ಗ್ರಾಮೀಣ ಪ್ರದೇಶಗಳ ಬಡವರು, ನಿರ್ಗತಿಕರು, ರೈತರು, ಸಣ್ಣ ಸಣ್ಣ ಉದ್ದಿಮೆದಾರರಿಗೆ ಒಳಗೊಂಡು ಬೆಸ್ಕಾಂ ಕಂಪನಿಯು ಕರೆನ್ಸಿ ಮೀಟರ್ ( ಮೊಬೈಲ್, ಟಿ.ವಿ ಗೆ ಹಣ ಹಾಕಿದ ಹಾಗೆ) ಹಣ ಪಡೆದು ಕಾರ್ಯನಿರ್ವಹಿಸುವ ಸ್ಮಾರ್ಟ್ ಮೀಟರ್ ಅಳವಡಿಸುವ ಸರ್ಕಾರ ಮತ್ತು ಬೆಸ್ಕಾಂ ಕಂಪನಿ ಕ್ರಮವನ್ನು ವಿರೋಧಿಸಿ, ಸ್ಮಾರ್ಟ್ ಮೀಟರ್ ಅಳವಡಿಕೆ ಕಾರ್ಯವನ್ನು ರದ್ದುಪಡಿಸಿಬೇಕು. ಇಲ್ಲವಾದಲ್ಲಿ ಚಳುವಳಿ, ಸಂಘರ್ಷಕ್ಕೆ ಸಿದ್ದರಿದ್ದೇವೆ ಎಂದು ಎಚ್ಚರಿಕೆ ನೀಡಿ ಕರ್ನಾಟಕ ರಾಜ್ಯ ರೈತ ಸಂಘ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಿ ಒತ್ತಾಯಿಸಿತು.

ಈ ವೇಳೆ ಮಾತನಾಡಿದ ಮುಖಂಡರು “ಸ್ಮಾರ್ಟ್ ಮೀಟರ್ ಅಳವಡಿಕೆಯನ್ನು ಗ್ರಾಮೀಣ ಜನರು ಸಂಪೂರ್ಣ ತಿರಸ್ಕರಿಸಿದ್ದು, ಮೊಳಕಾಲ್ಕೂರು ತಾಲೂಕು, ಚಳ್ಳಕೆರೆ ತಾಲೂಕಿನ ಹಳ್ಳಿಗಳಲ್ಲಿ ಈಗಾಗಲೇ ಮೀಟರ್ ಅಳವಡಿಸಲು ಬಂದ ಸಿಬ್ಬಂದಿಗೆ ಘೇರಾವ್ ಹಾಕಿ ಪ್ರತಿಭಟಿಸಿ ವಾಪಾಸ್ ಕಳಿಸುವ ಚಳುವಳಿ ಈಗಾಗಲೇ ಪ್ರಾರಂಭಿಸಿದ್ದು ಮತ್ತು ಚಳುವಳಿಯನ್ನು ರೈತರು ಸರ್ಕಾರದ ವಿರುದ್ಧ ಸಂಘರ್ಷಕ್ಕೆ ಇಳಿಯುವ ಮುನ್ನ ಸ್ಮಾರ್ಟ್ ಮೀಟರ್ ಅಳವಡಿಕೆ ಕಾರ್ಯವನ್ನು ರದ್ದುಪಡಿಸಿಬೇಕು, ಹಾಲಿ ಇರುವ ಮೀಟರ್ ಗಳ ಮೂಲಕ ಮಾಪನ ಮುಂದುವರೆಸಬೇಕು” ಎಂದು ಒತ್ತಾಯಿಸಿದರು.

