ಸರ್ಕಾರದ ಶಾಲೆಗಳ ಸ್ಥಾಪನೆ ಹಾಗೂ ಶಾಲಾಭಿವೃದ್ಧಿಗೆ ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್) ಬಳಸಲಾಗುವುದು ಎಂದು ರಾಜ್ಯದ ಉಪ ಮುಖ್ಯಮಂತ್ರಿಗಳು ಕಾರ್ಯಕ್ರಮವೊಂದರಲ್ಲಿ ಹೇಳಿರುವುದು ಪತ್ರಿಕೆಗಳಲ್ಲಿ ವರದಿಯಾಗಿದ್ದು, ಇದು ಶಾಲೆಗಳನ್ನು ಕಾರ್ಪೋರೇಟ್ ಕಂಪನಿಗಳ ತೆಕ್ಕೆಗೆ ಹಾಕಲು ದಾರಿ ಮಾಡಿಕೊಡುತ್ತದೆ ಎಂದು ಎಐಡಿಎಸ್ಓ ಚಿತ್ರದುರ್ಗ ಜಿಲ್ಲಾ ಘಟಕ ಆಕ್ಷೇಪ ವ್ಯಕ್ತಪಡಿಸಿದೆ.
“ರಾಜ್ಯದ ಸರ್ಕಾರಿ ಶಾಲೆಗಳ ಪರಿಸ್ಥಿತಿ ಅತ್ಯಂತ ದಯನೀಯವಾಗಿದೆ. ಈ ಬಾರಿ ಮಳೆಗೆ ಅನೇಕ ಶಾಲಾ ಕೊಠಡಿಗಳು ಸೋರುತ್ತಿವೆ. ಶಾಲೆಗಳ ಮೇಲ್ಛಾವಣಿಗಳು ಕುಸಿಯುವ ಹಂತದಲ್ಲಿದೆ. ಪೀಠೋಪಕರಣಗಳು, ಶೌಚಾಲಯಗಳು ಇಲ್ಲದೇ ಕಲಿಕೆ ಕುಂಠಿತಗೊಳ್ಳುತ್ತಿದೆ. ಸರ್ಕಾರಿ ಶಾಲೆಗಳನ್ನು ಬಲಪಡಿಸಿಬೇಕಾದ ಅವಶ್ಯಕತೆ ತೀವ್ರವಾಗಿದೆ. ಸರ್ಕಾರವು ತನ್ನ ಜನರಿಗೆ ಶಿಕ್ಷಣ ನೀಡುವ ಪ್ರಾಥಮಿಕ ಜವಾಬ್ದಾರಿಯನ್ನು ನೆರವೇರಿಸಬೇಕೆಂಬುದು ರಾಜ್ಯದ ಜನರ ಆಗ್ರಹವಾಗಿದೆ” ಎಂದು ಎಐಡಿಎಸ್ಓ ಮುಖಂಡರು ಒತ್ತಾಯಿಸಿದರು.

“ಜನರು ನೀಡುವ ತೆರಿಗೆ ಹಣದಲ್ಲಿ ಅಭಿವೃದ್ಧಿಪಡಿಸಬೇಕಾದ, ಸಾರ್ವಜನಿಕರ ಆಸ್ತಿಯಾದ ಶಾಲೆಗಳನ್ನು ಸರ್ಕಾರ ಕಾರ್ಪೋರೇಟ್ ಕಂಪನಿಗಳ ಮಡಿಲಿಗಿಡಲು ಹೊರಟಿದೆ. ಮಹಾನ್ ವ್ಯಕ್ತಿಗಳ ಹೆಸರುಗಳನ್ನು ಇಡುವ ಬದಲು ಈ ಕಾರ್ಪೋರೇಟ್ ಕಂಪನಿಗಳ ಹೆಸರು ಶಾಲೆಗಳಿಗೆ ಇಡುವ ಪ್ರಸ್ತಾಪವನ್ನು ಮಾಡಿರುವುದು, ಸರ್ಕಾರ ದಲ್ಲಾಳಿ ಕೆಲಸಕ್ಕೆ ಇಳಿದಿದೆಯೇ ಎಂಬ ಪ್ರಶ್ನೆ ಮೂಡಿಸುತ್ತಿದೆ” ಎಂದು ಕಿಡಿಕಾರಿದರು.
“ಕಾರ್ಪೋರೇಟ್ ಕಂಪನಿಗಳ ಭಿಕ್ಷೆಯ ಹಣದಲ್ಲಿ ನಮ್ಮ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ಬದಲು ನಮ್ಮ ಹಕ್ಕಿನ ತೆರಿಗೆ ಹಣದಲ್ಲಿ ಶಾಲೆಗಳನ್ನು ನಿರ್ಮಿಸಿ ಅಭಿವೃದ್ಧಿ ಪಡಿಸಲಿ. ಇನ್ನು ಕಂಪನಿಗಳ ಮೇಲೆ ತೆರಿಗೆ ಹೆಚ್ಚಿಸಿ ಅವರಿಂದ ನ್ಯಾಯಯುತವಾಗಿ ಹಣ ವಸೂಲಿ ಮಾಡಲಿ. ರಾಜ್ಯದ ಅಭಿವೃದ್ಧಿಗೆ ಉಪಯೋಗಿಸಲಿ. ಉಪ ಮುಖ್ಯಮಂತ್ರಿಗಳು ಈ ಪ್ರಸ್ತಾಪನೆಯನ್ನು ಕೈಬಿಡಬೇಕೆಂದು ರಾಜ್ಯದ ವಿದ್ಯಾರ್ಥಿಗಳು ಆಗ್ರಹಿಸುತ್ತಿದ್ದಾರೆ” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಲಂಚ, ಕರ್ತವ್ಯಲೋಪ, ದುರ್ನಡತೆ ಆರೋಪ; ವೈದ್ಯಾಧಿಕಾರಿ ಅಮಾನತು
ಎಐಡಿಎಸ್ಓ ಜಿಲ್ಲಾ ಸಂಚಾಲಕ ಕೆ.ಈರಣ್ಣ, ವಿದ್ಯಾರ್ಥಿಗಳಾದ ಗಜೇಶ್, ಮೌನೇಶ್, ಸ್ವಪ್ನಾ, ಸಾನಿಯಾ, ಭಾರ್ಗವಿ, ದ್ಯಾನೇಶ್ ಸೇರಿದಂತೆ ಸಂಘಟನೆಯ ಇತರ ಮುಖಂಡರು ಒತ್ತಾಯಿಸಿದ್ದಾರೆ





