ಲೋಕಸಭೆ ಚುನಾವಣೆ ಇರುವ ಕಾರಣದಿಂದ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಮಾಡುತ್ತಿದ್ದಾರೆ. ಚುನಾವಣೆಗೆ ರಾಮಮಂದಿರ ಉದ್ಘಾಟನೆ ಎಂಬುದು ಒಂದು ಸ್ಟಂಟ್ ಎಂದು ಯೋಜನೆ ಮತ್ತು ಸಾಂಖಿಕ ಸಚಿವ ಡಿ ಸುಧಾಕರ್ ಹೇಳಿದ್ದಾರೆ. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “2019ರ ಚುನಾವಣೆ ವೇಳೆ ಪುಲ್ವಾಮಾ ಘಟನೆ ತೋರಿಸಿದ್ದರು. ಈಗ ರಾಮನ ಫೋಟೋ ಹಿಡಿದುಕೊಂಡಿದ್ದಾರೆ. ಇಂತದ್ದನ್ನು ನಂಬಿ ಎರಡು ಬಾರಿ ಮೂರ್ಖರಾಗಿದ್ದೇವೆ. ಜನರು ಮೂರನೇ ಬಾರಿಯೂ ಮೂರ್ಖರಾಗುವುದಿಲ್ಲ” ಎಂದಿದ್ದಾರೆ.
“ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನಾನು ಸೇರಿದಂತೆ ಹಲವರು ದುಡ್ಡು ಕೊಟ್ಟಿದ್ದೇವೆ. ಇಟ್ಟಿಗೆ ಕೊಟ್ಟಿದ್ದೇವೆ. ರಾಮ ಎಲ್ಲರ ದೇವರು. ಧಾರ್ಮಿಕ ನಂಬಿಕೆಗಳನ್ನು ಬಳಸಿಕೊಂಡು ಬಿಜೆಪಿ ಮತಕ್ಕಾಗಿ ಗಾಳ ಹಾಕುತ್ತಿದೆ” ಎಂದು ಆರೋಪಿಸಿದ್ದಾರೆ.
“ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸ್ವತಃ ಬಿಜೆಪಿ ಶಾಸಕ ಯತ್ನಾಳ್ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ‘40% ಸರ್ಕಾರ’ ಎಂದೇ ಕುಖ್ಯಾತಿ ಗಳಿಸಿತ್ತು. ಅವರೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಅವರ ಜಾತ್ಯಾತೀತವಾದ ಎಲ್ಲಿ ಹೋಯಿತು” ಎಂದು ಜೆಡಿಎಸ್ ವಿರುದ್ಧವೂ ಕಿಡಿಕಾರಿದ್ದಾರೆ.




