ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನವೆಂಬರ್ 2ರಂದು ʼರೂಟ್ ಮಾರ್ಚ್(ರ‍್ಯಾಲಿ)ʼ ನಡೆಸಲು ಆರೆಸ್ಸೆಸ್ ಅನುಮತಿ ಕೋರಿದ ಬಳಿಕ ಭೀಮ್ ಆರ್ಮಿ ಮತ್ತು ದಲಿತ್ ಪ್ಯಾಂಥರ್ಸ್ ಕೂಡ ಅದೇ ದಿನ ರ‍್ಯಾಲಿಗಳನ್ನು ಆಯೋಜಿಸಲು ಅನುಮತಿ ಕೋರಿ ಮಂಗಳವಾರ ಮನವಿ ಸಲ್ಲಿಸಿದ್ದು, ಒಂದೇ ದಿನ ತ್ರಿಕೋನ ರ‍್ಯಾಲಿ ನಡೆಯುವ ಸಾಧ್ಯತೆ ಇದೆ.
ಆರೆಸ್ಸೆಸ್ ತನ್ನ ಶತಮಾನೋತ್ಸವದ ಅಂಗವಾಗಿ ಅಕ್ಟೋಬರ್ 19ರಂದು ಆಯೋಜಿಸಿದ್ದ ರೂಟ್ ಮಾರ್ಚ್‌ಗೆ ಚಿತ್ತಾಪುರ ತಹಶೀಲ್ದಾರ್ ಅನುಮತಿ ನಿರಾಕರಿಸಿದ ಬೆನ್ನಲ್ಲೇ ಇದು ಸಂಭವಿಸಿದೆ. ಪ್ರಾಸಂಗಿಕವಾಗಿ, ದಲಿತ ಪ್ಯಾಂಥರ್ಸ್ ಮತ್ತು ಭೀಮ್ ಆರ್ಮಿ ಕೂಡ ಅಂದೇ ರ‍್ಯಾಲಿಗಳನ್ನು ಯೋಜಿಸಿದ್ದವು. ಈ ಸಂಘಟನೆಗಳಿಗೂ ಕೂಡ ಅನುಮತಿ ನಿರಾಕರಿಸಲಾಗಿದೆ.
ಆರೆಸ್ಸೆಸ್‌ನ ಕಲಬುರಗಿ ವಿಭಾಗದ ಮುಖ್ಯಸ್ಥ ಅಶೋಕ್ ಪಾಟೀಲ್ ತಮ್ಮ ರೂಟ್ ಮಾರ್ಚ್‌ಗೆ ಅನುಮತಿ ನಿರಾಕರಿಸಿದ ನಂತರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ನಂತರ ಹೈಕೋರ್ಟ್ ನವೆಂಬರ್ 2ರಂದು ರೂಟ್ ಮಾರ್ಚ್ ನಡೆಸಲು ಅನುಮತಿ ಪಡೆಯಲು ಸಂಘಟನೆಗೆ ಅವಕಾಶ ನೀಡಿದೆ.
ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ, “ಆರೆಸ್ಸೆಸ್‌ನ ಕಾರ್ಯಗಳು ಮತ್ತು ಆಲೋಚನೆಗಳು ಯುವಜನರು ಹಾಗೂ ಮಕ್ಕಳ ಮನಸ್ಸಿನ ಮೇಲೆ ನಕಾರಾತ್ಮಕ ಪ್ರಭಾವ ಬೀರಬಹುದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ ದಲಿತ ಪ್ಯಾಂಥರ್ಸ್, ಒಂದು ಕೈಯಲ್ಲಿ ಸಂವಿಧಾನದ ಪೀಠಿಕೆ, ಇನ್ನೊಂದು ಕೈಯಲ್ಲಿ ನೀಲಿ ಧ್ವಜ ಹಿಡಿದುಕೊಂಡು ರ‍್ಯಾಲಿ ನಡೆಸಲು ಅನುಮತಿ ಕೋರಿದೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದೆ: ಭುವನೇಶ ಪಾಟೀಲ
“ಆರೆಸ್ಸೆಸ್‌ನ ರೂಟ್ ಮಾರ್ಚ್‌ಗೆ ಅನುಮತಿ ನೀಡಬಾರದು. ಅದಕ್ಕೆ ಅವಕಾಶ ನೀಡಿದರೆ, ನಮ್ಮ ಸಂಘಟನೆಯು ಕೈಯಲ್ಲಿ ಲಾಠಿ ಮತ್ತು ಸಂವಿಧಾನದ ಪ್ರತಿಗಳನ್ನು ಹಿಡಿದುಕೊಂಡು ರ‍್ಯಾಲಿ ನಡೆಸುವುದು ಅನಿವಾರ್ಯವಾಗುತ್ತದೆ” ಎಂದು ದಲಿತ್ ಪ್ಯಾಂಥರ್ಸ್ ಅರ್ಜಿಯಲ್ಲಿ ತಿಳಿಸಿದೆ.
ಇದರ ನಡುವೆ ಭೀಮ್ ಆರ್ಮಿ ಕೂಡ ತ್ರಿವರ್ಣ ಧ್ವಜ, ಬೌದ್ಧ ಧರ್ಮದ ಪಂಚಶೀಲ ಧ್ವಜ ಮತ್ತು ಬಿದಿರಿನ ಕೋಲು ಹಿಡಿದು ರ‍್ಯಾಲಿ ನಡೆಸಲು ಅನುಮತಿ ಕೇಳಿದೆ.





