ಶರಣರ ವಚನಗಳು ಮನದ ಕತ್ತಲೆ ಕಳೆದು ಬೆಳಕು ನೀಡುವಂತಹವು. ಅವು ಕೇವಲ ಮಾತುಗಳಲ್ಲ, ಜ್ಯೋತಿರ್ಲಿಂಗ. ಅವುಗಳ ಓದು, ಗ್ರಹಿಕೆ, ಅನುಷ್ಠಾನ ಬದುಕಿಗೆ ಭರವಸೆ ತಂದುಕೊಡುವಂತಹವು. ಆದರ್ಶದ ದಾರಿಯಲ್ಲಿ ನಡೆಯಲು ಪ್ರೇರೇಪಿಸುವವು. ಅಲ್ಲಿ ಸಮಾನತೆ, ಆತ್ಮಕಲ್ಯಾಣ, ಲೋಕಕಲ್ಯಾಣದ ಸಂದೇಶವಿರುವ ಹಿನ್ನೆಲೆಯಲ್ಲಿ ವಚನಗಳ ಮಹತ್ವ ಸಾರಲು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯ ತರಳಬಾಳು ಶಾಖಾ ಮಠದಲ್ಲಿ 15 ಜೂನ್ 2025ರಂದು ಬಸವಾದಿ ಶಿವಶರಣರ ವಚನಗಳ ರಾಜ್ಯ ಮಟ್ಟದ ವಚನ ಕಂಠಪಾಠ’ ಸ್ಪರ್ಧೆ ಆಯೋಜಿಸಲಾಗಿದೆ.
“ವಚನಗಳು ಗದ್ಯವೂ, ಪದ್ಯವೂ ಹೌದು. ಅವುಗಳನ್ನು ಓದಬಹುದು, ಹಾಡಬಹುದು. ವಚನ' ಎಂದರೆಪ್ರಮಾಣ’. ಇಂಥ ವಚನಗಳ ಸಂಸ್ಕಾರ ಬಾಲ್ಯದಿಂದಲೇ ಮಕ್ಕಳಿಗೆ ಮನೆ, ಮಠ, ಸಮಾಜದಲ್ಲಿ ಸಿಗಬೇಕೆನ್ನುವುದು ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರ ಸಂಕಲ್ಪವಾಗಿದ್ದು ಈ ಆಶಯದಂತೆ ವಚನ ಸ್ಪರ್ಧೆ ಏರ್ಪಡಿಸಲಾಗಿದೆ” ಎಂದು ಮಠದ ಸಂಪರ್ಕಾಧಿಕಾರಿ ಮರುಳಸಿದ್ದಯ್ಯ ತಿಳಿಸಿದ್ದಾರೆ.

“ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ'ಯ ಶಾಲಾ ಕಾಲೇಜುಗಳಲ್ಲಿವಚನ ಪರಿಚಯ, ವಚನ ಪ್ರವೇಶ, ವಚನ ವಿಶಾರದ, ವಚನ ಪ್ರವೀಣ’ ಪರೀಕ್ಷೆಗಳನ್ನು ನಡೆಸುತ್ತ ಬಂದಿದ್ದರು. ಅದೇ ದಾರಿಯಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ನಡೆಯುತ್ತಿದ್ದಾರೆ. ವಯಸ್ಸು, ಲಿಂಗ, ಜಾತಿಯ ಅಂತರವಿಲ್ಲದೆ ಯಾರು ಬೇಕಾದರೂ ವಚನಗಳ ಕಂಠಪಾಠ ಮಾಡಬಹುದು. ಅದಕ್ಕಾಗಿ ಪೂಜ್ಯರು 2025, ಜೂನ್ 15ರಂದು ಸಾಣೇಹಳ್ಳಿಯಲ್ಲಿ `ಒಲಿದಂತೆ ಹಾಡುವೆ’ ಎನ್ನುವ ಹೆಸರಿನಲ್ಲಿ ವಚನ ಕಂಠಪಾಠ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದಾರೆ” ಎಂದು ಮಾಹಿತಿ ನೀಡಿದರು.
