ಇಲ್ಲಿನ ಮುರುಘಾ ಮಠದ ಶಿವಮೂರ್ತಿ ಸ್ವಾಮಿ ವಿರುದ್ಧ ದಾಖಲಾಗಿರುವ ಮೊದಲ ಪೋಕ್ಸೊ ಪ್ರಕರಣದ ವಿಚಾರಣೆ ಮಂಗಳವಾರ ಪೂರ್ಣಗೊಂಡಿದ್ದು, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸಿವಿಲ್ ಕೋರ್ಟ್‌ನ ನ್ಯಾಯಾಧೀಶರಾದ ಗಂಗಾಧರಪ್ಪ ಹಡಪದ ನ.26ಕ್ಕೆ ಆದೇಶ ಕಾಯ್ದಿರಿಸಿದ್ದಾರೆ.
ಶರಣರ ವಿರುದ್ಧದ 2 ಪೋಕ್ಸೊ ಪ್ರಕರಣಗಳ ಪೈಕಿ ಮೊದಲ ಪ್ರಕರಣದ ಸಂಬಂಧ ಸುದೀರ್ಘ ವಿಚಾರಣೆ ನಡೆದಿದೆ. ಮಂಗಳವಾರ ನಡೆದ ವಿಚಾರಣೆ ವೇಳೆ ಸರ್ಕಾರಿ ವಕೀಲರಾದ ಜಗದೀಶ್ ಸಂತ್ರಸ್ತೆಯ ಪರ ಅಂತಿಮ ವಾದ ಮಂಡಿಸಿದರು. ಈ ಪ್ರಕರಣಗಳಲ್ಲಿ ಶಿವಮೂರ್ತಿ ಸ್ವಾಮಿ ಪ್ರಸ್ತುತ ಷರತ್ತುಬದ್ಧ ಜಾಮೀನು ಪಡೆದಿದ್ದಾರೆ
ಚಿತ್ರದುರ್ಗದ ಶಿವಮೂರ್ತಿ ಸ್ವಾಮಿ ವಿರುದ್ಧ 2022ರ ಆ.26 ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಪೋಕ್ಸೊ ಕೇಸ್ ದಾಖಲಾಗಿದ್ದು, ಮುರುಘಾ ಮಠದ ಹಾಸ್ಟೆಲ್‌ನ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರಿಂದ ಕೇಸ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಎ1 ಶಿವಮೂರ್ತಿ ಸ್ವಾಮಿ, ಎ2 ಮಹಿಳಾ ವಾರ್ಡನ್ ರಶ್ಮಿ, ಎ3 ಬಸವಾದಿತ್ಯ, ಎ4 ಮ್ಯಾನೇಜರ್ ಪರಮಶಿವಯ್ಯ, ಎ5 ವಕೀಲ ಗಂಗಾಧರಯ್ಯ ವಿರುದ್ಧ ಕೇಸ್ ದಾಖಲಾಗಿತ್ತು.
ಅದೇ ವರ್ಷ ಆ.27ರಂದು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ಕೇಸ್ ವರ್ಗಾವಣೆಯಾಗಿದ್ದು, 2022ರ ಸೆ.01 ರಂದು ಎ1 ಶಿವಮೂರ್ತಿ ಸ್ವಾಮಿ, ಎ2 ವಾರ್ಡನ್ ರಶ್ಮಿ ಬಂಧನಕ್ಕೊಳಗಾಗಿದ್ದರು. ಬಳಿಕ ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಶಿವಮೂರ್ತಿ ಸ್ವಾಮಿ ವಿರುದ್ಧ 2022ರ ಅ.13 ರಂದು ಮಠದ ಅಡುಗೆ ಸಹಾಯಕಿಯಿಂದ ಮತ್ತೊಂದು ದೂರು ದಾಖಲಾಗಿತ್ತು. ಆ ಪ್ರಕರಣದಲ್ಲಿ ತನ್ನಿಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆಯೂ ಲೈಂಗಿಕ ಕಿರುಕುಳ ನೀಡಿರುವುದಾಗಿಯೂ ಎಂದು ಕೂಡ ಉಲ್ಲೇಖಿಸಿದ್ದರು.