“ಸ್ಮಾಟ್ ಮೀಟರ್ ಆಳವಡಿಕೆಯಲ್ಲಿ ರಾಜ್ಯ ಸರ್ಕಾರ 14 ಸಾವಿರ ಕೋಟಿ ಖಾಸಗಿ ಕಂಪನಿಗಳಿಂದ ಕಿಕ್ ಬ್ಯಾಕ್ (ಲಂಚದ ರೂಪದಲ್ಲಿ) ರೂಪದಲ್ಲಿ ಹಣ ಪಡೆದಿರುವ ಬಗ್ಗೆ ವಿರೋಧ ಪಕ್ಷಗಳು ಸೇರಿದಂತೆ ಮಾಧ್ಯಮಗಳಲ್ಲಿ ಲಂಚಾವತಾರದ ಬಗ್ಗೆ ಎಳೆ-ಎಳೆಯಾಗಿ ಚರ್ಚೆಯಾಗಿದೆ. ಖಾಸಗೀ ಕಂಪನಿಗಳಿಗೆ ಲಾಭಮಾಡಿಕೊಟ್ಟು 14 ಸಾವಿರ ಕೋಟಿ ಹಣ ಲಂಚದ ರೂಪದಲ್ಲಿ ಪಡೆದಿದ್ದಾರೆಂದು ನ್ಯಾಯಾಲಯದಲ್ಲಿ ದಾವೆ ದಾಖಲು ಮಾಡಿದ್ದು ತನಿಖೆ ಮಾಡಬೇಕೆಂದು ರೈತ ಸಂಘ ಒತ್ತಾಯಿಸುತ್ತದೆ” ಎಂದರು.

ರೈತರ ಬೇಡಿಕೆಗಳಾದ- ಸ್ಮಾರ್ಟ್ ಮೀಟರ್ ಅಳವಡಿಕೆ ರದ್ದು ಮಾಡಿ, ಅಳವಡಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದು ತನಿಖೆಗೆ ಒಳಪಡಿಸಬೇಕು. ಕೃಷಿ ಪಂಪ್ ಸೆಟ್, ಗೃಹ ಭಾಗ್ಯಜ್ಯೋತಿ, ನಿರಂತರ ಜ್ಯೋತಿ, ಕುಬೇರ ಜ್ಯೋತಿಗಳಂತಹ ಬಡವರಿಗೆ ಉಚಿತವಾಗಿ ನೀಡುತ್ತಿರುವ ವಿದ್ಯುಚ್ಛಕ್ತಿಗೆ ಸ್ಮಾರ್ಟ್ ಮೀಟರ್ ಇಲ್ಲದೇ ಮುಂದುವರೆಸಬೇಕು. ಕೃಷಿ ಪಂಪ್ ಸೆಟ್ ಗಳಿಗೆ ಫೇಸ್ ಸ್ಮಾರ್ಟ್ ಆಳವಡಿಸುವ ಪ್ರಯತ್ನಕ್ಕೆ ಕೈಹಾಕದೇ, ರೈತರಿಗೆ ಉಚಿತ ವಿದ್ಯುತ್ ಯೋಜನೆ ಮುಂದುವರೆಸಬೇಕು. ಸ್ಮಾರ್ಟ್ ಮೀಟರ್ 1450 ರೂ ಗೆ ಸಿಗುತ್ತಿತ್ತು, ಆದರೆ ಕಂಪನಿಗೆ ಲಾಭಮಾಡಿಕೊಡಲು 600 ರೂ ಹೆಚ್ಚಿಸಿದ್ದು , ಭ್ರಷ್ಟಾಚಾರವಾಗಿದ್ಧು, ತನಿಖೆಗೆ ಒಳಪಡಿಸಬೇಕು ಎನ್ನುವ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು” ಎಂದು ಆಗ್ರಹಿಸಿದರು.

