯಕ್ಷರಿಗೆ ದೂರು ನೀಡಿದ್ದು, ಜಿಪಿಎಸ್ ಆಧಾರಿತ ಫೋಟೋಗಳನ್ನು ಲಗತ್ತಿಸಿ ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡುವಂತೆ ತುರ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇದೇ ಗ್ರಾಮದ ಖಾತೆ ಸಂಖ್ಯೆ: 150/208ರ ಜಾಗದಲ್ಲಿ (ಚಿನ್ನಮ್ಮ ಕೋಂ ಚಿನ್ನಪ್ಪಯ್ಯ ಅವರಿಗೆ ಸೇರಿದ ಜಾಗ) ಮನೆ ನಿರ್ಮಾಣ ಮಾಡಲು ಮುಂದಾದಾಗ, ಪ್ರಭಾವಿಗಳು ಅಡ್ಡಿಪಡಿಸಿರುವ ಘಟನೆಯೂ ಬೆಳಕಿಗೆ ಬಂದಿದೆ. ಹಳೆಯ ಶಿಥಿಲಗೊಂಡ ಮನೆಯನ್ನು ತೆರವುಗೊಳಿಸಿದ ನಂತರ, ಅಲ್ಲಿದ್ದ ಕುಡಿಯುವ ನೀರಿನ ಪೈಪ್‌ಲೈನ್ ಮತ್ತು ಚರಂಡಿಯನ್ನು ಪ್ರಭಾವಿಗಳು ಉದ್ದೇಶಪೂರ್ವಕವಾಗಿ ಒಡೆದುಹಾಕಿ ಸಂಪೂರ್ಣವಾಗಿ ಮುಚ್ಚಿಹಾಕಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ | 2027 ಕ್ಕೆ ದಾವಣಗೆರೆ-ಚಿತ್ರದುರ್ಗ ನೇರ ರೈಲ್ವೇ ಮಾರ್ಗ ಪೂರ್ಣ : ಕೇಂದ್ರ ಸಚಿವ ವಿ.ಸೋಮಣ್ಣ
ಈ ಅನ್ಯಾಯದ ವಿರುದ್ಧ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ದೂರು ನೀಡಲಾಗಿತ್ತು. ಈ ಬಗ್ಗೆ ಎಚ್ಚೆತ್ತುಕೊಂಡಿರುವ ಕಲ್ಯಾಣಾಧಿಕಾರಿಗಳು, ಮಾರ್ಚ್ 18ರಂದು ಬೆಳಿಗ್ಗೆ 11:00 ಗಂಟೆಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಜೊತೆಗೂಡಿ ಜಂಟಿ ಸ್ಥಳ ಪರಿಶೀಲನೆ ನಡೆಸುವುದಾಗಿ ಅಧಿಕೃತ ನೋಟಿಸ್ ಜಾರಿ ಮಾಡಿದ್ದಾರೆ.
ದೂರುದಾರರಾದ ಸಿ.ಪಿ. ತಿಪ್ಪೇಸ್ವಾಮಿ ಅವರಿಗೂ ಸ್ಥಳದಲ್ಲಿ ಹಾಜರಿರುವಂತೆ ಸೂಚನೆ ನೀಡಲಾಗಿದೆ. ಒಟ್ಟಾರೆಯಾಗಿ ಹಾಯ್ಕಲ್ ಗ್ರಾಮದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಪಂಚಾಯಿತಿ ಹಿಂದೇಟು ಹಾಕುತ್ತಿರುವುದು, ಜೊತೆಗೆ ಪ್ರಭಾವಿಗಳ ದಬ್ಬಾಳಿಕೆ ಮಿತಿಮೀರುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಜನಪ್ರತಿನಿಧಿಗಳು ಈ ಕೂಡಲೇ ಮಧ್ಯಪ್ರವೇಶಿಸಿ, ಗ್ರಾಮಸ್ಥರಿಗೆ ನ್ಯಾಯ ಒದಗಿಸಬೇಕಿದೆ.





