ದಾವಣಗೆರೆ ಸಮೀಪದ ತೋಳಹುಣಸೆ ರೈಲ್ವೆ ನಿಲ್ದಾಣದಿಂದ ದಾವಣಗೆರೆ–ತುಮಕೂರು ಹೊಸ ರೈಲ್ವೆ ಮಾರ್ಗದ ಪರಿಶೀಲನೆಯನ್ನು ಕೇಂದ್ರ ಸರ್ಕಾರದ ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ನಡೆಸಿದರು. ಮೋಟಾರ್ ಟ್ರ್ಯಾಲಿ ಮೂಲಕ ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಮಾಯಕೊಂಡ ಶಾಸಕ ಬಸವಂತಪ್ಪರೊಂದಿಗೆ ತೋಳಹುಣಸೆ–ಆನಗೋಡು – ಹೆಬ್ಬಾಳು ಸಂಪರ್ಕ ಮಾರ್ಗಗಳ ಪರಿಶೀಲನೆ ಕೈಗೊಳ್ಳಲಾಯಿತು.
ಈ ವೇಳೆ ರೈಲ್ವೆ ಇಲಾಖೆಗೆ ಸಂಬಂಧಿಸಿದ ಬೇಡಿಕೆಗಳಾದ ದಾವಣಗೆರೆ ನಗರದ ಜೆ.ಎಚ್. ಪಟೇಲ್ ಬಡಾವಣೆಯ ಬಾಲಭವನದಲ್ಲಿ ಮಕ್ಕಳಿಗಾಗಿ ಟಾಯ್ ಟ್ರೇನ್ ಆರಂಭ, ಬೆಂಗಳೂರು–ಹುಬ್ಬಳ್ಳಿ ಮೂಲಕ ಕತ್ರಾ, ಜಮ್ಮು-ಕಾಶ್ಮೀರಕ್ಕೆ ಹೊಸ ಸೇವೆ ಆರಂಭಿಸಬೇಕು, ಹುಬ್ಬಳ್ಳಿ-ವಿಜಯವಾಡ ರೈಲನ್ನು ಯಶವಂತಪುರ ಜಂಕ್ಷನ್ ವರೆಗೆ ವಿಸ್ತರಿಸಿ, ಮಾಯಕೊಂಡ ನಿಲ್ದಾಣದಲ್ಲಿ ವಿಶ್ವಮಾನವ ಹಾಗೂ ಇಂಟರ್ ಸಿಟಿ ರೈಲುಗಳಿಗೆ ನಿಲುಗಡೆ ನೀಡಬೇಕು. ಬೆಳಗಾವಿ-ಮೈಸೂರು ರೈಲು ವೇಳಾಪಟ್ಟಿ ಪರಿಷ್ಕರಣೆ ಮಾಡಬೇಕು ಎಂದು ಮನವಿ ಮಾಡಿದರು.

ಹನುಮನಹಳ್ಳಿ ರೈಲು ನಿಲ್ದಾಣದಲ್ಲಿ ಕುಡಿಯುವ ನೀರು, ಶೌಚಾಲಯ, ಮೇಲ್ಛಾವಣಿ ಮತ್ತು ಪ್ಲಾಟ್‌ಫಾರ್ಮ್ ವಿಸ್ತರಣೆ, ರೈಲು ನಿಲ್ದಾಣಗಳಲ್ಲಿ ಸುರಕ್ಷತಾ ಕಾಮಗಾರಿ ಕೈಗೊಳ್ಳಬೇಕು ಎಂದು ಬೇಡಿಕೆ ಸಲ್ಲಿಸಿದರು. ಇದೇ ವೇಳೆ ರೈಲ್ವೆಗೆ ಭೂಮಿ ನೀಡಿದ ಸಂತ್ರಸ್ತೆ ಶ್ರೀಮತಿ ರೇಣುಕಾ ಅವರಿಗೆ ಮಾನವೀಯ ನೆಲೆಯ ಆಧಾರದ ಮೇಲೆ ಉದ್ಯೋಗ ನೀಡಬೇಕು ಎಂದು ಮನವಿ ಮಾಡಲಾಯಿತು.
ಕಾಲುವೆಗಳಲ್ಲಿ ಜಮಾವಣೆಗೊಂಡಿರುವ ಹೂಳನ್ನು ತೆಗೆಸಿ ನೀರಿನ ಸರಾಗ ಹರಿವಿಗೆ ಅನುವು ಮಾಡಿಕೊಡಬೇಕು. ಅಗತ್ಯ ನಿರ್ವಹಣೆಯಿಲ್ಲದೆ ನೀರು ತಲುಪದ ಭೂಮಿಗೆ (Tail-end ಪ್ರದೇಶ) ನೀರಾವರಿ ಸೌಲಭ್ಯ ಕಲ್ಪಿಸಿ ಕೊನೆಯ ಭಾಗದ ರೈತರಿಗೆ ನೆರವಾಗಲು 60 ವರ್ಷ ಹಳೆಯದಾದ ಮತ್ತು ಜೀರ್ಣಾವಸ್ಥೆಯಲ್ಲಿರುವ ನೀರು ನಿಯಂತ್ರಣ ಕಾಮಗಾರಿಗಳನ್ನು ದುರಸ್ತಿಗೊಳಿಸಿ,ಭದ್ರಾ ನಾಲೆಗಳ ಆಧುನೀಕರಣಗೊಳಿಸಿ ರೈತರ ಎರಡು ಬೆಳೆಗೆ ಅನುಕೂಲ ಮಾಡಿಕೊಡಬೇಕು ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಖನಿಜ ನಿಕ್ಷೇಪ ಶೋಧ ಹಾಗೂ ಸೋಲಾರ್ ಪ್ಲಾಂಟ್ ಗೆ ಭೂಮಿ ನೀಡಲು ಉಬ್ರಾಣಿ ರೈತರ ವಿರೋಧ
ಪರಿಶೀಲನೆ ವೇಳೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಗಿತ್ತೆ ಮಾಧವ ವಿಠಲರಾವ್, ರೈಲ್ವೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರು ಹಾಜರಿದ್ದರು.