“ವಿಶೇಷವೆಂದರೆ ಈ ಸ್ಪರ್ಧೆಯಲ್ಲಿ ಮಠಾಧೀಶರೂ ಭಾಗವಹಿಸಬಹುದು. ಚಿತ್ರದುರ್ಗದ ಮಾದಾರ ಚೆನ್ನಯ್ಯ ಶ್ರೀಗಳು ಮಠಾಧೀಶರಿಗೂ ಸುವರ್ಣ ಅವಕಾಶ ಕಲ್ಪಿಸಿಕೊಟ್ಟಿದ್ದು, ಈ ಸ್ಪರ್ಧೆಯಲ್ಲಿ ಭಾಗವಹಿಸುವ ಮಠಾಧೀಶರಿಗೆ ಪ್ರಥಮ ಬಹುಮಾನ 40 ಸಾವಿರ ರೂ. ಕೊಡುವುದಾಗಿ ಘೋಷಿಸಿದ್ದಾರೆ” ಎಂದು ತಿಳಿಸಿದ್ದಾರೆ.
ಸ್ಪರ್ಧೆಯಲ್ಲಿ ನಿಯಮಗಳನ್ನು ರೂಪಿಸಿದ್ದು, ಭಾಗವಹಿಸುವವರು ಈ ಕೆಳಗಿನ ಅಂಶಗಳನ್ನು ಪಾಲಿಸಬೇಕು ಎಂದು ತಿಳಿಸಲಾಗಿದೆ.
*ಸ್ಪರ್ಧಿಗಳು ಪಠ್ಯ ನೋಡದೆ 500 ವಚನಗಳನ್ನು ಹಾಡಬಹುದು ಇಲ್ಲವೇ ಗದ್ಯರೂಪದಲ್ಲಿ ಹೇಳಬಹುದು.
*ಲಿಂಗ, ಜಾತಿ, ವಯೋಭೇದವಿಲ್ಲದೆ ಯಾರು ಬೇಕಾದರೂ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
• ವಚನಗಳನ್ನು ತಪ್ಪಿಲ್ಲದೆ ಸ್ಪಷ್ಟವಾಗಿ, ವ್ಯಾಕರಣ ದೋಷವಿಲ್ಲದೇ ಭಾವಪೂರ್ಣವಾಗಿ ಹೇಳಬೇಕು.
• 1ನೆಯ ಬಹುಮಾನ ರೂಪಾಯಿ 30000ರೂ. 2ನೆಯ ಬಹುಮಾನ 25000 ರೂ, 3ನೆಯ ಬಹುಮಾನ 20000ರೂ. 4ನೆಯ ಬಹುಮಾನ 15000 ರೂ. 5ನೆಯ ಬಹುಮಾನ 10000 ರೂ. ಜೊತೆಗೆ ಪ್ರಶಸ್ತಿಪತ್ರ, ಪುಸ್ತಕ, ಟವೆಲ್ ನೀಡಿ ಗೌರವಿಸಲಾಗುವುದು.
• ೨೦೦ ವಚನಗಳನ್ನು ಹೇಳಿದವರೆಲ್ಲರಿಗೂ ಪ್ರಶಸ್ತಿಪತ್ರ, ಪುಸ್ತಕ, ಟವೆಲ್ ಕೊಡಲಾಗುವುದು.
• ಹೇಳುವ ವಚನಗಳನ್ನು ಹಾಳೆಯ ಒಂದು ಮಗ್ಗಲಿಗೆ ಡಿಟಿಪಿ ಮಾಡಿ ನಿರ್ಣಾಯಕರ ಕಡೆ ಕೊಡಬೇಕು.
• ವಚನಗಳನ್ನು ನೆನಪಿಸಿಕೊಂಡು ಹೇಳಲು ಕಾಲವಿಳಂಬ ಆಗಬಾರದು ಎನ್ನುವ ಕಾರಣಕ್ಕೆ ಪ್ರತಿವಚನದ ಮೊದಲ ಸಾಲನ್ನು ಮಾತ್ರ ಡಿಟಿಪಿ ಮಾಡಿಕೊಂಡು ಒಂದರ ನಂತರ ಒಂದು ವಚನವನ್ನು ಹೇಳಲು ಅವಕಾಶವಿದೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಸಬ್ಸಿಡಿ ಆಸೆಗೆ ರೈತ, ಕೃಷಿಯನ್ನು ಕಾರ್ಪೊರೇಟ್ ಗಳ ವಂಚನೆಯ ಜಾಲಕ್ಕೆ; ರೈತಸಂಘ ಪ್ರತಿಭಟನೆ.
