ತಾಲೂಕು ಕಛೇರಿಗೆ ನಿಗದಿತ ಸಮಯಕ್ಕೆ ಹಾಜರಾಗದೇ ಸಾರ್ವಜನಿಕರ ಕೆಲಸಕಾರ್ಯಗಳ ನಿರ್ಲಕ್ಷ್ಯ ಧೋರಣೆ, ವಿಳಂಬಕ್ಕೆ ಕಾರಣವಾದ ತಾಲೂಕು ಕಛೇರಿ ಸಿಬ್ಬಂದಿ ವಿರುದ್ಧ ರೈತ ಸಂಘ ಹಾಗೂ ಹಸಿರು ಸೇನೆಯ ಹೊಳಲ್ಕೆರೆ ತಾಲೂಕು ಘಟಕದ ಮುಖಂಡರು ಹೊಳಲ್ಕೆರೆ ತಹಶೀಲ್ದಾರ್ ಮತ್ತು ಚಿತ್ರದುರ್ಗ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಆಕ್ರೋಶ ವ್ಯಕ್ತಪಡಿಸಿದೆ.

ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿ ಕಿಡಿಕಾರಿದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಧ್ಯಕ್ಷ ಈಚಗಟ್ಟದ ಸಿದ್ಧವೀರಪ್ಪ, “ಇಂದು ಬೆಳಗ್ಗೆ 10:30 ಗಂಟೆಯವರೆಗೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕು ಕಚೇರಿಯಲ್ಲಿ ಮೂವರು ದ್ವಿತೀಯ ದರ್ಜೆ ಸಹಾಯಕ (ಎಸ್ ಡಿ ಎ) ಮಹಿಳೆಯರು, ರಾಮಗಿರಿ ಉಪತಹಶೀಲ್ದಾರ್ ಅವರನ್ನು ಹೊರತುಪಡಿಸಿ ಬಹುತೇಕ ಸಿಬ್ಬಂದಿಗಳು ಕಚೇರಿಯಲ್ಲಿ ಹಾಜರಿರಲಿಲ್ಲ. ಈ ಸಂದರ್ಭದಲ್ಲಿ10.35 ನಿಮಿಷದವರೆಗೆ ಬಹುತೇಕ ನೌಕರರು, ಅಧಿಕಾರಿಗಳು ಕಛೇರಿಗೆ ಹಾಜರಾಗಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಸಮಯ ಪಾಲನೆ ಇಲ್ಲದೆ ಮನಸ್ಸಿಗೆ ಬಂದಂತೆ ವರ್ತಿಸುವುದು ಕಂಡುಬಂದಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಇದೇ ವೇಳೆ ಸಿಬ್ಬಂದಿ ಹಾಜರಾತಿ ಪುಸ್ತಕದಲ್ಲಿ ಗೈರುಹಾಜರಾದ ಬಗ್ಗೆ ದಾಖಲಿಸಲು ತಹಶೀಲ್ದಾರ್ ರವರಿಗೆ ತಿಳಿಸಿ ಗೈರು ಹಾಕಿಸಿರುತ್ತೇವೆ. ಚಿತ್ರದುರ್ಗ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಈ ರೀತಿ ಬೇಜವಾಬ್ದಾರಿಯಾಗಿ ಕೆಲಸ ಮಾಡುವ ನೌಕರರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸುತ್ತೇವೆ. ಕಛೇರಿಗೆ ದೂರದ ಊರುಗಳಿಂದ ಅವಶ್ಯಕ ಕೆಲಸಗಳಿಗೆ ಸಾಕಷ್ಟು ಬಾರಿ ರೈತರು, ಸಾರ್ವಜನಿಕರು, ಅಶಕ್ತರು, ಮಹಿಳೆಯರು ಸೇರಿದಂತೆ ಸಾವಿರಾರು ಮಂದಿ ಆಗಮಿಸುತ್ತಾರೆ. ಇವರು ಕಚೇರಿಗೆ ಸಮಯಕ್ಕೆ ಸರಿಯಾಗಿ ಹಾಜರಾಗದೆ ಇರುವುದು ಕೆಲಸಗಳಲ್ಲಿ ವಿಳಂಬ ಮತ್ತು ದುರ್ವರ್ತನೆ ತೋರಿದಂತೆ. ಇದರಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತೆ ಆಗುತ್ತದೆ” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅಂಬೇಡ್ಕರ್ ಗಾಂಧಿ ಪೋಟೋ ಇರಿಸದೇ ಕಸಾಪದಿಂದ ಗಣರಾಜ್ಯೋತ್ಸವ ಆಚರಣೆ ಆರೋಪ
ಈ ಸಂದರ್ಭದಲ್ಲಿ ರೈತ ಸಂಘ ಹಾಗೂ ಹಸಿರುಸೇನೆ ಸಂಚಾಲಕ ಪ್ರಸನ್ನಕುಮಾರ್, ತಾಲೂಕು ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ್, ಮುಖಂಡರಾದ ಸದಾಶಿವಪ್ಪ, ನಾಗರಾಜ್, ಮಹದೇವಪ್ಪ ಮುಂತಾದವರು ಹಾಜರಿದ್ದರು.





