ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನವನ್ನು ವಿರೋಧಿಸಿ ಸುಮಾರು 12 ಸಂಘಟನೆಗಳು ತಾವೂ ಬೀದಿಗಿಳಿಯುವುದಾಗಿ ಅನುಮತಿ ಕೋರಿದ ಬೆನ್ನಲ್ಲೇ ಸಂಘಟನೆಗಳ ನಡುವೆ ಶಾಂತಿಸಭೆ ನಡೆಸುವಂತೆ ಕಲಬುರಗಿ ಹೈಕೋರ್ಟ್ ಜಿಲ್ಲಾಡಳಿತಕ್ಕೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಶಾಂತಿಸಭೆ ಆರಂಭವಾಗಿದೆ.
ಆರೆಸ್ಸೆಸ್ ತನ್ನ ಶತಮಾನೋತ್ಸವದ ಅಂಗವಾಗಿ ಅಕ್ಟೋಬರ್ 19ರಂದು ಆಯೋಜಿಸಿದ್ದ ಪಥಸಂಚಲನ ನಡೆಸಲು ಚಿತ್ತಾಪುರ ತಹಶೀಲ್ದಾರ್ ಅನುಮತಿ ನಿರಾಕರಿಸಿದ ನಂತರ ಆರೆಸ್ಸೆಸ್‌ನ ಕಲಬುರಗಿ ವಿಭಾಗದ ಮುಖ್ಯಸ್ಥ ಅಶೋಕ್ ಪಾಟೀಲ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನಂತರ ಹೈಕೋರ್ಟ್ ನವೆಂಬರ್ 2ರಂದು ಪಥಸಂಚಲನ ನಡೆಸುವಂತೆ ಅನುಮತಿ ಪಡೆಯಲು ಸಂಘಟನೆಗೆ ಅವಕಾಶ ನೀಡಿತ್ತು.
ಈ ಹಿನ್ನೆಲೆಯಲ್ಲಿ ಭೀಮ್ ಆರ್ಮಿ ಮತ್ತು ದಲಿತ್ ಪ್ಯಾಂಥರ್ಸ್ ಕೂಡ ಅದೇ ದಿನ ಅಂದರೆ ನವೆಂಬರ್ 2ರಂದು ರ‍್ಯಾಲಿಗಳನ್ನು ಆಯೋಜಿಸಲು ಅನುಮತಿ ಕೋರಿ ಅಕ್ಟೋಬರ್ 21ರ ಮಂಗಳವಾರ ಕಲಬುರಗಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದವು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಕಿತ್ತೂರು ರಾಣಿ ಚನ್ನಮ್ಮನ ಪುತ್ಥಳಿ ಲೋಕಾರ್ಪಣೆ
”ಆರೆಸ್ಸೆಸ್‌ನ ಕಾರ್ಯಗಳು ಮತ್ತು ಆಲೋಚನೆಗಳು ಯುವಜನರು ಹಾಗೂ ಮಕ್ಕಳ ಮನಸ್ಸಿನ ಮೇಲೆ ನಕಾರಾತ್ಮಕ ಪ್ರಭಾವ ಬೀರಬಹುದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ ದಲಿತ ಪ್ಯಾಂಥರ್ಸ್, ಒಂದು ಕೈಯಲ್ಲಿ ಸಂವಿಧಾನದ ಪೀಠಿಕೆ, ಇನ್ನೊಂದು ಕೈಯಲ್ಲಿ ನೀಲಿ ಧ್ವಜ ಹಿಡಿದುಕೊಂಡು ರ‍್ಯಾಲಿ ನಡೆಸಲು ಅನುಮತಿ ಕೋರಿತ್ತು. ಇದರ ನಡುವೆ ಭೀಮ್ ಆರ್ಮಿ ಕೂಡ ತ್ರಿವರ್ಣ ಧ್ವಜ, ಬೌದ್ಧ ಧರ್ಮದ ಪಂಚಶೀಲ ಧ್ವಜ ಮತ್ತು ಬಿದಿರಿನ ಕೋಲು ಹಿಡಿದು ರ‍್ಯಾಲಿ ನಡೆಸಲು ಅನುಮತಿ ಕೇಳಿತ್ತು. ಇದಾದ ನಂತರ ಈವರೆಗೆ ಸುಮಾರು 12 ಸಂಘಟನೆಗಳು ನವೆಂಬರ್ 2ರಂದು ಪಥಸಂಚಲನ ನಡೆಸಲು ಅನುಮತಿ ಕೋರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿವೆ.