ಕಂಠಪಾಠ ಮಾಡಬೇಕಾದ ವಚನಕಾರರು ಮತ್ತು ಅವರ ವಚನಗಳು:
೧) ಬಸವಣ್ಣ, ೨) ಚನ್ನಬಸವಣ್ಣ ೩) ಅಲ್ಲಮಪ್ರಭುದೇವರು ೪) ದೇವರ ದಾಸಿಮಯ್ಯ ೫) ಅಕ್ಕಮಹಾದೇವಿ ೬) ಶಿವಯೋಗಿ ಸಿದ್ಧರಾಮೇಶ್ವರ ೭) ಅಂಬಿಗರ ಚೌಡಯ್ಯ ೮) ಅಕ್ಕಮ್ಮ ೯) ಅಮುಗೆ ರಾಯಮ್ಮ ೧೦) ನೀಲಮ್ಮ ೧೧) ಸತ್ಯಕ್ಕ ೧೨) ಮೋಳಿಗೆ ಮಾರಯ್ಯ ೧೩) ಮಡಿವಾಳ ಮಾಚಿದೇವ ೧೪) ಹಡಪದ ಅಪ್ಪಣ್ಣ ೧೫) ಉರಿಲಿಂಗಪೆದ್ದಿ ಇವರ ತಲಾ ೨೦ ವಚನಗಳನ್ನಾದರೂ ಹೇಳಬೇಕು. ಉಳಿದಂತೆ ೧೨ನೆಯ ಶತಮಾನದ ಯಾವ ಶರಣ ಶರಣೆಯರ ವಚನಗಳನ್ನಾದರೂ ಹೇಳಬಹುದು.
*ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿರುವ ‘ಸಮಗ್ರ ವಚನ ಸಂಪುಟ’ದ ವಚನಗಳನ್ನು ಮಾತ್ರ ಹೇಳಬೇಕು.
*ಸ್ಪರ್ಧಿಗಳು ವಚನ ಕಂಠಪಾಠಕ್ಕೆ ಆನ್‌ಲೈನ್‌ನಲ್ಲಿ ಸಿಗುವ ‘ವಚನ ಸಂಪುಟ’ ಮತ್ತು ‘ವಚನ ಸಂಚಯ’ ಜಾಲತಾಣಗಳ ಬಳಕೆ ಮಾಡಿಕೊಳ್ಳಬಹುದು.

ಬೇರೆ ಬೇರೆ ತಾಲ್ಲೂಕು ಜಿಲ್ಲೆಗಳಿಂದ ಜೂನ್ 14ರಂದು ಬರುವ ಸ್ಪರ್ಧಾರ್ಥಿಗಳಿಗೆ ಉಳಿದುಕೊಳ್ಳಲು ಊಟ, ವಸತಿಸೌಲಭ್ಯವಿದೆ. ಪ್ರವೇಶ ಶುಲ್ಕ ರೂ.100 ಇದ್ದು ಜೂನ್ 10ರೊಳಗೆ ಅರ್ಜಿಯನ್ನು ಕೆಳಕಂಡ ವಿಳಾಸಕ್ಕೆ ಅಂಚೆ ಇಲ್ಲವೇ ಆನ್‌ಲೈನ್ ಮೂಲಕವೂ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗೆ ಟಿ ಎಂ ಮರುಳಸಿದ್ದಯ್ಯ, ಶ್ರೀ ತರಳಬಾಳು ಜಗದ್ಗುರು ಶಾಖಾಮಠ ಸಾಣೇಹಳ್ಳಿ ಇವರನ್ನು ಸಂಪರ್ಕಿಸಬಹುದು.