ಇದನ್ನು ಓದಿದ್ದೀರಾ? ಚಿತ್ರದುರ್ಗ | ಭೂಮಿ,ವಸತಿ ರಹಿತರ ಬಗರ್ ಹುಕುಂ ಮಂಜೂರಾತಿಗಾಗಿ ನವೆಂಬರ್ 26ಕ್ಕೆ ಬೆಂಗಳೂರು ಚಲೋ
ಈ ವೇಳೆ ಎ1 ಶಿವಮೂರ್ತಿ ಸ್ವಾಮಿ, ಎ2 ವಾರ್ಡನ್ ರಶ್ಮಿ, ಎ3 ಬಸವಾದಿತ್ಯ, ಎ4 ಪರಮಶಿವಯ್ಯ, ಎ5 ವಕೀಲ ಗಂಗಾಧರಯ್ಯ, ಎ6 ಶಿವಮೂರ್ತಿ ಸ್ವಾಮಿ ಸಹಾಯಕ ಮಹಾಲಿಂಗ, ಎ7 ಅಡುಗೆಭಟ್ಟ ಕರಿಬಸಪ್ಪ ವಿರುದ್ದ ಪ್ರಕರಣ ದಾಖಲಾಗಿದ್ದು, ಸಂಪೂರ್ಣ ತನಿಖೆ ನಡೆಸಿದ ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಹಾಗೂ ಚಿತ್ರದುರ್ಗ ಡಿವೈಎಸ್ಪಿ ಅನಿಲ್ ಕುಮಾರ್ ನೇತೃತ್ವದ ತಂಡವು 2022ರ ಅ.27 ರಂದು 694 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿತ್ತು. ಅದರಲ್ಲಿ 347 ಪುಟಗಳ ಎ ಮತ್ತು ಬಿ ಎಂದು ಆರೋಪಪಟ್ಟಿ ಸಲ್ಲಿಸಿದ್ದರು.
2ನೇ ಪೋಕ್ಸೋ ಕೇಸಿನಲ್ಲಿ ಜಾಮೀನು ಪಡೆಯದ ಹಿನ್ನೆಲೆಯಲ್ಲಿ ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹಿನ್ನೆಲೆ ಪುನಃ ನ.20ರಂದು ಮಧ್ಯಾಹ್ನ ಶಿವಮೂರ್ತಿ ಸ್ವಾಮಿ ಮತ್ತೆ ಬಂಧನಕ್ಕೊಳಗಾದರು. ಬಳಿಕ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಆಗ ನ.20 ಸಂಜೆ ವೇಳೆಗೆ ಹೈಕೋರ್ಟ್ ಸೂಚನೆ ಮೇರೆಗೆ ಬಿಡುಗಡೆಗೊಂಡಿದ್ದರು.
ಸಂತ್ರಸ್ತೆಯರು ಶಿವಮೂರ್ತಿ ಸ್ವಾಮಿ ಜಾಮೀನು ರದ್ದತಿ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋದ ಹಿನ್ನೆಲೆಯಲ್ಲಿ ಮುಖ್ಯ ಸಾಕ್ಷ ವಿಚಾರಣೆ ಪೂರ್ಣ ಆಗುವವರೆಗೆ ಶಿವಮೂರ್ತಿ ಸ್ವಾಮಿ ಬಂಧನದಲ್ಲಿಡುವಂತೆ ಸುಪ್ರಿಂ ಕೋರ್ಟ್ ಆದೇಶಿಸಿತ್ತು. ಹೀಗಾಗಿ 2024ರ ಮೇ.27 ರಂದು ಕೋರ್ಟ್ ಎದುರು ಶರಣಾದ ಶಿವಮೂರ್ತಿ ಸ್ವಾಮಿಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್ ಆದೇಶಿಸಿತ್ತು. ಬಳಿಕ ಸಂತ್ರಸ್ತೆಯರಿಬ್ಬರು ಸೇರಿದಂತೆ 13 ಜನರ ಸಾಕ್ಷಿ ವಿಚಾರಣೆ ಅಂತ್ಯವಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಶಿವಮೂರ್ತಿ ಸ್ವಾಮಿ ಬಿಡುಗಡೆಗೊಂಡಿದ್ದರು.