“ಚಿತ್ರದುರ್ಗ ಜಿಲ್ಲೆಯಲ್ಲಿ ರೈತರು ನೀರಾವರಿ ಯೋಜನೆಗಳಿಂದ ವಂಚಿತರಾಗಿದ್ದು, ಕೃಷಿ ನೀರಾವರಿಗೆ ವಿದ್ಯುತ್ ಆಧಾರವಾಗಿದ್ದು, ಸ್ಮಾರ್ಟ್ ಮೀಟರ್ ಅಳವಡಿಕೆ ಬಗ್ಗೆ ಈಗಾಗಲೇ 3 ತಿಂಗಳಿಂದಲೂ ಚಳುವಳಿ ಮೂಲಕ ಎಚ್ಚರಿಕೆ ನೀಡುತ್ತಿದ್ದು, ಸರ್ಕಾರ ರೈತರೊಂದಿಗೆ ಸಂಘರ್ಷಕ್ಕಿಳಿದರೆ ಈ ಹಿಂದೆ ಜಿಲ್ಲೆಯಲ್ಲಿ ಬೆಸ್ಕಾಂ ಜಾಗೃತದಳದ ಸಿಬ್ಬಂಧಿಯನ್ನು ಹಳ್ಳಿಗಳಲ್ಲಿ ಬರದಂತೆ ನಿಷೇಧಿಸಿದ ಹಾಗೆ ( ಗೃಹ ಬಂಧನದಂತ ಚಳುವಳಿ) ಮೀಟರ್ ವಾಪಾಸಾತಿ ಚಳುವಳಿ, ವಿದ್ಯುತ್ ಕರ ನಿರಾಕರಣೆ ಚಳುವಳಿಗೆ ಕರೆ ನೀಡಲಾಗುವುದೆಂದು ಹಿಂದಿನ ರೈತ ಚಳುವಳಿಗಳನ್ನು ಬೆಸ್ಕಾಂ ನೆನಪಿನಲ್ಲಿಟ್ಟುಕೊಂಡು ಅಳವಡಿಕೆ ವಾಪಾಸ್ ಪಡೆಯಬೇಕೆಂದು ಒತ್ತಾಯಿಸುತ್ತಿದ್ದೇವೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಶಕ್ತಿ ಯೋಜನೆ | ರಾಜ್ಯಾದ್ಯಂತ 500 ಕೋಟಿ ಮಹಿಳೆಯರ ಪ್ರಯಾಣ: ಕಾರ್ಮಿಕರಿಗೆ ಸುಲಭ ಸಂಚಾರ, ಆರ್ಥಿಕ ಬಲ
ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬಸವರೆಡ್ಡಿ, ತಾಲೂಕು ಅಧ್ಯಕ್ಷ ಸೂರಮ್ಮನಹಳ್ಳಿ ರಾಜಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರ್ಲಹಳ್ಳಿ ರವಿಕುಮಾರ್, ಮುಖಂಡರಾದ ಈಶಣ್ಣ, ಮುತ್ತಯ್ಯ, ಮೀಸೆ ತಿಪ್ಪೇಸ್ವಾಮಿ , ಈರಣ್ಣ, ಕೋನಸಾಗರ ಮಂಜಣ್ಣ, ವೀರೇಶಿ, ಪ್ರಕಾಶ್, ಉಪಾಧ್ಯಕ್ಷ ಚಂದ್ರಣ್ಣ, ಗುಂಡ್ಲೂರು ತಿಮ್ಮಪ್ಪ, ಮಂಜಣ್ಣ, ಜಿಲ್ಲಾ ಹಸಿರು ಸೇನೆ ಅಧ್ಯಕ್ಷ ಪ್ರಶಾಂತ್ ರೆಡ್ಡಿ, ಚಳ್ಳಕೆರೆ ತಾಲೂಕಿನ ಗೌರವಾಧ್ಯಕ್ಷ ಚಂದ್ರಶೇಖರ ನಾಯ್ಕ, ಓಬಯ್ಯ ನಾಯಕ, ರಾಮಾಪುರ ಬಸವರಾಜು, ಮರ್ಲಹಳ್ಳಿ ದೊಡ್ಡಿ ಸೂರಯ್ಯ, ರಾಮಾಂಜಿನಿ, ದಾಸಪ್ಪ, ವೆಂಕಟೇಶ್, ರಮೇಶ್, ಮಂಜುನಾಥ್, ಮಹೇಶ್, ತಿಪ್ಪೇಶ್, ಶಿವಮೂರ್ತಿ, ಮಿಟ್ಯಾನಾಯ್ಕ, ರೆಡ್ಡೆಪ್ಪ ಸೇರಿದಂತೆ ಇತರ ರೈತರು ಹಾಜರಿದ್ದರು.





